Monday, October 19, 2026
Monday, October 19, 2026

ಬೈಂದೂರು: ನುಗ್ಗಿಬೆಟ್ಟಿನಲ್ಲಿ ವಿಜಯನಗರ ಅರಸ ಇಮ್ಮಡಿ‌‌ ಹರಿಹರನ ಶಾಸನ ಅಧ್ಯಯನ

ಬೈಂದೂರು: ನುಗ್ಗಿಬೆಟ್ಟಿನಲ್ಲಿ ವಿಜಯನಗರ ಅರಸ ಇಮ್ಮಡಿ‌‌ ಹರಿಹರನ ಶಾಸನ ಅಧ್ಯಯನ

Date:

​ಉಡುಪಿ, ಆ.12: ಬೈಂದೂರು ತಾಲೂಕಿನ ಬಿಜೂರು ಗ್ರಾಮದ ನುಗ್ಗಿಬೆಟ್ಟಿನ ಕಲ್ಸಂಕದ ಲಕ್ಷ್ಮೀ ಕೊಠಾರ್ತಿ ಅವರ ಗದ್ದೆಯಲ್ಲಿ ಹೊಸ ಶಾಸನವೊಂದನ್ನು ಗುರುತಿಸಲಾಗಿದೆ. ಕುಂದಾಪುರ ತಾಲೂಕಿನ ಕೋಟೇಶ್ವರದ ಶ್ರೀ ಕಾಳಾವರ ವರದರಾಜ ಎಂ. ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಇತಿಹಾಸ ವಿಭಾಗದ ಮುಖ್ಯಸ್ಥರಾದ ವೈಶಾಲಿ ಜಿ.ಆರ್. ಅವರ ಮಾರ್ಗದರ್ಶನದಲ್ಲಿ ನೀಡಲಾದ ಯೋಜನಾ ಕಾರ್ಯದ ಅಡಿಯಲ್ಲಿ, ಪ್ರಥಮ ಬಿ.ಎ. ವಿದ್ಯಾರ್ಥಿನಿ ಐಶ್ವರ್ಯ ದೇವಾಡಿಗ ಅವರು ಈ ಮಹತ್ವದ ಶಾಸನವನ್ನು ಗುರುತಿಸಿ ದಾಖಲಿಸಿದ್ದಾರೆ. ಕಾಲೇಜಿನ ಪ್ರಾಂಶುಪಾಲರಾದ ನಾಗರಾಜ ವೈದ್ಯ ಎಂ ಇವರು ವಿದ್ಯಾರ್ಥಿನಿಯನ್ನು ಅಭಿನಂದಿಸಿದ್ದಾರೆ.

​ಬಾಣಭಟ್ಟನ ‘ಹರ್ಷಚರಿತ’ದಲ್ಲಿ ಉಲ್ಲೇಖಿತವಾದ “ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ | ತ್ರೈಲೋಕ್ಯ ನಗರಾರಂಭ ಮೂಲಸ್ಥಂಭಾಯ ಶಂಭವೇ ||” ಎಂಬ ಶೈವ ಪ್ರಾರ್ಥನಾ ಶ್ಲೋಕದೊಂದಿಗೆ ಈ ಶಿಲಾಶಾಸನವು ಪ್ರಾರಂಭವಾಗುತ್ತದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ರಚಿತವಾಗಿರುವ ಈ ಶಿಲಾಶಾಸನವು ಪ್ರಸ್ತುತ ಭೂಮಿಯಿಂದ ಮೂರು ಅಡಿ ಎತ್ತರ ಹಾಗೂ ಎರಡೂಕಾಲು ಅಡಿ ಅಗಲವಾಗಿದೆ. ಇದರಲ್ಲಿ 19 ಸಾಲುಗಳು ಕಂಡುಬಂದಿದ್ದು, ಉಳಿದ ಸಾಲುಗಳು ಭೂಮಿಯಲ್ಲಿ ಹುದುಗಿಹೋಗಿವೆ.

​ಶಾಸನದಲ್ಲಿ ‘ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಶಕವರ್ಷ ೧೩೦೭ನೇ ಕ್ರೋಧನ ಸಂವತ್ಸರದ ಕಾರ್ತಿಕ ಬಹುಳ ೧೦ ಆದಿವಾರ’ ಎಂಬ ಕಾಲಮಾನದ ಉಲ್ಲೇಖವಿದ್ದು, ಇದು ಸಾಮಾನ್ಯ ವರ್ಷ 1385ರ ನವೆಂಬರ್ 17, ಭಾನುವಾರಕ್ಕೆ ಸರಿಹೊಂದುತ್ತದೆ. ಈ ಕಾಲಘಟ್ಟದಲ್ಲಿ ವಿಜಯನಗರದ ಸಿಂಹಾಸನದಲ್ಲಿ ಸಂಗಮ ಮನೆತನದ ಇಮ್ಮಡಿ ಹರಿಹರನು ರಾಜ್ಯಭಾರ ಮಾಡುತ್ತಿರುವಾಗ, ಬಾರಕೂರು ರಾಜ್ಯವನ್ನು ಮಲ್ಲಪ್ಪ ಒಡೆಯ ಆಳ್ವಿಕೆ ಮಾಡುತ್ತಿದ್ದ ಎಂಬ ಐತಿಹಾಸಿಕ ಮಾಹಿತಿಯನ್ನು ಈ ಶಾಸನವು ದಾಖಲಿಸುತ್ತದೆ.

​ಶಾಸನದಲ್ಲಿ ಭೂಮಿಯ ಚತುಸ್ಸೀಮೆಯ ಉಲ್ಲೇಖ ಕಂಡುಬಂದಿರುವುದರಿಂದ ಇದೊಂದು ದಾನ ಶಾಸನವೆಂದು ದೃಢಪಡುತ್ತದೆ. ಶಾಸನದ ಮೇಲ್ಭಾಗದಲ್ಲಿ ಶಿವಲಿಂಗ ಹಾಗೂ ಇಕ್ಕೆಲಗಳಲ್ಲಿ ಎರಡು ವೃಷಭಗಳ ಉಬ್ಬುಶಿಲ್ಪದ ಕೆತ್ತನೆಗಳಿವೆ. ಉಳಿದ ಸಾಲುಗಳು ಗದ್ದೆಯಲ್ಲಿ ಹುದುಗಿರುವುದರಿಂದ ಮುಂದಿನ ದಿನಗಳಲ್ಲಿ ಈ ಶಾಸನದ ಹೆಚ್ಚಿನ ಅಧ್ಯಯನವನ್ನು ಕೈಗೊಳ್ಳಲಾಗುವುದೆಂದು ವೈಶಾಲಿ ಜಿ.ಆರ್. ತಿಳಿಸಿದ್ದಾರೆ.

ಶಾಸನದ ಕ್ಷೇತ್ರಕಾರ್ಯ ಪ್ರಾತ್ಯಕ್ಷಿಕೆಯಲ್ಲಿ, ಕೋಟೇಶ್ವರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಭಾಗೀರಥಿ ನಾಯ್ಕ್, ಎನ್.ಎಸ್.ಎಸ್. ಮತ್ತು ಇತಿಹಾಸ ವಿಭಾಗದ ಪ್ರಥಮ ಬಿ.ಎ. ವಿದ್ಯಾರ್ಥಿಗಳು ಹಾಗೂ ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾದ ಮಮತಾ ಪೂಜಾರಿ, ಎನ್.ಎಸ್.ಎಸ್. ಮತ್ತು ಇತಿಹಾಸ ವಿಭಾಗದ ಪ್ರಥಮ ಮತ್ತು ದ್ವಿತೀಯ ಬಿ.ಎ. ವಿದ್ಯಾರ್ಥಿಗಳು ಸಹಕಾರ ನೀಡಿರುತ್ತಾರೆ. ವಿದ್ಯಾರ್ಥಿಗಳ ಭಾಗವಹಿಸುವಿಕೆಯ ಕುರಿತು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಉಮೇಶ್ ಮಯ್ಯರವರು ಸಂತಸ ವ್ಯಕ್ತಪಡಿಸಿದ್ದಾರೆ.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!