Thursday, September 24, 2026
Thursday, September 24, 2026

ಸಿಟ್ಟಿಗೊಂದು ಉಪಾಯ

ಸಿಟ್ಟಿಗೊಂದು ಉಪಾಯ

Date:

ಕೆಲವರಿಗೆ ಯಾವಾಗಲೂ ಸಿಟ್ಟು, ಇನ್ನು ಕೆಲವರಿಗೆ ಸಿಟ್ಟು ಬರುವುದು ಅಪರೂಪ. ಇದರ ಹಿಂದೆ ರಹಸ್ಯವೇನಿರಬಹುದು? ಭಾವನೆಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ನಮ್ಮನ್ನು ನಾವು ವ್ಯಕ್ತಪಡಿಸುವುದು ನಮ್ಮ ಭಾವನೆಗಳ ಮೂಲಕ. ಭಾವನೆಗಳನ್ನು ನಾವು ದಿನನಿತ್ಯ ಅನುಭವಿಸುತ್ತೇವೆ. ನಮ್ಮ ನಂಬಿಕೆ, ನಮ್ಮ ನಿರ್ಧಾರಗಳಲ್ಲಿ ನಮ್ಮ ಭಾವನೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಆರು ಪ್ರಮುಖ ಭಾವನೆಗಳು ಹೀಗಿವೆ. ಭಯ, ಆಶ್ಚರ್ಯ, ಸಂತೋಷ, ದುಃಖ, ಕೋಪ ಮತ್ತು ಅಸಹ್ಯ. ಭಾವನೆಗಳು ಹಲವು, ಆದರೆ ನಮ್ಮ ಸಂಬಂಧಗಳನ್ನು ಹಾಳು ಮಾಡುವುದು ನಮಗೆ ಇರುವ ಕೋಪದಿಂದ. ಕೋಪವನ್ನು ತಡೆದುಕೊಳ್ಳಲು ಹೋದರೆ ನಮಗೆ ಕಷ್ಟವಾಗಬಹುದು ಹಾಗೆ ಬಿಟ್ಟರೆ ಸಂಬಂಧಗಳು ಕೆಡುವುದು ಗ್ಯಾರಂಟಿ. ಕೆಲವೊಮ್ಮೆ ಸಿಟ್ಟು ಬಂದಾಗ ಸಿಟ್ಟು ತೋರಿಸುವುದು ಒಳ್ಳೆಯದು. ಆದರೆ ಸಿಟ್ಟನ್ನು ತೋರಿಸುವ ರೀತಿಯ ಮೇಲೆ ಅದು ಅವಲಂಬಿತವಾಗಿರುತ್ತದೆ. ವಸ್ತುಗಳನ್ನು ಬಿಸಾಡುವುದು, ಬಯ್ಯುವುದು, ಹೊಡೆಯುವುದು ಇನ್ನಿತರ ಕ್ರಿಯೆಗಳು ಸಂಬಂಧಗಳು ಕೆಡಿಸುತ್ತದೆ. ಹೀಗಿರುವಾಗ ಏನು ಮಾಡಬೇಕು?

ಇಲ್ಲಿ ಎರಡು ರೀತಿಯ ಸಿಟ್ಟನ್ನು ನಾವು ಪರಿಗಣಿಸಬಹುದು. ಒಂದು ಯಾವುದಾದರು ವಿಷಯಕ್ಕೆ ಸಿಟ್ಟು ಬರೋದು ಇನ್ನೊಂದು ಯಾವಾಗಲೂ ಅಧಿಕ ಸಮಯ ಸಿಟ್ಟಲ್ಲೇ ಇರುವುದು. ಈ ತರಹದ ವ್ಯಕ್ತಿಗಳನ್ನು ಮುಂಗೋಪಿ ಎಂದು ಸಾಮಾನ್ಯವಾಗಿ ಕರೆಯುವುದುಂಟು. ಕೋಪಕ್ಕೆ ಅನೇಕ ಕಾರಣಗಳಿರುತ್ತವೆ. ಮೂಲ ಕಾರಣ ಬೇರೆನೇ ಇರಬಹುದು. ಈಡೇರದ ಆಸೆಗಳು, ಹುದುಗಿರುವ ನೋವುಗಳು, ಹೀಗೆ ಅನೇಕ ನಮ್ಮೊಳಗೆ ಅಡಗಿರುವ ಭಾವನೆಗಳಿರುತ್ತವೆ. ಅದಕ್ಕಿಂತ ಆಳವಾದ ಕಾರಣ ಭಯ. ಒಳಗಿರುವ ಭಯ ಯಾವುದೇ ರೀತಿಯದ್ದಾಗಿರಬಹುದು ಅದು ಕೆಲವು ಪರಿಸ್ಥಿತಿಗಳಲ್ಲಿ ಸಿಟ್ಟಾಗಿ ಪರಿವರ್ತನೆಗೊಳ್ಳುತ್ತದೆ. ಆದ್ದರಿಂದ ನಮ್ಮ ಕೋಪವನ್ನು ಅರಿಯುವುದು ಮುಖ್ಯ. ಕೆಲವರಿಗೆ ಇದರ ಅರಿವು ಬೇಗ ಆಗಬಹುದು ಕೆಲವರಿಗೆ ಕಷ್ಟವಾಗಬಹುದು.

ಮನೆಯ ಪರಿಸರ, ಬೆಳೆದು ಬಂದ ವಾತಾವರಣ ಇದಕ್ಕೆ ಬಹುಮುಖ್ಯ ಕಾರಣವಾಗಬಹುದು. ಮನೆಯಲ್ಲಿ ಯಾವಾಗಲೂ ಸಿಟ್ಟಲ್ಲಿರುವ ವ್ಯಕ್ತಿಗಳ ಪ್ರಭಾವ ಅಥವಾ ಧಾರಾವಾಹಿ, ಸಿನಿಮ, ವಿಡಿಯೋಗಳಿಂದ ಈ ರೀತಿಯ ಭಾವನೆಗಳು ಗೊತ್ತಿಲ್ಲದೆ ನಮ್ಮೊಳಗೆ ಸೇರಿರುತ್ತವೆ. ಇದರ ಬಗ್ಗೆ ಆದಷ್ಟು ಬೇಗ ಅರಿವಾಗುವುದು ಹಿತಕರ. ಸಿಟ್ಟಿನ ವಿವರ ಹೀಗಿದೆ. ಮೊದಲು ಚಿಕ್ಕ ಪ್ರಚೋದನೆ, ಪ್ರಚೋದನೆಯಿಂದ ಸ್ವಯಂ ಚಾಲಿತ ಆಲೋಚನೆಗಳು, ಸ್ವಯಂ ಚಾಲಿತ ಆಲೋಚನೆಗಳಿಂದ ಭಾವನಾತ್ಮಕ ಪ್ರತಿಕ್ರಿಯೆ, ಭಾವನಾತ್ಮಕ ಪ್ರತಿಕ್ರಿಯೆಯಿಂದ ದೈಹಿಕ ಪ್ರತಿಕ್ರಿಯೆಗಳು, ದೈಹಿಕ ಪ್ರತಿಕ್ರಿಯೆಗಳಿಂದ ಕೊನೆಗೆ ವರ್ತನೆಯ ಪ್ರತಿಕ್ರಿಯೆಗಳು. ಇದು ಸಿಟ್ಟಿನ ಒಂದು ಚಕ್ರ ಎಂದು ಹೇಳಬಹುದು.

ಕೋಪವನ್ನು ನಿಯಂತ್ರಿಸುವುದು ಹೇಗೆ?: ಕೋಪ ಬಂದಾಗ ದೀರ್ಘವಾಗಿ ಉಸಿರಾಡಿ. ಸಂಖ್ಯೆಗಳನ್ನು ಹೇಳಿ, ಮಾತನಾಡಲು ಹೋಗಬೇಡಿ, ಮನಸ್ಸನ್ನು ಬೇರೆ ಕಡೆ ಬದಲಾಯಿಸಿ. ಸಿಟ್ಟನ್ನು ನಿಯಂತ್ರಿಸುವ ಉತ್ತಮ ಮಾರ್ಗವೆಂದರೆ ಧ್ಯಾನ ಪ್ರಾಣಾಯಾಮ ಮಾಡುವುದು. ಧ್ಯಾನ ಮಾಡುವುದರಿಂದ ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು. ನಮ್ಮನ್ನು ನಾವು ಅರ್ಥ ಮಾಡಿಕೊಂಡರೆ ಜಗತ್ತಿನಲ್ಲಿ ಬೇರೇನು ಅವಶ್ಯಕತೆ ಇರುವುದಿಲ್ಲ. ಕೋಪ ಬಾರದೇ ಇರುವುದು ಅಸಾಧ್ಯ ಆದರೆ ನಿಯಂತ್ರಿಸುವುದೆ ನಮಗೆ ಗೊತ್ತಿರಬೇಕು ಅಷ್ಟೇ.

ಡಾ. ಹರ್ಷಾ ಕಾಮತ್

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕುಂದಾಪುರದ ಇಂಪನಾ ಆರ್. ಅವರಿಗೆ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ

ಕುಂದಾಪುರ, ಸೆ.22: ಐಡಿಯಲ್ ಪ್ಲೇ ಅಬಾಕಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ...

ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರಕ್ಕೆ ಶೈಕ್ಷಣಿಕ ಭೇಟಿ

ಕುಂದಾಪುರ, ಸೆ.22: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜು,...

ಎನ್ಎಸ್ಎಸ್ ಸ್ವಯಂಸೇವಕರಿಂದ ತ್ರಾಸಿ ಬೀಚ್ ಕ್ಲೀನಿಂಗ್

ಕುಂದಾಪುರ, ಸೆ.22: ಅಂತಾರಾಷ್ಟ್ರೀಯ ಕೊಸ್ಟಲ್ ಕ್ಲೀನ್ ಆಫ್ ಡೇ ಆಚರಣೆ ಪ್ರಯುಕ್ತ...
error: Content is protected !!