Saturday, November 28, 2026
Saturday, November 28, 2026

ಭಾರತ್ ನೆಟ್‌ಹಂತ-3 ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

ಭಾರತ್ ನೆಟ್‌ಹಂತ-3 ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ

Date:

ಉಡುಪಿ, ನ.27: ಗ್ರಾಮೀಣ ಪ್ರದೇಶದಲ್ಲಿ ವೇಗದ ಇಂಟರ್‌ನೆಟ್ ವ್ಯವಸ್ಥೆ ಕಲ್ಪಿಸುವ ಭಾರತ್ ನೆಟ್‌ಹಂತ-3 ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡುವುದರೊಂದಿಗೆ ಜನರಿಗೆ ಗುಣಮಟ್ಟದೊಂದಿಗೆ ವೇಗದ ಇಂಟರ್‌ನೆಟ್ ಸೌಲಭ್ಯ ಕಲ್ಪಿಸಲು ಮುತುವರ್ಜಿಯಿಂದ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಭಾರತ್ ನೆಟ್ ಹಂತ-3 ರ ಅನುಷ್ಠಾನ ಕುರಿತ ಪುನರ್ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.

ಗ್ರಾಮ ಪಂಚಾಯತ್ ಕಛೇರಿಗಳು, ಸರಕಾರಿ ಶಾಲೆಗಳು, ಅಂಗನವಾಡಿಗಳು ಹಾಗೂ ಸಾರ್ವಜನಿಕ ಸೇವಾ ಕೇಂದ್ರಗಳು ವಿಶ್ವಾಸಾರ್ಹ ಡಿಜಿಟಲ್ ಸಂಪರ್ಕ ಪಡೆಯುವುದು ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಅನುಷ್ಠಾನದಿಂದ ಸರಕಾರದ ಸೇವೆಗಳು ಗ್ರಾಮ ಮಟ್ಟದಲ್ಲಿ ಡಿಜಿಟಲ್ ರೂಪದಲ್ಲಿ ಲಭ್ಯವಾಗಲಿದ್ದು, ಅಧಿಕಾರಿಗಳು ಇದಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು. ಭಾರತ್ ನೆಟ್ ಮೊದಲ ಮತ್ತು ಎರಡನೇ ಹಂತದಲ್ಲಿ ಸಂಪರ್ಕ ಕಲ್ಪಿಸಲಾಗಿತ್ತು. ಆದರೆ ಎಲ್ಲಾ ಗ್ರಾಮಗಳಿಗೆ ನಿರಂತರ, ವಿಶ್ವಾಸಾರ್ಹ ಹಾಗೂ ಅಡಚಣೆ ರಹಿತ ಸೇವೆ ನೀಡುವುದು ಅವಶ್ಯವಿರುವುದನ್ನು ಮನಗಂಡ ಸರ್ಕಾರ ಭಾರತ್‌ನೆಟ್‌ನ ಮೂರನೇ ಹಂತವಾದ ಅಮೆಂಡೆಡ್ ಭಾರತ್‌ನೆಟ್ ಪ್ರೋಗ್ರಾಂಅನ್ನು ಜಾರಿಗೆ ತಂದಿದೆ. ಈ ಮೂಲಕ ಗ್ರಾಮ ಪಂಚಾಯತ್‌ಗಳ ಜತೆಗೆ ಹಳ್ಳಿಗಳಿಗೂ ಆಪ್ಟಿಕಲ್ ಫೈಬರ್ ಸಂಪರ್ಕ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದರು.

ಭಾರತ್‌ನೆಟ್‌ನ ಮೂರನೇ ಹಂತವಾದ ಅಮೆಂಡೆಡ್ ಭಾರತ್‌ನೆಟ್ ಪ್ರೋಗ್ರಾಂ ಅಡಿಯಲ್ಲಿ ರಾಜ್ಯದಲ್ಲಿ ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್ ಅನುಷ್ಠಾನ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಯಡಿ ಪ್ರಸ್ತುತ ಬ್ಲಾಕ್ ಕೇಂದ್ರಗಳಿಂದ ಗ್ರಾಮ ಪಂಚಾಯತ್‌ಗಳಿಗೆ ಕಲ್ಪಿಸಲಾಗಿರುವ ಲೀನಿಯರ್ ಸಂಪರ್ಕ ವ್ಯವಸ್ಥೆಯ ಬದಲಿಗೆ ಐಪಿ-ಎಂಪಿಎಲ್‌ಎಸ್ ಆಧಾರಿತ ರಿಂಗ್ ಆಪ್ಟಿಕಲ್ ಫೈಬರ್ ನೆಟ್‌ವರ್ಕ್ ವ್ಯವಸ್ಥೆಯ ಮೂಲಕ ನೆಟ್‌ವರ್ಕ್ನ ಸುರಕ್ಷತೆ, ವಿಶ್ವಾಸಾರ್ಹತೆ ಮತ್ತು ವೇಗವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು. ಭಾರತ್ ನೆಟ್ ನವರು ಮನೆ, ಶೈಕ್ಷಣಿಕ ಸಂಸ್ಥೆ ಹಾಗೂ ಸರಕಾರಿ ಇಲಾಖೆಗಳಿಗೆ ನೀಡಿದ ಸಂಪರ್ಕಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಸೇವೆಯಲ್ಲಿ ವ್ಯತ್ಯಾಸವಾಗಿ ಸಂಸ್ಥೆಯಿಂದ ಸ್ಪಂದನೆ ಸಿಗದೇ ಇದ್ದಾಗ ಜನರು ಖಾಸಗಿ ಸಂಸ್ಥೆಗಳ ಮೊರೆ ಹೋಗುತ್ತಾರೆ. ಹೀಗಾಗದಂತೆ ಎಚ್ಚರ ವಹಿಸಬೇಕು. ಬಿ.ಎಸ್.ಎನ್.ಎಲ್ ಇಂಟರ್ನೆಟ್ ಬಗ್ಗೆ ಪ್ರತಿ ಮನೆಗೆ ಕರಪತ್ರ ಹಂಚಿ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಪಿ.ಡಿ.ಓ ಗಳಿಗೆ ಸೂಚಿಸಿದ ಅವರು, ಭಾರತ್ ನೆಟ್‌ನ ಫ್ರಾಂಚೈಸಿಯಾಗಲು ಸ್ಥಳೀಯ ಯುವಕರಿಗೆ ಅವಕಾಶ ಮಾಡಿಕೊಡಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಮಾತನಾಡಿ, ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ಜನರಿಗೆ ತಲುಪಬೇಕು. ದೇಶದಲ್ಲಿ 3.5 ಲಕ್ಷ ಗ್ರಾಮ ಪಂಚಾಯಿತಿ ಗಳಿಗೆ ಆಪ್ಟಿಕಲ್ ಫೈಬರ್ ಸಂಪರ್ಕ ಕೊಡುವುದು ಸರ್ಕಾರದ ಧ್ಯೇಯವಾಗಿದೆ. ಗ್ರಾಮ ಪಂಚಾಯತಿಗಳಿಂದ ಪ್ರತಿ ಮನೆಗೂ ಸಂಪರ್ಕ ಕಲ್ಪಿಸುವ ಜವಾಬ್ದಾರಿ ಬಿ.ಎಸ್.ಎನ್.ಎಲ್ ಸಂಸ್ಥೆಯ ಅಧಿಕಾರಿಗಳ ಮೇಲಿದೆ ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಬಿಎಸ್‌ಎನ್‌ಎಲ್ ಕರ್ನಾಟಕದ ಭಾರತ್‌ನೆಟ್ ವಿಭಾಗದ ಜನರಲ್ ಮ್ಯಾನೇಜರ್ ಬಿ.ಎಸ್. ನಾಗರ್, ಮಂಗಳೂರಿನ ಜನರಲ್ ಮ್ಯಾನೆಜರ್ ಹೇಮಂತ್, ಎ.ಜೆ.ಎಂ ರಾಜಶೇಖರ್, ಬಿ.ಎಸ್.ಎನ್.ಎಲ್ ನ ಅಧಿಕಾರಿಗಳು, ಫ್ರಾಂಚೈಸಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಟಪಾಡಿ ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜು: ವಾರ್ಷಿಕ ಕ್ರೀಡಾಕೂಟ

ಕಟಪಾಡಿ, ನ.27: ತ್ರಿಶಾ ವಿದ್ಯಾ ಪದವಿಪೂರ್ವ ಕಾಲೇಜು, ಕಟಪಾಡಿ ವತಿಯಿಂದ 2006-27...

ಬಾಲ್ಯ ವಿವಾಹ ಮುಕ್ತ ಭಾರತ ಅಭಿಯಾನದ ಯಶಸ್ಸಿಗೆ ಪ್ರತಿಯೊಬ್ಬರೂ ಸಹಕರಿಸಿ: ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ

ಉಡುಪಿ, ನ.27: ಜಿಲ್ಲೆಯಲ್ಲಿ ಬಾಲ್ಯವಿವಾಹ ಮುಕ್ತ ಭಾರತ ಅಭಿಯಾನದ 100 ದಿನಗಳ...

ಸ್ವಾವಲಂಬಿ ಸಾರಥಿ ಯೋಜನೆಯಡಿ ಫಲಾನುಭವಿಗಳಿಗೆ ಹಸ್ತಾಂತರ

ಕಾಪು, ನ.26: ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ಉಡುಪಿ ಜಿಲ್ಲೆ...
error: Content is protected !!