Saturday, May 23, 2026
Saturday, May 23, 2026

ನನ್ನಮ್ಮ

ನನ್ನಮ್ಮ

Date:

ನ್ನಮ್ಮನ ಕುರಿತು ಬರೆಯಲು ಪದಗಳೇ ಸಾಲದು… ನನ್ನಮ್ಮ ಅಂತ ಅಲ್ಲ, ಅಮ್ಮ ಎಂದರೆ ಅಮ್ಮ, ಪದಗಳಿಗೂ ಸಿಗದ ಕವಿತೆ, ವರ್ಣನೆಗೂ ಎಟುಕದ ಕಾವ್ಯ, ಅಮ್ಮನ ಜಾಗಕ್ಕೆ ಬದಲಿ ಇಲ್ಲವೇ ಇಲ್ಲ. ‘ತಾಯಿಯ ಪಾದದಲ್ಲಡಗಿದೆ ಸ್ವರ್ಗ’ ಎಂಬ ಮಾತಿನಂತೆ ತಾಯಿಯು ಕಣ್ಣಿಗೆ ಕಾಣುವ ದೇವರು, ಜಗತ್ತಿನಲ್ಲಿ ದೇವರ ಮತ್ತೊಂದು ರೂಪ. ಈ ನುಡಿಮುತ್ತು ಎಷ್ಟು ಅರ್ಥಬದ್ಧವಾಗಿ ತಾಯಿಯ ಪ್ರಾಮುಖ್ಯತೆಯನ್ನು ಹೇಳುತ್ತಿದೆ ಎಂದರೆ ತಾಯಿಯೇ ಮಕ್ಕಳ ಪಾಲಿಗೆ ಅಪರಂಜಿ ಮನಸಿನ ಸಂಬಂಧಿ. ತಾಯಿಯೇ ಜೀವಂತ ದೇವತೆ. ತಾಯಿಯೇ ಮಕ್ಕಳ ಒಳ್ಳೆಯ ಭವಿಷ್ಯ ನಿರ್ಮಿಸುವ ಶಿಲ್ಪಿಯಾಗಿರುತ್ತಾಳೆ ಎಂಬುದು ಸರ್ವಕಾಲಿಕ ಸತ್ಯ. ನನ್ನಮ್ಮನ ಬಗ್ಗೆ ಬರೆಯಲೇಬೇಕೆಂಬ ಪುಟ್ಟ ಆಸೆಯೊಂದಿಗೆ ಈ ಬರಹ ಅವಳಿಗಾಗಿ…

ನನ್ನ ಜೀವನದಲ್ಲಿಯೂ ನನ್ನ ಅಮ್ಮನ ಪಾತ್ರ ಬಹಳ ಪ್ರಮುಖವಾದದ್ದು. ಅವಳ ಪ್ರೀತಿಯನ್ನು ಪದಗಳಲ್ಲಿ ವರ್ಣಿಸಲು ಎಂದಿಗೂ ಸಾಧ್ಯವಿಲ್ಲ. ಹೌದು… ಒಂಭತ್ತು ತಿಂಗಳು ತನ್ನ ಗರ್ಭದಲ್ಲಿ ನನ್ನ ಹೊತ್ತು, ಹೆತ್ತು, ಜನ್ಮವನ್ನು ನೀಡಿ, ಬೆಳೆದು ದೊಡ್ಡವಳಾಗಿ ಒಂದು ಹಂತ ತಲುಪುವವರೆಗೂ ನನ್ನ ಜೊತೆ ಸದಾ ಕಾವಲಾಗಿ ನಿಂತವಳು ನನ್ನ ತಾಯಿ. ಅವಳಿಗಾಗಿ ನಾ ಕೊಟ್ಟ ಮೊದಲ ಅತ್ಯಮೂಲ್ಯ ಉಡುಗೊರೆ ಎಂದರೆ ನಾ ಹುಟ್ಟಿದ ದಿನವೇ ಇರಬೇಕು. ಹೆಣ್ಣು ಮಗು ಬೇಕೆಂಬ ಬಯಕೆಯ ಕುಡಿಯಾಗಿ ನನ್ನಮ್ಮ ಎಂಬ ದೇವತೆಯ ಮಡಿಲ ತುಂಬಿದೆ. ಅಂದು ಆಕೆಯ ಖುಷಿಗೆ ಪಾರವೇ ಇಲ್ಲ ಅನಿಸುತ್ತೆ. ಅದೆಷ್ಟೇ ಸಮಸ್ಯೆ ಬಂದೊದಗಿದರು ಕೂಡ ಅದಕ್ಕೆ ಪರಿಹಾರವನ್ನು ನೀಡುವವಳು. ನನ್ನ ಜೀವನದ ಪ್ರತಿಯೊಂದು ಹಂತದಲ್ಲೂ ನನಗೆ ಧೈರ್ಯ, ಸ್ಥೈರ್ಯ, ಬೆಂಬಲವನ್ನ ನೀಡಿದವಳು. ನನ್ನ ಸಂತೋಷದಲ್ಲಿ ಅವಳ ಸಂತೋಷವನ್ನು ಕಂಡವಳು.

ನಿಜ, ಅವಳು ನನ್ನ ಜೀವನದಲ್ಲಿ ದೇವರ ರೂಪವಾಗಿ ಕಾಳಜಿಯ ಕೈಗಳಾಗಿ ಜೊತೆ ನಿಂತವಳು. ನನಗೆ ಸಾಂತ್ವಾನ, ಸಲಹೆ, ಪ್ರೋತ್ಸಾಹದ ಅಗತ್ಯವಿದ್ದಾಗ ಮೊದಲ ಸಂಪರ್ಕದ ವ್ಯಕ್ತಿಯೇ ನನ್ನಮ್ಮ. ಮಾತಿನ ಚಾಕಚಕ್ಯತೆ, ಸಮಸ್ಯೆಗಳನ್ನು ಎದುರಿಸುವ ಧೈರ್ಯ, ಸತ್ಯ, ಪ್ರಾಮಾಣಿಕತೆ ಇವೆಲ್ಲ ಕೇಳದೆ ನನ್ನಮ್ಮ ನನಗಾಗಿ ಕೊಟ್ಟ ಬೆಲೆನೇ ಕಟ್ಟಲಾಗದ ಉಡುಗೊರೆಯಲ್ಲವೇ..? ಸಮಾಜದಲ್ಲಿ ವರ್ತಿಸುವ ರೀತಿ, ನಿರ್ಧಾರಗಳನ್ನ ತೆಗೆದುಕೊಳ್ಳುವ ರೀತಿ, ಉತ್ತಮ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಕಲಿಸಿಕೊಟ್ಟವಳು ನನ್ನಾಕೆ. ಕರುಳಕುಡಿಯ ಸಂಬಂಧವೇ ಹಾಗೆ ಅವಳ ಋಣವನ್ನು ಎಷ್ಟೇ ಜನ್ಮ ಎತ್ತಿದರು ತೀರಿಸಲು ಸಾಧ್ಯವಿಲ್ಲ. ಬಹುಶಃ ಜಗತ್ತಿನಲ್ಲಿ ನಿರಂತರವಾದ ಒಂದು ಪ್ರೀತಿ ಇದ್ದರೆ ಅದು ಕೇವಲ ತಾಯಿಯ ಪ್ರೀತಿ ಮಾತ್ರ. ಇಂದಿಗೂ ನನ್ನಮ್ಮನ ತೊಳಲ್ಲಿ ಮತ್ತೆ ಮಗುವಾಗಬೇಕೆನಿಸಿದೆ. ಅವಳ ಮಡಿಲೇರಿ ಕುಣಿಯಬೇಕು ಅನಿಸಿದೆ. ಅವರ ಕೋಪಕ್ಕೆ ಅಡಗಿ ಕೂರಬೇಕೆನಿಸಿದೆ. ನನ್ನ ಹಡೆದ ನನ್ನಮ್ಮನ ಹೊತ್ತು ಲೋಕ ಸುತ್ತಬೇಕೆನಿಸಿದೆ. ಬದುಕಿನ ಪಾಠವನ್ನು ನಗುನಗುತ್ತ ಬೆತ್ತದ ಏಟಿನ ಜೊತೆಗೆ ಕಲಿಸಿದ ಮಹಾಗುರು ಜೀವನದ ಎಷ್ಟೋ ಸೂಕ್ಷ್ಮಗಳನ್ನು ಅರ್ಥ್ಯೆಸಿದ ಸಾಧ್ವಿ ನನ್ನಮ್ಮ.

ಮುತ್ತಿನ ಹಿರಿಮೆ ಜೊತೆಗೆ ಗತ್ತಿನ ಜೀವನದ ಗರಿಯನ್ನು ಮುಡಿಗೆರಿಸಿದ ಅಮ್ಮನ ಬದುಕಲ್ಲಿ ಆಯಸ್ಸು, ಆರೋಗ್ಯ, ನೆಮ್ಮದಿ ಸದಾ ಹಸಿರಾಗಿರಲಿ…

ನನ್ನ ಪಾಲಿಗೆ ಬೆಲೆಕಟ್ಟಲಾಗದ ಬಂಗಾರವೂ ಇವಳೇ, ಭರವಸೆಯ ಬೆಳಕು ಇವಳೇ. ನನ್ನ ಪುಟ್ಟ ಜಗತ್ತಿನ ಅದ್ಭುತ ಶಕ್ತಿಯಾದ ನನ್ನಮ್ಮನಿಗೆ ಕೋಟಿ ಕೋಟಿ ನಮನಗಳು. ಮತ್ತೆ ಮರು ಜನುಮ ಅಂತ ಇದ್ದರೆ ಈ ಮಹಾತಾಯಿಗೆ ಮಗಳಾಗಿ ಅಲ್ಲದಿದ್ದರೂ ಅವರ ಪಾದ ಧೂಳಿನ ಕಣವಾದರೂ ನಾನು ಧನ್ಯ. ಅಮ್ಮಾ… ನಿನ್ನ ಒಳಿತು ಕೆಡುಕುಗಳಿಗೆ ಹೆಗಲಾಗಿ ಸದಾ ನಿನ್ನೊಂದಿಗೆ ಈ ಮಗಳು…

-ಅಪ್ಸಾನಾ ಬಿ.ಎನ್ (ಅಂತಿಮ ಎಂ.ಎ‌ ಇತಿಹಾಸ ವಿಭಾಗ) ಸರ್ಕಾರಿ ಪ್ರಥಮ ದರ್ಜೆ ಪದವಿ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕೊಡವೂರು: ನಿರ್ಮಾಣ ಹಂತದ ಬಾವಿ ಕುಸಿದು ಕಾರ್ಮಿಕ ಸಾವು

ಉಡುಪಿ, ಮೇ 22: ಕೊಡವೂರು ಸಮೀಪದ ಗರಡಿಮಜಲು ಎಂಬಲ್ಲಿ ನಿರ್ಮಾಣ ಹಂತದ...

ಸಣ್ಣ ಉದ್ದಿಮೆಗೆ ಸಹಾಯಧನ: ಅರ್ಜಿ ಆಹ್ವಾನ

ಉಡುಪಿ, ಮೇ 22: ಉಡುಪಿ ನಗರಸಭೆಯ 2025-26 ನೇ ಸಾಲಿನ ಎಸ್.ಎಫ್.ಸಿ...

ಕಾಳಾವರ ವರದರಾಜ ಕಾಲೇಜು: ಪ್ರತಿಭಾ ದಿನಾಚರಣೆ

ಕುಂದಾಪುರ, ಮೇ 22: ಶಿಸ್ತು, ಸುಸಂಸ್ಕೃತ ನಡವಳಿಕೆ ಮೂಲಕ ಭಾರತೀಯ ಸಂಸ್ಕೃತಿಯನ್ನು...
error: Content is protected !!