ಬೆಳಗಾವಿ, ಅ.29: ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ಜತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸರ್ಕ್ಯೂಟ್ ಹೌಸ್‌ನಲ್ಲಿ ಎರಡನೇ ಸುತ್ತಿನ ಚರ್ಚೆ ನಡೆಯಿತು. ನಾವು ಕೇಂದ್ರವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ತೀರ್ಮಾನ ಮಾಡಲು ಸಾಧ್ಯವಿಲ್ಲ. ಸಕ್ಕರೆ ಎಂಎಸ್‌ಪಿ ಏರಿಕೆಯಾಗದೆ ಸಕ್ಕರೆ ಕಾರ್ಖಾನೆ ಮಾಲೀಕರು ಒಪ್ಪುವುದಿಲ್ಲ. ರೈತರು ಕಬ್ಬು ಅರೆಯಲು ಅವಕಾಶ ಮಾಡಿಕೊಡಬೇಕು. ಇಲ್ಲವಾದರೆ ರೈತರಿಗೆ ತೊಂದರೆಯಾಗುತ್ತದೆ.
ನಾನು ಆತುರದ ತೀರ್ಮಾನ ಮಾಡುವುದಿಲ್ಲ: 29ರಂದು ಕೇಂದ್ರ ಸರ್ಕಾರ ರಚಿಸಿರುವ ಸಮಿತಿ ರಾಜ್ಯಕ್ಕೆ ಆಗಮಿಸುತ್ತಿದ್ದು, ಒಂದೇ ದಿನದಲ್ಲಿ ನಾನು ಆತುರದ ತೀರ್ಮಾನ ಮಾಡುವುದಿಲ್ಲ. ಮತ್ತೊಮ್ಮೆ ಸಕ್ಕರೆ ಕಾರ್ಖಾನೆ ಮಾಲೀಕರು, ಅಧಿಕಾರಿಗಳು, ಕೇಂದ್ರ ಸರ್ಕಾರ ಹಾಗೂ ಸಮಿತಿ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡುತ್ತೇವೆ. ಇದಕ್ಕೆ ಸಹಕಾರ ನೀಡಿ ಎಂದು ರೈತರಿಗೆ ಮನವಿ ಮಾಡಿದ್ದೇನೆ.
ನಾವು ರೈತರ ಪರವಾಗಿರುವಾಗ ಪ್ರತಿಭಟನೆ ಯಾಕೆ? ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದೇನೆ, ಕೇಂದ್ರ ಸಚಿವರ ಜತೆಗೂ ಚರ್ಚಿಸುವೆ. ಮಹಾರಾಷ್ಟ್ರ ಸಿಎಂ ಅವರನ್ನು ಭೇಟಿ ಮಾಡುವೆ. ನಮ್ಮ ರಾಜ್ಯದವರೆಲ್ಲ ಸೇರಿ ಒಟ್ಟಾಗಿ ತೀರ್ಮಾನ ಮಾಡಬೇಕಿದೆ.
ಸಕ್ಕರೆ ಕಾರ್ಖಾನೆ ಆರಂಭ ವಿಚಾರವಾಗಿ ಮನವಿ ಮಾಡುತ್ತೇನೆ. ಕಬ್ಬು ಅರೆಯುವುದು ಆರಂಭವಾಗಲಿ. ಈಗಾಗಲೇ ಮಹಾರಾಷ್ಟ್ರದಲ್ಲಿ ಕಬ್ಬು ಅರೆಯುವುದು ಆರಂಭವಾಗಿದೆ. ನಮ್ಮ ಕಬ್ಬು ಬೆಳೆ ಮಹಾರಾಷ್ಟ್ರಕ್ಕೆ ಹೋಗುವುದಕ್ಕೆ ಅವಕಾಶ ನೀಡುವುದು ಬೇಡ. ಇದರಿಂದ ರೈತರು ಹಾಗೂ ಸರ್ಕಾರಕ್ಕೆ ತೊಂದರೆಯಾಗುತ್ತದೆ.
ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ನೀಡಲು ನಾವು ಮಹಾರಾಷ್ಟ್ರ ಸಿಎಂ ಜೊತೆ ಸೇರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕಾಗಿದೆ. ಈ ಬಗ್ಗೆ ಚರ್ಚೆ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರದ ಸಮಿತಿ ರಾಜ್ಯಕ್ಕೆ ಬಂದಾಗ ಅದರ ಮುಂದೆ ನಾನು ಬರುತ್ತೇನೆ, ಕಬ್ಬು ಬೆಳೆಗಾರರ ಪರವಾಗಿ ನಾನು ಮಾತನಾಡುತ್ತೇನೆ ಎಂದು ಸಿಎಂ ಭರವಸೆ ನೀಡಿದರು.
ಸಚಿವರಾದ ಸತೀಶ್ ಜಾರಕಿಹೊಳಿ, ಲಕ್ಷ್ಮಣ್ ಸವದಿ, ಸಂತೋಷ್ ಲಾಡ್, ಶಾಸಕರಾದ ಯಶವಂತರಾಯಗೌಡ ಪಾಟೀಲ್, ಎನ್.ಎಚ್. ಕೋನರೆಡ್ಡಿ, ವಿವಿಧ ಸಕ್ಕರೆ ಕಾರ್ಖಾನೆಗಳ ಮಾಲೀಕರು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.




By
ForthFocus™