ಉಡುಪಿ, ಆ.25: ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಆಶಯದಂತೆ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸೆ. 4 ರಂದು ರಾತ್ರಿ 12.12ಕ್ಕೆ ಕೃಷ್ಣನಿಗೆ ಅರ್ಘ್ಯ ಪ್ರದಾನ, ಸೆ.5 ರಂದು ಬೆಳಿಗ್ಗೆ ಮಹಾಪೂಜೆ, ಅನ್ನಸಂತರ್ಪಣೆ, ರಾಜಾಂಗಣದಲ್ಲಿ ಹುಲಿವೇಷ ಕುಣಿತ ಇತರ ಸ್ಪರ್ಧೆಗಳು ನಡೆಯಲಿವೆ. ಮಧ್ಯಾಹ್ನ 3.30ಕ್ಕೆ ಚಿನ್ನದ ರಥದಲ್ಲಿ ಕೃಷ್ಣನ ಮೃಣ್ಮಯ ವಿಗ್ರಹದ ಮೆರವಣಿಗೆ, ವಿಟ್ಲಪಿಂಡಿ-ಶ್ರೀಕೃಷ್ಣ ಲೀಲೋತ್ಸವ ನಡೆಯಲಿದೆ ಎಂದು ಪರ್ಯಾಯ ಶ್ರೀ ಶೀರೂರು ಮಠದ ದಿವಾನರಾದ ಡಾ. ಉದಯಕುಮಾರ್ ಸರಳತ್ತಾಯ ಹೇಳಿದರು. ಮಂಗಳವಾರ ಶೀರೂರು ಮಠದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಮಲ್ಲಯುದ್ಧ ವಿಶೇಷ ಆಕರ್ಷಣೆ: ಮೊಟ್ಟಮೊದಲ ಬಾರಿಗೆ ವಿಟ್ಲಪಿಂಡಿಯ ಪ್ರಯುಕ್ತ ಮಲ್ಲಯುದ್ಧ ವಿಶೇಷ ವೇದಿಕೆಯಲ್ಲಿ ನಡೆಯಲಿದ್ದು, ಆಹ್ವಾನಿತ ಮಲ್ಲಯುದ್ಧ ಪ್ರವೀಣರಿಂದ ಪ್ರದರ್ಶನ ನಡೆಯಲಿದೆ. ಸೆಪ್ಟೆಂಬರ್ 6 ರಂದು ಜಗದೊಡೆಯನ ಜನ್ಮಾಷ್ಟಮಿ ಸಂಭ್ರಮದ ಸಮಾರೋಪ ಮತ್ತು ಬಹುಮಾನ ವಿತರಣೆ ನಡೆಯಲಿದೆ ಎಂದು ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೇಳಿದರು.
ಎರಡು ದಿನಗಳ ಹುಲಿ ಕುಣಿತ: ಸೆ. 6 ರಂದು ಅಷ್ಟಮಂಗಲ ಪ್ರಶ್ನೆಯ ಅನುಸಾರದಂತೆ ಕೋಟಿ ತುಳಸಿ ಅರ್ಚನೆ ಕೈಗೊಳ್ಳಲಾಗಿದೆ. ಜನ್ಮಾಷ್ಟಮಿ ಪರ್ವ ಕಾಲದಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಅಷ್ಟಮಿ ವಿಟ್ಲಪಿಂಡಿ ಉತ್ಸವದ ಅಂಗವಾಗಿ ಎರಡು ದಿನಗಳ ಕಾಲ ವಿಶೇಷ ವೇದಿಕೆಯಲ್ಲಿ ಹುಲಿವೇಷ ಸ್ಪರ್ಧೆ ನಡೆಯಲಿದೆ. ಭಕ್ತರ ಅನುಕೂಲಕ್ಕಾಗಿ ನೂತನ ಶೌಚಾಲಯ ಮತ್ತು ಚಪ್ಪಲಿ ಸ್ಟ್ಯಾಂಡ್ ನಿರ್ಮಿಸಲಾಗಿದೆ ಎಂದು ಶ್ರೀ ಶೀರೂರು ಮಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರು ಹೇಳಿದರು.








By
ForthFocus™