ಕುಂದಾಪುರ, ಅ.29: ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್, ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ಕುಂದಾಪುರದ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಆಶ್ರಯದಲ್ಲಿ ನಡೆದ ಕಾರಂತರ ಕಥನಗಳ ವರ್ತಮಾನದ ಮರುಓದು ವಿಷಯದ ಕುರಿತು ನಡೆದ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕಾರಂತರ ಕಥನಗಳಲ್ಲಿ ಸಾಮಾಜಿಕ ನ್ಯಾಯ ಎಂಬ ವಿಷಯದ ಕುರಿತ ಗೋಷ್ಠಿ ಕಾಲೇಜಿನ ಮೂಕಾಂಬಿಕಾ ಸಭಾಂಗಣದಲ್ಲಿ ನಡೆಯಿತು. ಕಾಸರಗೋಡು ಪೆರಿಯದ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಪ್ರೊ. ಚೇತನ್ ಮುಂಡಾಜೆ ಮಾತನಾಡಿ, ಕಾರಂತರ ಕಥನಗಳು ಮನುಷ್ಯ ಕೇಂದ್ರಿತ ಕಥನಗಳಾಗಿವೆ. ಆಧುನಿಕ ಮನುಷ್ಯನು ಸಮಾಜ ಜೀವಿಯಾಗಿ ಎದುರಿಸುವ ನೋವು- ನಲಿವು, ಸವಾಲುಗಳು ಕಾರಂತ ಕಥನದ ಕೇಂದ್ರ ಕಾಳಜಿಯಾಗಿವೆ. ಕಾರಂತರು ಸೃಷ್ಟಿಸಿದ ಪಾತ್ರಗಳು ಬದುಕಿಗೆ ವಿಮುಖಗೊಳ್ಳದೆ ಸವಾಲುಗಳನ್ನು ಎದುರಿಸುತ್ತ ಬದುಕು ರೂಪಿಸುತ್ತವೆ. ಕಾರಂತರ ಕಾದಂಬರಿಗಳು ಸಮಾಜ ವ್ಯವಸ್ಥೆಯ ಜೀವಂತ ಪ್ರತಿನಿಧಿಗಳಾಗಿವೆ. ಮಾನವನ ಇರವು ಮತ್ತು ಅರಿವನ್ನು ರೂಪಿಸುವಲ್ಲಿ ಸಾಮಾಜಿಕ ವ್ಯವಸ್ಥೆಯು ಪ್ರಧಾನ ಪಾತ್ರವಹಿಸುತ್ತವೆ. ಸಾಮಾಜಿಕ ವ್ಯವಸ್ಥೆಯಲ್ಲಿರುವ ಅಸಮಾನತೆ, ಲಿಂಗ ತಾರತಮ್ಯ, ಜಾತಿ ವ್ಯವಸ್ಥೆಯ ಕರಾಳ ಚಿತ್ರಣ ಇವುಗಳ ಜೊತೆಯಲ್ಲಿ ಬದುಕನ್ನು ಗೆಲ್ಲುವ ಚಿತ್ರಣವಿದೆ. ಪರಂಪರೆ ಮತ್ತು ಆಧುನಿಕತೆ ಕಾರಂತ ಕಥನಗಳನ್ನು ರೂಪಿಸಿರುವ ಅಂಶಗಳು. ಸಮಾಜದಲ್ಲಿ ಬೇರೂರಿರುವ ಅನೇಕ ಜಡ ನಂಬಿಕೆಗಳನ್ನು ಕಾರಂತ ಕಥನಗಳು ಮುಖಾಮುಖಿಯಾಗುವ ಮೂಲಕ ಪ್ರಶ್ನಿಸುತ್ತವೆ. ಮಾನವ ಆಧುನಿಕ ಜೀವನ ಕ್ರಮವನ್ನು ರೂಢಿಸುವ ಮೂಲಕ ವೈಚಾರಿಕ ದೃಷ್ಟಿಯನ್ನು ಬೆಳೆಸಿಕೊಳ್ಳಬೇಕು. ಬಾಳ್ವೆಯೇ ಬೆಳಕು ಎನ್ನುವ ತಾತ್ತ್ವಿಕ ಚಿಂತನೆ ಮನುಷ್ಯನ ಪ್ರಧಾನ ಕಾಳಜಿಯಾಗಬೇಕು ಎಂದರು.
ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ ಡಾ| ಯಶುಕುಮಾರ್ ಡಿ. ಹಾಗೂ ಕೋಟೇಶ್ವರ ಪದವಿ-ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ| ಸುಧಾಕರ ದೇವಾಡಿಗ ಪ್ರತಿಕ್ರಿಯೆ ನೀಡಿದರು. ಡಾ. ಶಿವರಾಮ ಕಾರಂತ ಟ್ರಸ್ಟ್ ಅಧ್ಯಕ್ಷ ಡಾ. ಗಣನಾಥ ಶೆಟ್ಟಿ ಎಕ್ಕಾರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾಲೇಜಿನ ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಕೆ.ಸಿ. ರಾಜೇಶ್, ನಾರಾಯಣ ನಾಯಕ್ ನೇರಳಕಟ್ಟೆ, ಪ್ರಾಂಶುಪಾಲ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ, ವಿಚಾರ ಸಂಕಿರಣ ಸಂಯೋಜಕ ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪ್ರವೀಣಾ ಎಮ್. ಪೂಜಾರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.




By
ForthFocus™