“ದೇವಾಲಯಗಳ ನಗರಿ” ಎಂದೇ ಪ್ರಖ್ಯಾತಿಯನ್ನು ಪಡೆದಿರುವ ಉಡುಪಿ ಜಿಲ್ಲೆಯಿಂದ ದಕ್ಷಿಣಕ್ಕೆ ಸುಮಾರು 20ಕಿ.ಮೀ ದೂರದಲ್ಲಿ ನಿಸರ್ಗದ ಮಡಿಲಲ್ಲಿರುವ ಗ್ರಾಮವೇ “ಪಳ್ಳಿ”. ಕಾರ್ಕಳ ತಾಲ್ಲೂಕಿನ ಪಳ್ಳಿ ಗ್ರಾಮಕ್ಕೆ ತನ್ನದೆಯಾದ ಸ್ಥಳ ಪುರಾಣವಿದ್ದು, ಹಿಂದೊಮ್ಮೆ ಒಬ್ಬ ರಾಜನು ತನ್ನ ರಾಜ್ಯವನ್ನು ಆತನ ಎರಡು ಹೆಣ್ಣು ಮಕ್ಕಳಿಗೆ ಆಡಳಿತ ದೃಷ್ಟಿಯಿಂದ ಎರಡು ಭಾಗಗಳಾಗಿ ವಿಂಗಡಣೆ ಮಾಡಿ ಆಳ್ವಿಕೆಗೆ ಕೊಡುತ್ತಾನೆ. ಈ ಹೆಣ್ಣು ಮಕ್ಕಳು ಅಕ್ಕ ತಂಗಿಯಾಗಿದ್ದು ಅಕ್ಕ ಎಂದರೆ ತುಳುವಿನಲ್ಲಿ ಪಲಿ / ಮಲ್ಲಾಲ್ ಅಥವಾ ಪಲ್ದಿ ಎಂಬರ್ಥವಿದ್ದರೆ ತಂಗಿ ಎಂದರೆ ಎಲ್ಯಾಲ್ ಎಂದು ಕರೆಯುವುದು ವಾಡಿಕೆ. ಹಾಗಾಗಿ ಅಕ್ಕ ಆಳುತ್ತಿದ್ದ ಊರಿಗೆ ಪಲಿ ಎಂದು, ಕಾಲಾಂತರದಲ್ಲಿ ಇದುವೇ ‘ಪಳ್ಳಿ’ ಎಂದು ಕರೆಯಲ್ಪಟ್ಟಿತು. ಹಾಗೆಯೇ ತಂಗಿ ಆಳ್ವಿಕೆ ಮಾಡಿದ ಪ್ರದೇಶವನ್ನು ಎಲಿಯಾಳ (ಪ್ರಸ್ತುತ ಕಾರ್ಕಳ ತಾಲ್ಲೂಕಿನ ರಂಗನಪಲ್ಕೆಯಲ್ಲಿರುವ ಒಂದು ಪ್ರದೇಶ) ಎಂದು ಕರೆಯಲಾಯಿತು.

ಪ್ರತೀ ಗ್ರಾಮದ ರಕ್ಷಣೆಗಾಗಿ ಪೂರ್ವಜರು ಗ್ರಾಮದೇವರನ್ನು ಸ್ಥಾಪಿಸಿರುವುದು ಅವರಿಗೆ ದೈವತ್ವದ ಮೇಲಿರುವ ನಂಬಿಕೆಯನ್ನು ಪ್ರತಿನಿಧಿಸುತ್ತದೆ. ಅದೇ ರೀತಿ ಪಳ್ಳಿ ಗ್ರಾಮದಲ್ಲಿ ಗ್ರಾಮದೇವರಾಗಿ ಶ್ರೀ ಮಹಾಲಿಂಗೇಶ್ವರ ದೇವರನ್ನು ಪೂರ್ವಜರು ಸ್ಥಾಪಿಸಿರುವುದನ್ನು ಕಾಣಬಹುದು. ಕೇವಲ ಧಾರ್ಮಿಕ ತಾಣವಾಗಿ ಮಾತ್ರವಲ್ಲದೇ ನಮ್ಮ ಪೂರ್ವಜರ ಕಲಾ ಪ್ರಜ್ಞೆ ಹಾಗೂ ಭಕ್ತಿಯ ಸಂಕೇತವಾಗಿ ಈ ದೇವಾಲಯ ನೆಲೆ ನಿಂತಿದೆ. ನಿಸರ್ಗದ ಮಡಿಲಲ್ಲಿರುವ ಈ ದೇವಾಲಯವು ಪಾಪನಾಶಿನಿ ಎಂಬ ಪುರಾಣ ಪ್ರಸಿದ್ಧ ನದಿಯ ದಡದಲ್ಲಿ ನೆಲೆಯಾಗಿದ್ದು, ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಮತ್ತು ವಿಶೇಷ ಧಾರ್ಮಿಕ ಆಚರಣೆಗಳಿಂದ ಭಕ್ತರ, ಸಂಶೋಧಕರ ಹಾಗೂ ಇತಿಹಾಸಕಾರರ ಆಕರ್ಶಣೆಯ ಕೇಂದ್ರವಾಗಿದೆ. ಈ ದೇವಾಲಯವು ದಾಖಲೆಗಳ ಪ್ರಕಾರ 1974 ಮತ್ತು 2000 ಇಸವಿಯಲ್ಲಿ ಜೀರ್ಣೋದ್ಧಾರಗೊಂಡಿದ್ದು ದೃಢಪಡುತ್ತದೆ. ಪ್ರಸ್ತುತ ದೇವಾಲಯವು ಸರಿಪೂರ್ಣವಾಗಿ ಶಿಲಾಮಯವಾಗಿ ನವೀಕರಣಗೊಂಡಿರುತ್ತದೆ.
ದೇವಾಲಯದ ಕಲೆ ಮತ್ತು ವಾಸ್ತುಶಿಲ್ಪ: ಸಂಪೂರ್ಣವಾಗಿ ಶಿಲೆಯಲ್ಲಿ ನಿರ್ಮಾಣ ಮಾಡಲ್ಪಟ್ಟ ಈ ದೇವಾಲಯದ ಪ್ರಾಚೀನ ಅವಶೇಷಗಳಾದ ಕಂಬದ ಬಿಡಿ ಭಾಗಗಳು, ಕಲ್ಲಿನ ಹಾಸುಗಳು ದೇವಾಲಯದ ಹೊರಭಾಗದಲ್ಲಿ ಕಾಣಸಿಗುತ್ತದೆ. ಈ ಅವಶೇಷಗಳನ್ನು ಗಮನಿಸಿದಾಗ ಈ ದೇವಾಲಯವು ಸರಿಸುಮಾರು 15ನೇ ಶತಮಾನಕ್ಕೆ ಸೇರಿರಬಹುದೆಂದು ಅಥವಾ ಜೀರ್ಣೋದ್ಧಾರವಾಗಿರಬಹುದೆಂದು ಅಂದಾಜಿಸಬಹುದು. ದೇವಾಲಯದ ಒಳಾಂಗಣದಲ್ಲಿ ಪರಿವಾರ ದೇವರಾದ ಗಣಪತಿ ಗುಡಿಯಿದ್ದು, ಹೊರ ಪ್ರಾಕಾರದಲ್ಲಿ ನಾಗಬನ, ತುಳುನಾಡಿನ ಸ್ತ್ರೀ ಶಕ್ತಿಗಳಾದ ಅಬ್ಬಗ-ದಾರಗರ ಗುಡಿ, ನಂದಿಗೋಣ ಗುಡಿ, ಕ್ಷೇತ್ರಪಾಲ, ಪಲ್ಲಕ್ಕಿ ಕೊಠಡಿ, ದಾಸ್ತಾನ ಕೊಠಡಿ, ಅಶ್ವತ್ಥಕಟ್ಟೆ ಇವುಗಳನ್ನು ಕಾಣಬಹುದು.
ದೇವಾಲಯವನ್ನು ಪ್ರವೇಶಿಸುವಾಗ ಗರ್ಭಗುಡಿಗೆ ಅಭಿಮುಖವಾಗಿ ದೇವಾಲಯದ ಹೊರಭಾಗದಲ್ಲಿ ಪದ್ಮ ಕಲ್ಲನ್ನು ಕಾಣಬಹುದು. ಹಾಗೆಯೇ ಬಲಪಾರ್ಶ್ವದಲ್ಲಿ ಇತ್ತೀಚೆಗೆ ನಿರ್ಮಾಣ ಮಾಡಿದ ಕ್ಷೇತ್ರಪಾಲನನ್ನು ಕಾಣಬಹುದು. ಕ್ಷೇತ್ರಪಾಲನ ದಕ್ಷಿಣ ದಿಕ್ಕಿನಲ್ಲಿ ಪಲ್ಲಕ್ಕಿಯನ್ನು ಇಡುವ ಕೊಠಡಿಯಿದ್ದು ಇದರಲ್ಲಿ ಪಲ್ಲಕ್ಕಿಯನ್ನು ನೇತು ಹಾಕಲಾಗಿದೆ. ಪಲ್ಲಕ್ಕಿ ಕೊಠಡಿಯಿಂದ ಮುಂದೆ ಸಾಗಿದಂತೆ ನಂದಿಗೋಣ ಗುಡಿಯನ್ನು ಕಾಣಬಹುದು. ಇಲ್ಲಿ ನಂದಿ ಮತ್ತು ವ್ಯಾಘ್ರದ (ಹುಲಿ) ಕಾಷ್ಟ ಶಿಲ್ಪಗಳಿದ್ದು, ನಂದಿಯು ನಿಂತ ಭಂಗಿಯಲ್ಲಿದ್ದರೆ ವ್ಯಾಘ್ರವು ತನ್ನ ಕಾಲುಗಳನ್ನು ಮುಂದಕ್ಕೆ ಇಟ್ಟು ಕುಳಿತಂತೆ ಕಲ್ಲಿನ ಪೀಠದ ಮೇಲೆ ನಿರ್ಮಾಣ ಮಾಡಲಾಗಿದೆ. ನಂದಿಯ ದಂತಪಂಕ್ತಿ ಹಾಗೂ ಕಂಠಪಟ್ಟಿಯನ್ನು ತೋರಿಸಲಾಗಿದ್ದು ಇವುಗಳ ಆರಾಧನೆಯನ್ನು ಈ ದೇವಾಲಯದಲ್ಲಿ ಕಾಣಬಹುದು. ಮುಖ್ಯವಾಗಿ ನಂದಿಗೋಣದ ಗುಡಿಯನ್ನು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯ ಮತ್ತು ಪಳ್ಳಿಯ ಈ ದೇವಾಲಯದಲ್ಲಿ ಕಾಣಬಹುದು. ಹಾಗಾಗಿ ಈ ದೇವಾಲಯಕ್ಕೂ ನಂದಳಿಕೆ ದೇವಾಲಯಕ್ಕೂ ಅವಿನಾಭಾವ ಸಂಬಂಧವಿದೆಯೆಂದು ಹೇಳಬದು.
ಅಬ್ಬಗ-ದಾರಗ ಗುಡಿ: ಈ ಗುಡಿಯನ್ನು ಇತ್ತೀಚೆಗೆ ನಿರ್ಮಾಣ ಮಾಡಿದ್ದು ಇಲ್ಲಿ ತುಳುನಾಡಿನ ಕಾರ್ಣಿಕದ ಸ್ತ್ರೀ ಶಕ್ತಿಗಳಾದ ಅಬ್ಬಗ-ದಾರಗರ ಹಿತ್ತಾಳೆಯ ಮೂರ್ತಿಗಳಿದೆ. ಮಕುಟಧಾರಿ ಹಾಗೂ ಪ್ರಭಾವಳಿಯನ್ನು ಹೊಂದಿದ್ದ ದ್ವಿಭುಜಧಾರಿಗಳಾಗಿರುವ ಈ ಮೂರ್ತಿಗಳು ಆಭರಣ ಸಹಿತ ವಸ್ತ್ರವಿನ್ಯಾಸವನ್ನು ಹೊಂದಿದೆ. ಮಾತ್ರವಲ್ಲದೇ ತಮ್ಮ ಕೈಗಳಲ್ಲಿ ಪೂಜಾ ಪರಿಕರಗಳನ್ನು ಹಿಡಿದಿರುವಂತೆ ನಿರ್ಮಾಣ ಮಾಡಲಾಗಿದೆ. ಹಿಂದೊಮ್ಮೆ ಈ ಕ್ಷೇತ್ರವು ಅಬ್ಬಗ-ದಾರಗರ ಆಲಡೆ ಕ್ಷೇತ್ರವಾಗಿತ್ತು ಎಂಬ ಪ್ರತೀತಿಯಿದೆ.
ನಾಗಬನ: ಅಬ್ಬಗ-ದಾರಗ ಗುಡಿಯ ಪಕ್ಕದಲ್ಲಿಯೇ ನಾಗಬನವಿದ್ದು, ಇಲ್ಲಿ ವಿವಿಧ ರೀತಿಯ ನಾಗನ ಕಲ್ಲುಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಇದರಲ್ಲಿ ಮುಖ್ಯವಾಗಿ ತಂಬೂರಿ ನಾಗನ ಶಿಲ್ಪವಿದ್ದು, ಇದನ್ನು ಪೀಠದಲ್ಲಿ ಸ್ಥಾಪಿಸಿ ಪೂಜಿಸಲಾಗುತ್ತಿದೆ. ಮನುಷ್ಯ ದೇಹದ ಶಿರದ ಮೇಲೆ ಹಾವಿನ ಹೆಡೆಯನ್ನು ಹೊಂದಿರುವ ಈ ತಂಬೂರಿ ನಾಗ ಶಿಲ್ಪವು ತನ್ನ ಕೈಗಳಲ್ಲಿ ತಂಬೂರಿಯನ್ನು ಹಿಡಿದಿರುವಂತೆ ತೋರಿಸಲಾಗಿದೆ. ತಂಬೂರಿ ನಾಗನ ಪಕ್ಕದಲ್ಲಿ ಮನುಷ್ಯ ಮತ್ತು ಹಾವಿನ ದೇಹ ರಚನೆಯುಳ್ಳ ಪಾಲಕರ ಕೆತ್ತನೆಯನ್ನು ಮಾಡಲಾಗಿದೆ. ಇದೇ ಮಾದರಿಯ ನಾಗಶಿಲ್ಪವು ಕಾರ್ಕಳ ತಾಲೂಕಿನ ಕರ್ವಾಸೆ ಮತ್ತು ರೆಂಜಾಳ ಪರಿಸರದಲ್ಲಿ ಪತ್ತೆಯಾಗಿದ್ದು, ಇದು 15-16ನೇ ಶತಮಾನಕ್ಕೆ ಸೇರಿದೆ ಎಂದು ಪುರಾತತ್ತ್ವ ಸಂಶೋಧಕರು ಅಭಿಪ್ರಾಯ ವ್ಯಕ್ತಪಡಿಸಿದ್ದು ಹಾಗಾಗಿ ಈ ನಾಗಶಿಲ್ಪವು ಕೂಡಾ ಇದೇ ಕಾಲಘಟ್ಟಕ್ಕೆ ಸೇರಿದೆಯೆಂದು ವ್ಯಕ್ತಪಡಿಸಲಾಗುತ್ತದೆ. ಏಕೆಂದರೆ ಕಾರ್ಕಳ ಪ್ರದೇಶವು ಭೈರವರಸರ ಆಳ್ವಿಕೆಗೆ ಒಳಪಟ್ಟಿದ್ದು ಪಳ್ಳಿಯು ಕೂಡ ಇದರಿಂದ ಹೊರತಾಗಿಲ್ಲ ಎಂದು ಹೇಳಬಹುದು. ಏಕೆಂದರೆ ಇಲ್ಲಿಯೇ ಪಕ್ಕದಲ್ಲಿ (ನಿಂಜೂರು ಪ್ರದೇಶದಲ್ಲಿ) 15 -16 ಶತಮಾನಕ್ಕೆ ಸಂಬಂಧಪಟ್ಟ ಸ್ಮಾರಕ ಶಿಲೆ ಪತ್ತೆಯಾಗಿರುತ್ತದೆ. ದೇವಾಲಯದ ಪಕ್ಕದಲ್ಲಿಯೇ ಇರುವ ಗದ್ದೆಯಲ್ಲಿ ದೇವಾಲಯದ ನಾಗಬನಕ್ಕೆ ಸಂಬಂಧಿಸಿದ ಎತ್ತರವಾದ ಸ್ಥಳದಲ್ಲಿ ಜಂಬಿಟ್ಟಿಗೆಯ ರಚನೆಯಿದ್ದು, ನಾಗರಪಂಚಮಿಯ ದಿನ ಇದಕ್ಕೂ ಪೂಜೆ ಸಲ್ಲುತ್ತದೆ ಎಂದು ಸ್ಥಳೀಯರು ಹೇಳುತ್ತಾರೆ (ಪ್ರಾಚೀನ ಕಾಲದಲ್ಲಿ ನಾಗನನ್ನು ಮುರಕಲ್ಲಿನಲ್ಲಿ ಪೂಜೆ ಮಾಡುವ ಸಂಪ್ರದಾಯ ಇದ್ದಿರುವುದನ್ನು ಅಲ್ಲಗಳೆಯುವಂತಿಲ್ಲ).
ದೇವಾಲಯದ ದಕ್ಷಿಣ ದಿಕ್ಕಿನಲ್ಲಿ ಪಾಪನಾಶಿನಿ ನದಿಯಿದ್ದು, ದೇವಾಲಯದ ಉತ್ಸವ ಸಂದರ್ಭದಲ್ಲಿ ದೇವರ ಉತ್ಸವಮೂರ್ತಿಯನ್ನು ಅವಭೃತ (ಪವಿತ್ರ ಸ್ನಾನ)ಕ್ಕೆ ತರುತ್ತಾರೆ. ನಂತರದಲ್ಲಿ ನದಿಯ ಪಕ್ಕದಲ್ಲಿ ನಿರ್ಮಾಣ ಮಾಡಿರುವ ಕಟ್ಟೆಯ ಬಳಿ ಇಟ್ಟು ಪೂಜಿಸುತ್ತಾರೆ. ಇವುಗಳು ಮುಖ್ಯವಾಗಿ ದೇವಾಲಯದ ಊರ್ಧ್ವಮುಖದಲ್ಲಿ ಕಾಣಸಿಗುವ ಪ್ರಮುಖ ವಿಚಾರಧಾರೆಗಳಾಗಿದ್ದು ಇದರೊಂದಿಗೆ ದೇವಾಲಯದಲ್ಲಿ ಆಶ್ವಥಕಟ್ಟೆ, ಬಾವಿ ಹಾಗೂ ಬಲಿಕಲ್ಲುಗಳು ಕಂಡು ಬರುತ್ತದೆ.
ದೇವಾಲಯದ ಒಳನೋಟ ರಚನೆಯಲ್ಲಿ ಗರ್ಭಗುಡಿ, ನಂದಿಮಂಟಪ ಮತ್ತು ಸಭಾಮಂಟಪ ಭಾಗಗಳಿದ್ದು, ಎಲ್ಲವೂ ನವೀಕರಣಗೊಂಡಿರುತ್ತದೆ.
ಗರ್ಭಗುಡಿ: ಸಾಂಧಾರ ಮಾದರಿಯಲ್ಲಿರುವ (ಗರ್ಭಗುಡಿಯ ಸುತ್ತಲೂ ಪ್ರದಕ್ಷಿಣಾ ಪಥವಿದೆ) ಗರ್ಭಗುಡಿಗೆ ಹಸ್ತ-ಹಸ್ತಿಯ ಪ್ರವೇಶವಿದ್ದು, ಪೂರ್ವಾಭಿಮುಖವಾಗಿರುವ ಈ ಎರಡು ಅಂತಸ್ತಿನ ಗರ್ಭಗುಡಿಯ ಭಿತ್ತಿ ಭಾಗದ ಸುತ್ತಲೂ ಮರದಿಂದ ನಿರ್ಮಾಣ ಮಾಡಿದ ಸರಳ ರಚನೆಯಿದ್ದು, ಮೇಲಿನ ಅಂತಸ್ತಿನ ಮೂಲೆ ಭಾಗದಲ್ಲಿ ಗಜಕೇಸರಿಯ ಮರದ ಕೆತ್ತನೆಯಿದೆ. ಈ ಗಜಕೇಸರಿಗಳು ಮೇಲಿನ ಅಂತಸ್ತನ್ನು ಹಿಡಿದಿರುವಂತೆ ಭಾಸವಾಗುತ್ತದೆ. ಗರ್ಭಗುಡಿಯ ಬಾಗಿಲುವಾಡವು ಸರಳವಾಗಿದ್ದು, ಗರ್ಭಗೃಹದಲ್ಲಿ ಈಶ್ವರನನ್ನು ಲಿಂಗ ರೂಪದಲ್ಲಿ ಅಷ್ಟದಳದ ಕೆತ್ತನೆಯನ್ನು ಹೊಂದಿರುವ ಪಾಣಿಪೀಠದ ಮೇಲೆ ಸ್ಥಾಪಿಸಲಾಗಿದೆ. ಶಿವಲಿಂಗವನ್ನು ಬೆಳ್ಳಿಯ ಮುಖವಾಡದಲ್ಲಿ ಮುಚ್ಚಿದ್ದು, ಸುತ್ತಲೂ ಹಿತ್ತಾಳೆಯಿಂದ ಮಾಡಿದ ಪ್ರಭಾವಳಿಯ ರಚನೆಯಿದೆ.
ನಂದಿಮಂಟಪ: ಗರ್ಭಗುಡಿಗೆ ಅಭಿಮುಖವಾಗಿ ಸರಳವಾಗಿ ನಿರ್ಮಾಣ ಮಾಡಿದ ನಾಲ್ಕು ಕಂಬಗಳನ್ನು ಒಳಗೊಂಡಿರುವ ನಂದಿಮಂಟಪವಿದೆ. ಶಿಲಾಮಯವಾಗಿರುವ ಈ ನಂದಿಮಂಟಪದಲ್ಲಿ ಪೀಠದ ಮೇಲೆ ಸ್ಥಾಪಿತವಾಗಿರುವ ನಂದಿಯು ತನ್ನ ಕಾಲುಗಳನ್ನು ಮಡಚಿಕೊಂಡು ಕುಳಿತಿದ್ದು ಹಣೆಪಟ್ಟಿ, ಕಾಲ್ಗೆಜ್ಜೆ, ಕಂಠಪಟ್ಟಿ, ಘಂಟೆ ಇವುಗಳಿಂದ ಅಲಂಕೃತಗೊಂಡಿದೆ.
ಗಣಪತಿ ಗುಡಿ: ಪ್ರಧಾನ ದೇವರಿರುವ ದಕ್ಷಿಣದಲ್ಲಿ ಗಣಪತಿಯ ಗುಡಿಯಿದ್ದು, ಚತುರ್ಭುಜಧಾರಿ ಗಣೇಶನ ವಿಗ್ರಹವನ್ನು ಅಷ್ಟದಳದ ಪೀಠದಲ್ಲಿ ಸ್ಥಾಪಿಸಲಾಗಿದೆ. ಗಣೇಶನು ತನ್ನ ಹಿಂಬದಿಯ ಕೈಗಳಲ್ಲಿ ಪಾಶ ಮತ್ತು ಅಂಕುಶ ಹಾಗೂ ಮುಂಬದಿಯ ಕೈ ಅಭಯ ಮತ್ತು ಮೋದಕವನ್ನು ಹಿಡಿದಿರುವಂತೆ ತೋರಿಸಲಾಗಿದೆ.
ಪೂಜಾ ವಿಧಿ-ವಿಧಾನ: ದೇವಾಲಯದಲ್ಲಿ ನಿತ್ಯಪೂಜೆಯ ಜೊತೆಗೆ ಕಾರ್ತಿಕ ಸೋಮವಾರ, ಶಿವರಾತ್ರಿ, ಸಂಕ್ರಾಂತಿ ಹಾಗೂ ಫೆಬ್ರವರಿ-ಮಾರ‍್ಚ್ ತಿಂಗಳಿನ ಹುಣ್ಣಿಮೆಯಂದು ರ ವರ್ಷಾವಧಿ ಉತ್ಸವನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ಈ ಸಮಯದಲ್ಲಿ ಸುತ್ತಮುತ್ತಲಿನ ಗ್ರಾಮಗಳ ಜನರು ಒಂದಾಗಿ ಭಾಗವಹಿಸುತ್ತಾರೆ.
ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೂ ಹಾಗೂ ನಾಲ್ಕುಸ್ಥಾನ ನಂದಳಿಕೆಯ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೂ ನಿಕಟಪೂರ್ವ ಸಂಬಂಧವಿದೆ. ನಂದಳಿಕೆಯ ಸಿರಿಜಾತ್ರೆಯು ನಡೆಯಬೇಕಾದರೆ ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಉತ್ಸವದ ಗಂಧ-ಪ್ರಸಾದವು ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ತಲುಪಬೇಕೆಂಬ ಪ್ರತೀತಿಯಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಪಳ್ಳಿ ಶ್ರೀ ಮಹಾಲಿಂಗೇಶ್ವರ ದೇವಾಲಯವು ಕೇವಲ ಒಂದು ಧಾರ್ಮಿಕ ಕೇಂದ್ರವಲ್ಲ; ಇದು ತುಳುನಾಡಿನ ತುಳುನಾಡಿನ ಸಾಂಸ್ಕೃತಿಕ ನಕಾಶೆಯಲ್ಲಿ ತನ್ನದೇ ಆದ ವಿಶಿಷ್ಟ ಮತ್ತು ಗೌರವಾನ್ವಿತ ಸ್ಥಾನವನ್ನು ಪಡೆದಿರುವ ಒಂದು ಜೀವಂತ ಪರಂಪರೆ. ನಿಸರ್ಗದ ಮಡಿಲಲ್ಲಿ ಪಾಪನಾಶಿನಿ ನದಿಯ ತಟದಲ್ಲಿ ನೆಲೆಸಿರುವ ಈ ದೇವಾಲಯವು, ತನ್ನ ಪುರಾತನ ಶಿಲ್ಪಕಲೆ ಹಾಗೂ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದೊಂದಿಗಿನ ಅವಿನಾಭಾವ ಸಂಬಂಧದ ಮೂಲಕ ಭಕ್ತಿ ಮತ್ತು ನಂಬಿಕೆಯ ಸೇತುವೆಯಾಗಿ ನಿಂತಿದೆ. ನೂರಾರು ವರ್ಷಗಳ ಇತಿಹಾಸವನ್ನು ತನ್ನ ಗರ್ಭದಲ್ಲಿ ಇರಿಸಿಕೊಂಡಿರುವ ಈ ಕ್ಷೇತ್ರ, ಸ್ಥಳೀಯರ ಸಂಸ್ಕೃತಿ ಮತ್ತು ದೈವತ್ವದ ನಂಬಿಕೆಯನ್ನು ಇಂದಿನ ಪೀಳಿಗೆಗೆ ದಾಟಿಸುತ್ತಿದೆ ಮಾತ್ರವಲ್ಲದೆ ಸಂಶೋಧಕರಿಗೆ ಮತ್ತು ಇತಿಹಾಸಾಸಕ್ತರಿಗೆ ಅಧ್ಯಯನದ ಹೊಸ ಆಯಾಮಗಳನ್ನು ತೆರೆದಿಡುತ್ತದೆ.

ಬರಹ: ಶಶಾಂತ್, ಪಳ್ಳಿ
ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ




By
ForthFocus™