Monday, September 21, 2026
Monday, September 21, 2026

ಪರ್ತಗಾಳಿ ಶ್ರೀರಾಮನ ಕಂಚಿನ ಪ್ರತಿಮೆಗೆ ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ ಗರಿ

ಪರ್ತಗಾಳಿ ಶ್ರೀರಾಮನ ಕಂಚಿನ ಪ್ರತಿಮೆಗೆ ಇಂಡಿಯಾ, ಏಷ್ಯಾ ಬುಕ್ ಆಫ್ ರೆಕಾರ್ಡ್ ಗರಿ

Date:

ಗೋವಾ, ಆ.30: ನಮ್ಮ ಪೀಠಾಧಿಪತ್ಯಕ್ಕೆ ಹಿರಿಯ ಗುರುಗಳ ಸಂಪೂರ್ಣ ಕೃಪೆ, ಆಶೀರ್ವಾದ ಹಾಗೂ ಮಾರ್ಗದರ್ಶನವೇ ಕಾರಣ. ಪರ್ತಗಾಳಿಯ ಶ್ರೀರಾಮ ದೇವರ ಭವ್ಯ ಕಂಚಿನ ಪ್ರತಿಮೆಗೆ ಲಭಿಸಿರುವ ದಾಖಲೆ ಪ್ರಮಾಣಪತ್ರಗಳನ್ನು ನಮ್ಮ ಹಿರಿಯ ಗುರುಗಳಿಗೆ ಸಮರ್ಪಿಸುತ್ತೇವೆ. ಈ ಗೌರವ ಅವರ ಪಾದಸ್ಪರ್ಶಕ್ಕೆ ಸೇರಬೇಕು ಎಂದು ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿ ಹೇಳಿದರು.

ಗೋವಾದ ಕಾಣಕೋಣದ ಪರ್ತಗಾಳಿಯ ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಜೀವೋತ್ತಮ ಮಠದ ಆದರ್ಶ ಧಾಮದಲ್ಲಿ ಸ್ಥಾಪಿಸಲಾಗಿರುವ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಕಂಚಿನ ಪ್ರತಿಮೆಯು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ಅತ್ಯಂತ ಎತ್ತರದ ಕಂಚಿನ ಪ್ರತಿಮೆ ಎಂಬ ದಾಖಲೆಗೆ ಪಾತ್ರವಾಗಿದೆ.

ಶ್ರೀ ವಿದ್ಯಾಧಿರಾಜ ತೀರ್ಥ ಸ್ವಾಮೀಜಿಯವರ 82ನೇ ಜನ್ಮತಿಥಿಯ ಅಂಗವಾಗಿ ಆ.27ರಂದು ನಡೆದ ಕಾರ್ಯಕ್ರಮದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನ ಅಧಿಕೃತ ತೀರ್ಪುಗಾರ್ತಿ ಡಾ. ಚಿತ್ರಾ ಜೈನ್ ಅವರು ದಾಖಲೆ ಪ್ರಮಾಣಪತ್ರಗಳನ್ನು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು.

ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದ ವಡೇರ ಸ್ವಾಮೀಜಿಯವರ ದಿವ್ಯ ಮಾರ್ಗದರ್ಶನದಲ್ಲಿ ನಿರ್ಮಾಣಗೊಂಡಿರುವ ಈ ಭವ್ಯ ಪ್ರತಿಮೆಯು ಪೀಠದಿಂದ 78.74 ಅಡಿ (25 ಮೀಟರ್) ಎತ್ತರ ಹೊಂದಿದೆ.

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 2025ರ ನ.28 ರಂದು ಪ್ರತಿಮೆಯನ್ನು ಲೋಕಾರ್ಪಣೆಗೊಳಿಸಿದ್ದರು. ಖ್ಯಾತ ಶಿಲ್ಪಿ ಪದ್ಮಭೂಷಣ ದಿವಂಗತ ರಾಮ್ ಸುತಾರ್ ಹಾಗೂ ಅವರ ಪುತ್ರ ಅನಿಲ್ ಸುತಾರ್ ಅವರು ಪ್ರತಿಮೆಯನ್ನು ರೂಪಿಸಿದ್ದಾರೆ.

ಈ ಸಂದರ್ಭದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಹಿರಿಯ ಗುರುಗಳು ಸಮಾಜದ ಒಳಿತಿಗಾಗಿ ತಮ್ಮ ಜೀವನವನ್ನೇ ಸಮರ್ಪಿಸಿ ಅನೇಕ ಶಾಖಾ ಮಠಗಳನ್ನು ಸ್ಥಾಪಿಸುವುದರ ಜತೆಗೆ ಮಠ-ಮಂದಿರಗಳ ಜೀರ್ಣೋದ್ಧಾರ, ಧಾರ್ಮಿಕ ಯಾತ್ರೆಗಳು, ವಿವಿಧ ಧಾರ್ಮಿಕ ಆಚರಣೆಗಳು ಹಾಗೂ ಸಮಾಜಮುಖಿ ಕಾರ್ಯಗಳನ್ನು ಕೈಗೊಂಡಿದ್ದರು ಎಂದು ಸ್ಮರಿಸಿದರು.

ಗುರುಗಳು ಮಾಡಿದ ಸತ್ಕಾರ್ಯಗಳನ್ನು ತಿಳಿದುಕೊಂಡು, ಅವುಗಳ ಬಗ್ಗೆ ಚಿಂತಿಸುವುದರಿಂದ ಮನಸ್ಸು ಶುದ್ಧಿಯಾಗುತ್ತದೆ. ಅವರ ಆದರ್ಶಗಳನ್ನು ಅರಿತು ಇತರರಿಗೂ ತಿಳಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ. ಹಿರಿಯರು ಹಾಗೂ ಗುರುಗಳ ಮಾತುಗಳನ್ನು ಪಾಲಿಸುವ ಮೂಲಕ ಜೀವನದಲ್ಲಿ ಸನ್ಮಾರ್ಗವನ್ನು ಅಳವಡಿಸಿಕೊಂಡು ಉತ್ತಮ ಸ್ಥಾನವನ್ನು ಪಡೆಯಲು ಸಾಧ್ಯ ಎಂದು ಶ್ರೀಗಳು ಹೇಳಿದರು.

ಗುರುಗಳ ಜೀವನಾದರ್ಶಗಳು ಸಮಾಜದ ಒಳಿತಿಗಾಗಿ ಸತ್ಕಾರ್ಯಗಳನ್ನು ಕೈಗೊಳ್ಳಲು ನಮಗೆ ಪ್ರೇರಣೆ ನೀಡುತ್ತವೆ. ಗುರುಗಳ ಆಶೀರ್ವಾದವೇ ನಮ್ಮ ಪ್ರತಿಯೊಂದು ಕಾರ್ಯಕ್ಕೂ ಶಕ್ತಿ ಮತ್ತು ಪ್ರೇರಣೆಯಾಗಿದೆ ಎಂದು ಅವರು ತಿಳಿಸಿದರು.

ಇದೇ ವೇಳೆ ಪರ್ತಗಾಳಿ ಮಠದ 550ನೇ ವರ್ಷಾಚರಣೆಯ ಅಂಗವಾಗಿ 550 ಕೋಟಿ ಶ್ರೀರಾಮನಾಮ ಜಪ ಸಂಪನ್ನಗೊಳಿಸಿದ್ದಕ್ಕಾಗಿ ಜಿಎಸ್‌ಬಿ ಸಮುದಾಯದ ಹೆಸರಿನಲ್ಲಿ 2025ರ ನ.30ರಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್ ಹಾಗೂ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲೆ ನಿರ್ಮಿಸಿರುವುದನ್ನೂ ಸ್ಮರಿಸಲಾಯಿತು.

ಕಾರ್ಯಕ್ರಮದಲ್ಲಿ ವಿಠ್ಠಲ ಮಾಸ್ತರ ಗೌರವ ಪುರಸ್ಕಾರವನ್ನು ರಾಮಚಂದ್ರ ಪದ್ಮನಾಭ ಭಟ್ಟ ಗಾಂವ್ಕರ ಅವರಿಗೆ ನೀಡಿ ಗೌರವಿಸಲಾಯಿತು. ವಿವಿಧ ಸ್ಥಳಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳನ್ನೂ ಸನ್ಮಾನಿಸಲಾಯಿತು.

ಮಠದ ಕೇಂದ್ರ ಸಮಿತಿ ಅಧ್ಯಕ್ಷ ಶ್ರೀನಿವಾಸ್ ದೆಂಪೊ, ಗೋವಾ ಲೋಕೋಪಯೋಗಿ ಸಚಿವ ದಿಗಂಬರ ಕಾಮತ, ಚಾತುರ್ಮಾಸ್ಯ ವ್ರತ ಸಮಿತಿ ಅಧ್ಯಕ್ಷ ಅನಿಲ್ ಪೈ ಹಾಗೂ ಸಮಿತಿ ಸದಸ್ಯರು, ಜೀವೋತ್ತಮ ವಿದ್ಯಾಪೀಠದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅಪಾರ ಸಂಖ್ಯೆಯ ಶಿಷ್ಯವರ್ಗ, ಭಕ್ತಾದಿಗಳು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಭವಿಷ್ಯದ ಸಮಾಜವನ್ನು ರೂಪಿಸುವ ವಿದ್ಯಾರ್ಥಿ ಸಂಘಗಳ ಅಗತ್ಯವಿದೆ: ಶ್ರೀವರ್ಮ ಅಜ್ರಿ ಎಂ

ಹಿರಿಯಡಕ, ಸೆ.21: ಶೈಕ್ಷಣಿಕ ಉನ್ನತಿಯೊಂದಿಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣಗಳನ್ನೂ ಬೆಳೆಸುವ ಕಾಲೇಜು...

ಜನಸಾಮಾನ್ಯರ ಮನೆ ಬಾಗಿಲಿಗೆ ಸರಕಾರದ ಸೌಲಭ್ಯ: ಜಿಲ್ಲಾ ಉಸ್ತುವಾರಿ ಸಚಿವ ರಿಜ್ವಾನ್ ಅರ್ಷದ್

ಉಡುಪಿ, ಸೆ.21: ನಮ್ಮ ಸರ್ಕಾರ ಜನಸಾಮಾನ್ಯರ ಕೆಲಸ ಕಾರ್ಯಗಳನ್ನು ಇದ್ದಲ್ಲಿಯೇ ಮಾಡಿಕೊಡಲು...

ತ್ರಿಶಾ ವಿದ್ಯಾ ಕಾಲೇಜು: ಡೇಟಾ ಅನಾಲಿಟಿಕ್ಸ್ ಮತ್ತು ಐಒಟಿ ವೃತ್ತಿಪರ ಕೋರ್ಸ್ ಕುರಿತು ಕಾರ್ಯಕ್ರಮ

ಕಟಪಾಡಿ, ಸೆ.21: ಕಾಟಪಾಡಿಯ ತ್ರಿಶಾ ವಿದ್ಯಾ ಕಾಲೇಜ್ ಆಫ್ ಕಾಮರ್ಸ್ ಅಂಡ್...
error: Content is protected !!