ಮಾಯೆ ಎಂಬ ಪದಕ್ಕೆ ಎರಡು ಅರ್ಥ ಒಂದು ಪ್ರೀತಿಪಾತ್ರರ ಮೇಲೆ ಇದ್ದ ಮೋಹ ಇನ್ನೊಂದು ಆಧ್ಯಾತ್ಮಿಕ ಅರ್ಥದ್ದು. ನಾವು ನೋಡುತ್ತಿರುವುದು ನಿಜವಲ್ಲ ಮೋಹ ಎಂಬ ಅರ್ಥದಲ್ಲಿ. ನಾವು ಈ ಜಗತ್ತಿನಲ್ಲಿ ಎಷ್ಟು ಮುಳುಗಿದ್ದೇವೆ ಎಂದರೆ ನಮಗೆ ನಮ್ಮ ಇಂದ್ರಿಯಗಳು ತೋರಿಸಿದ್ದೆ ನಿಜವೆಂದು ನಂಬಿ ಬಿಡುತ್ತೇವೆ. ಆದರೆ ಸತ್ಯ ಬೇರೆಯೇ ಇದೆ. ಇದು ಗೋಚರವಾಗುವುದು ನಾವು ನಮ್ಮೊಳಗಿನ ನಮ್ಮನ್ನು ಅರ್ಥ ಮಾಡಿಕೊಂಡಾಗ. ಏನಿದು ನಮ್ಮೊಳಗಿಂದ ನಾನು ಎಂದರೆ? ನಾವು ಜಗತ್ತನ್ನೆಲ್ಲ ಮರೆತು ಧ್ಯಾನಕ್ಕೆ ಕುಳಿತಾಗ ಅರಿವಾಗುವ ಸತ್ಯ ಅದನ್ನು ಅನುಭವಿಸಿದವರಿಗೆ ಮಾತ್ರ ಅದೇನು ಎಂದು ಅರ್ಥವಾಗುವುದು. ಅದನ್ನು ನಾವು ಹುಡುಕುತ್ತಾ ಹೋಗಬೇಕು ಆದರೆ ಹೊರಗೆ ಅಲ್ಲ ನಮ್ಮೊಳಗೆ.
ನಾನ್ಯಾರು ಎಂದು ನಮ್ಮನ್ನು ನಾವು ಕೇಳುತ್ತ ಹೋದರೆ ದಿನದಿಂದ ದಿನಕ್ಕೆ ನಮಗೆ ತಿಳಿಯುವಂತಹ ಸತ್ಯ. ನಮ್ಮ ಇಂದ್ರಿಯಗಳು ನೀಡಲು ಜ್ಞಾನೇಂದ್ರಿಯಗಳನ್ನು ಹೊರಗಿಟ್ಟು ಯಾವುದೇ ಪೂರ್ವಗ್ರಹವಿಲ್ಲದ ಮನಸ್ಸಿನಿಂದ ನಮ್ಮನ್ನು ಅರಿಯುವ ಸ್ಥಿತಿಗೆ ತಲುಪುತ್ತೇವೆ. ಆ ಸ್ಥಿತಿಯಲ್ಲಿ ಸ್ವಲ್ಪ ಸಮಯ ಇದ್ದು ಮುಂದೆ ಮನಸ್ಸು ಕೂಡ ಇಲ್ಲವಾದಾಗ ನಮ್ಮನ್ನು ನಾವು ಅರಿವೇವು. ಅದೇ ಸತ್ಯ. ಇದಕ್ಕೆ ಮನೋನಾಶ ಅಗತ್ಯ. ಮನೋನಾಶವಾದಾಗ ನಮ್ಮ ಮುಂದೆ ಏನಿಟ್ಟರೂ ಒಂದೇ. ಯಾವ ಮನುಷ್ಯನನ್ನು ನೋಡಿದರೂ ಭೇದಭಾವ ಇರುವುದಿಲ್ಲ. ಜೀವವಿರುವ ಹಾಗೂ ನಿರ್ಜೀವವಿರುವ ವಸ್ತುಗಳು ಒಂದೇ. ಯಾವುದು ಹೇಗೆ ಇದೆಯೋ ಅದನ್ನು ಹಾಗೆ ಸ್ವೀಕರಿಸುವ ಸ್ಥಿತಿ ಇದು. ಈ ಸ್ಥಿತಿ ನಮಗೆ ಬಂದರೆ ಅದೇ ನಿಜವಾದ ನಾವು. ಆಗ ನಮ್ಮನ್ನು ನಾವು ಅರ್ಥ ಮಾಡಿಕೊಂಡ ಹಾಗೆ. ನಮ್ಮನ್ನು ನಾವು ಅರಿತರೆ ಜಗತ್ತನ್ನು ಅರಿತ ಹಾಗೆ.
ಜಗತ್ತಿನಲ್ಲಿ ಬೇರೆಬೇರೆ ರೀತಿಯ ಜೀವಿಗಳು ಈ ಜಗತ್ತನ್ನು ಬೇರೆಬೇರೆ ರೀತಿಯಲ್ಲಿ ನೋಡುತ್ತದೆ. ನಮ್ಮ ನಮ್ಮ ಜ್ಞಾನೇಂದ್ರಿಯಗಳ ಶಕ್ತಿಯ ಪ್ರಕಾರ ನಮಗೆ ಈ ಜಗತ್ತು ಗೋಚರಿಸುತ್ತದೆ. ನಾವು ನೋಡುವುದು ಬೇರೆ ಹಾಗು ಬೇರೆ ಜೀವಿಗಳು ಈ ಜಗತ್ತನ್ನು ನೋಡುವುದು ಬೇರೆ. ಇದು ನಮಗೆ ತಿಳಿಯಬೇಕಾಗಿರುವ ಸತ್ಯ. ಎಷ್ಟು ಜೀವಿಗಳು ಇವೆಯೋ ಅಷ್ಟೇ ಜಗತ್ತು ಇದೆ. ಪ್ರತಿಯೊಂದು ಜೀವಿಯು ಅದರ ಶಕ್ತಿಗೆ ಅನುಸಾರ ಈ ಜಗತ್ತನ್ನು ನೋಡುತ್ತದೆ ಅದೇ ಅದರ ಪ್ರಪಂಚ ಅದೇ ಜಗತ್ತು ಅದಕ್ಕೆ. ನಾವು ಜೀವಿಸುತ್ತಿರುವುದು ಭ್ರಮೆಯಲ್ಲಿ. ಒಂದೇ ಜಗತ್ತು ಅನ್ನುವುದು ಇಲ್ಲ.
ನಮ್ಮೆದುರು ಜನರು ಸಾಯುತ್ತಿದ್ದರು ನಮಗೆ ಸಾವಿಲ್ಲ ಎಂದು ಅನಿಸುವುದು ಒಂದು ಭ್ರಮೆ. ಇದೇ ಮಾಯೆ. ನಮ್ಮ ಜೀವನದಲ್ಲಿ ಮಾಯೆ ಹೇಗೆ ಆವರಿಸಿದೆ ಎಂದರೆ ಅದೇ ನಿಜವೆನ್ನುವ ಹಾಗೆ. ನಮ್ಮ ಆ ದೃಷ್ಟಿಯಿಂದ ಹೊರಬರಲು ಸಾಧ್ಯವೆನ್ನುವುದು ಕೂಡ ನಮಗೆ ಅರಿವಿಲ್ಲ. ನಮಗೆ ಅನ್ನಿಸುವುದು ನಮಗೆ ಗೋಚರಿಸಿದ ಸೃಷ್ಟಿಯೇ ನಿಜವೆಂದು. ಯಾರು ಏನೇ ಹೇಳಿದರೂ ಕೇಳದೆ ನಮ್ಮ ಭ್ರಮೆಯನ್ನೇ ಸತ್ಯವೆಂದು ತಿಳಿಯುತ್ತೇವೆ. ಸತ್ಸಂಗ ಧ್ಯಾನ ವೇದ ಉಪನಿಷತ್ತು ಏನು ಬೇಡ ಬರಿ ಪರಿಸರವನ್ನು ಗಂಟೆಗಟ್ಟಲೆ ವೀಕ್ಷಿಸಿದರೆ ನಮ್ಮಲ್ಲಿ ಏನೊ ಜ್ಞಾನದ ಅರಿವಾಗುತ್ತದೆ. ಅದರಲ್ಲಿ ಮಗ್ನವಾದಲ್ಲಿ ನಮ್ಮನ್ನು ನಾವು ಅರಿಯುತ್ತೇವೆ. ಅದೇ ಸತ್ಯ.
ಜಗತ್ತಿನಲ್ಲಿ ದ್ವಂದ್ವ ಇದ್ದೇ ಇರುತ್ತದೆ. ನಾವು ಅದನ್ನು ಮೀರಿ ಬದುಕಬೇಕು. ಇದನ್ನು ಇದ್ದ ಹಾಗೆ ನೋಡುವುದನ್ನು ಸ್ವೀಕರಿಸುವುದು ನಮ್ಮ ಮನಸ್ಸಿಗೆ ಅಭ್ಯಾಸವಾಗಬೇಕು. ಸುಖ ಇದ್ದ ಕಡೆ ದುಃಖ ಇರಲೇಬೇಕು ಒಳ್ಳೆಯದು ಇದ್ದ ಕಡೆ ಕೆಟ್ಟದ್ದು ಇರಲೇಬೇಕು. ಒಂದು ಮಾತ್ರ ಅಸ್ತಿತ್ವದಲ್ಲಿ ಇರಲು ಸಾಧ್ಯವಿಲ್ಲ.. ಈ ದ್ವಂದ್ವಗಳಿಂದ ಹೊರ ಬರುವುದೇ ನಮ್ಮ ಭ್ರಮೆಯಿಂದ ದೂರವಾಗುವುದು.
-ಡಾ. ಹರ್ಷಾ ಕಾಮತ್




By
ForthFocus™