ಏನಾದರೂ ತಪ್ಪು ಮಾಡಿದಾಗ “ನೀನು ಸರಿಯಿಲ್ಲ”, “ನಿನ್ನಿಂದ ಆಗಲ್ಲ”, “ಜನರು ಏನ್ ಅಂತಾರೆ” ಎಂದು ಗುಸುಗುಸು ಹೇಳುವ ಧ್ವನಿ. ಇದೇ ನಮ್ಮ ಒಳಗಿನ ಟೀಕಾಕಾರ.ಈ ಟೀಕಾಕಾರ ಕೆಟ್ಟವನಲ್ಲ. ನಮ್ಮನ್ನು ರಕ್ಷಿಸಲು ಪ್ರಯತ್ನಿಸುತ್ತಾನೆ. ಆದರೆ ಹೆಚ್ಚಾದಾಗ, ಅವನು ನಮ್ಮ ಶಾಂತಿ, ಆತ್ಮವಿಶ್ವಾಸ ಮತ್ತು ಬೆಳವಣಿಗೆಯನ್ನು ಕೊಲ್ಲುತ್ತಾನೆ. ಇದರ ಬಗ್ಗೆ ತಿಳಿದುಕೊಳ್ಳೋಣ. ಅತಿಯಾದಾಗ ಅಮೃತವು ವಿಷವಾಗುತ್ತದೆ. ಆದರಿಂದ ಅದರ ನಿಯಂತ್ರಣ ಅಗತ್ಯ. ಹಾಗಾದರೆ ಅವನನ್ನು ಹೇಗೆ ಮೌನ ಮಾಡುವುದು?
1. ಮೊದಲಿಗೆ ಅವನನ್ನು ಗುರುತಿಸಿ – ಅವನಿಗೆ ಒಂದು ಹೆಸರು ಕೊಡಿ: ಮೊದಲು ಆ ಧ್ವನಿ ನಿಮ್ಮದಲ್ಲ ಎಂದು ತಿಳಿಯಿರಿ. ಅದು ಭಯ, ಹಿಂದಿನ ಅನುಭವ, ಮತ್ತು ಸಮಾಜದ ನಿರೀಕ್ಷೆಗಳ ಮಿಶ್ರಣ. ಅದಕ್ಕೆ ಹೆಸರು ಕೊಡಿ. ಉದಾಹರಣೆಗೆ “ಮಿಸ್ಟರ್ ಪರ್ಫೆಕ್ಟ್”. ಅವನು ಮಾತಾಡಲು ಶುರು ಮಾಡಿದಾಗ “ಓಹ್, ಮಿಸ್ಟರ್ ಪರ್ಫೆಕ್ಟ್ ಮತ್ತೆ ಬಂದ” ಎಂದು ಹೇಳಿ. ದೂರದಿಂದ ನೋಡಿದಾಗ ಅವನ ಶಕ್ತಿ ಕಡಿಮೆಯಾಗುತ್ತದೆ.
2. ಸತ್ಯವನ್ನು ಪ್ರಶ್ನಿಸಿ: ಒಳಗಿನ ಟೀಕಾಕಾರ ಯಾವಾಗಲೂ ಉತ್ಪ್ರೇಕ್ಷೆ ಮಾಡುತ್ತಾನೆ. “ನೀನು ಯಾವಾಗಲೂ ಫೇಲ್ ಆಗುತ್ತೀಯ” ಎಂದು ಒಳಗಿನ ಧ್ವನಿ ಹೇಳಿದಾಗ ನಿಮ್ಮನ್ನು ನೀವೇ ಪ್ರಶ್ನಿಸಿ. ನಿಜವಾಗಿಯೂ ಯಾವಾಗಲೂನಾ? ಎಂದು. ಮನಸ್ಸನ್ನು ಬೇರೆ ಕಡೆ ತಿರುಗಿಸಿ ಒಳ್ಳೆಯದನ್ನು ಆಲೋಚಿಸಿ. ಕಳೆದ ವಾರ ನೀವು ಮಾಡಿದ 3 ಒಳ್ಳೆಯ ಕೆಲಸ ಏನು? ಎಂದು ನಿಮ್ಮನ್ನೇ ನೀವು ಕೇಳಿ. “ಎಲ್ಲರೂ ನಿಮ್ಮನ್ನು ನೋಡಿ ನಗುತ್ತಾರೆ” ಎಂದಾಗ ನಿಜವಾಗಲೂ ಹೌದಾ ಎಂದು ನಿಮ್ಮನ್ನೇ ನೀವು ಪ್ರಶ್ನಿಸಿ. ಪ್ರಶ್ನೆ ಮಾಡಿದಾಗ ಸುಳ್ಳು ಬಯಲಾಗುತ್ತದೆ.
3. ಸ್ನೇಹಿತೆಗೆ ಹೇಳುವಂತೆ ನಿಮಗೆ ನೀವೇ ಹೇಳಿಕೊಳ್ಳಿ: ನಿಮ್ಮ ಸ್ನೇಹಿತೆ ತಪ್ಪು ಮಾಡಿದರೆ ನೀವು “ನೀನು ಏನು ಮಾಡಿದೆ ನೋಡು” ಎಂದು ಬೈಯುತ್ತೀರಾ? ಇಲ್ಲ. “ಪರವಾಗಿಲ್ಲ, ಮುಂದಿನ ಸಲ ನೋಡೋಣ” ಎಂದು ಸಮಾಧಾನ ಮಾಡುತ್ತೀರಾ.ಹಾಗಾದರೆ ನಿಮಗೂ ಹಾಗೆಯೇ ಮಾಡಿ. ತಪ್ಪು ಆಯಿತಾ? “ಸರಿ, ನಾನು ಕಲಿತೆ. ನಾನು ಪ್ರಯತ್ನಿಸಿದ್ದೇ ದೊಡ್ಡ ವಿಷಯ.” ಎಂದು ಸಮಜಾಯಿಸಿ.
4. ಕೃತಜ್ಞತೆ ಮತ್ತು ಸಣ್ಣ ಗೆಲುವುಗಳನ್ನು ಆಚರಿಸಿ: ಟೀಕಾಕಾರ ನಕಾರಾತ್ಮಕತೆಯನ್ನು ಮಾತ್ರ ನೋಡುತ್ತಾನೆ. ನೀವು ಉದ್ದೇಶಪೂರ್ವಕವಾಗಿ ಒಳ್ಳೆಯದನ್ನು ನೋಡಬೇಕು. ಪ್ರತಿದಿನ ರಾತ್ರಿ 3 ವಿಷಯಗಳನ್ನು ಬರೆಯಿರಿ: “ಇಂದು ನಾನು ಏನು ಚೆನ್ನಾಗಿ ಮಾಡಿದೆ. ಚಿಕ್ಕದಾಗಿದ್ದರೂ ಪರವಾಗಿಲ್ಲ. ಸಮಯಕ್ಕೆ ಊಟ ಮಾಡಿದ್ದು, ಯಾರಿಗಾದರೂ ಸಹಾಯ ಮಾಡಿದ್ದು. ಈ ಅಭ್ಯಾಸವು ಮೆದುಳಿಗೆ “ನಾನು ಒಳ್ಳೆಯ ವ್ಯಕ್ತಿ ” ಎಂದು ಕಲಿಸುತ್ತದೆ.
5. ಕ್ರಿಯೆಗೆ ಮುಂದಾಗಿ – ಪರಿಪೂರ್ಣತೆ ಕಾಯಬೇಡಿ: ಟೀಕಾಕಾರನ ಅತ್ಯಂತ ದೊಡ್ಡ ಆಯುಧ “ನಂತರ ಮಾಡು, ಇನ್ನೂ ಚೆನ್ನಾಗಿ ತಯಾರಾಗು” ಎಂದು ಹೇಳುತ್ತಾನೆ. ಆದರೆ ಕ್ರಿಯೆಯೇ ಅವನನ್ನು ಮೌನ ಮಾಡುತ್ತದೆ. 5 ನಿಮಿಷ ಬರೆಯಿರಿ, 10 ನಿಮಿಷ ವಾಕ್ ಮಾಡಿ, ಪ್ರಿಯ ವ್ಯಕ್ತಗೆ ಒಂದು ಫೋನ್ ಕಾಲ್ ಮಾಡಿ.
ಬೆಚ್ಚಗಿನ ಎಣ್ಣೆ ಮಸಾಜ್, ಬ್ರಾಹ್ಮಿ ಚಹಾ, ಮತ್ತು ಬೇಗ ಮಲಗುವುದು. ಶಾಂತ ದೇಹದಲ್ಲಿ ಶಾಂತ ಮನಸ್ಸು ವಾಸಿಸುತ್ತದೆ.ಒಳಗಿನ ಟೀಕಾಕಾರನನ್ನು ಕೊಲ್ಲುವ ಅಗತ್ಯವಿಲ್ಲ. ಅವನಿಗೆ ಧನ್ಯವಾದ ಹೇಳಿ ಮತ್ತು “ನಾನು ಈಗ ಇದನ್ನು ನಾನೇ ನೋಡಿಕೊಳ್ಳುತ್ತೇನೆ” ಎಂದು ಹೇಳಿ. ನೀವು ಆಯ್ಕೆ ಮಾಡಿಕೊಂಡ ಧ್ವನಿಯಾಗಿರಿ. ಪ್ರೀತಿಯ ಧ್ವನಿ, ತಾಳ್ಮೆಯ ಧ್ವನಿ, ಪ್ರೋತ್ಸಾಹದ ಧ್ವನಿ ನೀವಾಗಿ.
ನೆನಪಿಡಿ ನೀವು ನಿಮ್ಮ ಅತಿದೊಡ್ಡ ಟೀಕಾಕಾರರೂ ಆಗಬಹುದು, ಮತ್ತು ನಿಮ್ಮ ಅತಿದೊಡ್ಡ ಬೆಂಬಲಿಗರೂ ಆಗಬಹುದು. ಆಯ್ಕೆ ನಿಮ್ಮ ಕೈಯಲ್ಲಿದೆ. ನೀವು ಶಾಂತವಾಗಿದ್ದಾಗಲೇ ಜಗತ್ತು ನಿಮಗೆ ಸುಂದರವಾಗಿ ಕಾಣುತ್ತದೆ. ಆದ್ದರಿಂದ ಇಂದಿನಿಂದ, ಒಳಗಿನ ಟೀಕೆಗೆ ಮೌನ ಮಾಡಿಸಿ ಜಗತ್ತನ್ನು ಗೆಲ್ಲಿ.
ಡಾ. ಹರ್ಷಾ ಕಾಮತ್




By
ForthFocus™