


ಉಡುಪಿ, ಆ.5: ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್ ಸಂಸ್ಕೃತ ಪಾಠಶಾಲೆಯ ವೇದಪಾಠ ಉಪನ್ಯಾಸಕ, ಪಂಡಿತ ಪ್ರಹ್ಲಾದಾಚಾರ್ಯ ಕಾನಡೆ ಅವರು ಉಡುಪಿ ಶ್ರೀ ಭಂಡಾರಕೇರಿ ಮಠ ಕೊಡ ಮಾಡುವ ಪ್ರತಿಷ್ಠಿತ ‘ಅಥರ್ವೋದ್ಘೋಷ ವಾಕ್ಪತಿ’ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಪುರುಷೋತ್ತಮ ಕಾನಡೆ ಮತ್ತು ಪುಷ್ಪಾ ಅವರ ಪುತ್ರರಾದ ಪ್ರಹ್ಲಾದಾಚಾರ್ಯರು ಅಥರ್ವ ವೇದವನ್ನು 1994-2003ರವರೆಗೆ ಗುರುಗಳಾದ ವೇದಮೂರ್ತಿ ಶ್ರೀಧರಾಚಾರ್ಯ ಮತ್ತು ದಿನಕರ ಜೋಶಿ ಅವರಲ್ಲಿ ಅಧ್ಯಯನ ಮಾಡಿದ್ದಾರೆ. ಇದೀಗ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಸಂಸ್ಕೃತ ಪಾಠಶಾಲೆಯಲ್ಲಿ ಬೋಧಕರಾಗಿರುವುದು ವಿಶೇಷ. ಇವರಿಗೆ ‘ಅಥರ್ವೋದ್ಘೋಷ ವಾಕ್ಪತಿ’ ಪ್ರಶಸ್ತಿ ಭೂಷಣಪ್ರಾಯವಾಗಲಿದೆ. ಸಮಗ್ರವಾಗಿ ಅಥರ್ವವೇದವನ್ನು ಅಧ್ಯಯನ ಮಾಡಿ ನೂರಾರು ವಿದ್ಯಾರ್ಥಿಗಳಿಗೆ ಅದನ್ನು ಕಂಠಪಾಠ ಮಾಡಿಸುವ ಮೂಲಕ ಬೋಧನಾ ಕ್ರಮದಲ್ಲಿ ಅಪರೂಪದ ಸಾಧನೆ ಮಾಡಿರುವ ಕಾನಡೆ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಿರುವುದಾಗಿ ಮಠದ ಪೀಠಾಧಿಪತಿ ಶ್ರೀ ವಿದ್ಯೇಶತೀರ್ಥ ಸ್ವಾಮೀಜಿ ತಿಳಿಸಿದ್ದಾರೆ. ಪ್ರಶಸ್ತಿಯು ಸನ್ಮಾನ ಪತ್ರ, ಸ್ಮರಣಿಕೆ, ನಗದು ಪುರಸ್ಕಾರ ಒಳಗೊಂಡಿದೆ.
ಉಡುಪಿ ಸಮೀಪದ ಬಾರ್ಕೂರಿನ ಭಂಡಾರಕೇರಿ ಮೂಲ ಮಠದಲ್ಲಿ ಆ. 7 ರಂದು ಸಂಜೆ 6ಕ್ಕೆ ನಡೆಯಲಿರುವ ವಿದ್ವತ್ ಸಭೆಯಲ್ಲಿ ಗೌರವ ಪ್ರದಾನ ಮಾಡಲಾಗುವುದು. ಆದರ್ಶ ಕೀರ್ತಿಶೇಷ ಶ್ರೀ ವಿದ್ಯಾಮಾನ್ಯತೀರ್ಥರ ಪೀಠಾರೋಹಣ ಶತಮಾನೋತ್ಸವ ಸಂಭ್ರಮಾಚರಣೆ ಸಂದರ್ಭ ಬಾರ್ಕೂರಿನಲ್ಲಿ 47ನೇ ಚಾತುರ್ಮಾಸ್ಯ ವ್ರತದಲ್ಲಿರುವ ಶ್ರೀಗಳು ಪ್ರಶಸ್ತಿ ನೀಡಿ ಗೌರವಿಸಲಿದ್ದಾರೆ. 10 ವಿದ್ವಾಂಸರಿಗೆ ಸುಗ್ರೀವ, ಸುವ್ರತ ಪ್ರಶಸ್ತಿ ಬಾರ್ಕೂರಿನ ಶ್ರೀಮಠದಲ್ಲಿ ಚಾತುರ್ಮಾಸ ನಿಮಿತ್ತ ಚತುರ್ವೇದ ಪಾರಾಯಣ ಮಹಾ ಯಜ್ಞ ಸರಣಿಗೆ ಸಂಕಲ್ಪ ಮಾಡಲಾಗಿದೆ. ಇದೀಗ ಅಥರ್ವಣ ವೇದದ ಶೌನಕ ಶಾಖೆ ಪಾರಾಯಣ ಮತ್ತು ರಾಮ-ಕೃಷ್ಣ ಮಂತ್ರ ಜಪ ಸಂಪನ್ನಗೊಂಡಿದೆ. 9 ದಿನಗಳ ಕಾಲ ಈ ಪಾರಾಯಣದ ಜಪಗಳನ್ನು ನಡೆಸಿದ ರಾಜ್ಯ ಮತ್ತು ಹೊರ ರಾಜ್ಯದ 10 ಮಂದಿ ವೇದವಿದ್ವಾಂಸರಿಗೂ ಇದೇ ವೇದಿಕೆಯಲ್ಲಿ ಪ್ರಶಸ್ತಿ ಪ್ರದಾನ ಪೂರ್ವಕ ಸನ್ಮಾನ ಮಾಡ ಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ.
ವಿದ್ವಾಂಸರಾದ ಕಿರಣಾಚಾರ್ಯ, ದಿನೇಶಾಚಾರ್ಯ, ಮುಕುಲಾಚಾರ್ಯ, ಸಚಿನ್ ಆಚಾರ್ಯ, ಮಲ್ಹಾರ ಆಚಾರ್ಯ, ದೇವಿದಾಸಾಚಾರ್ಯ, ಪದ್ಮನಾಭ ಆಚಾರ್ಯ ಜೋಶಿ ಅವರಿಗೆ ‘ಅಥರ್ವೋದ್ಘೋಷ ಸುಗ್ರೀವ’ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ವಿದ್ವಾಂಸರಾದ ಲಕ್ಷ್ಮೀನಾರಾಯಣ ಭಟ್ಟ, ಸುಬ್ರಹ್ಮಣ್ಯ ಸರಳಾಯ ಅವರಿಗೆ ‘ಅಥರ್ವೋದ್ಘೋಷ ಸುವ್ರತ ’ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಸ್ವಾಮೀಜಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.




By
ForthFocus™