ತೊಕ್ಕೊಟ್ಟು, ಅ.29: ದಕ್ಷಿಣ ಕನ್ನಡ ಜಿಲ್ಲಾ ತಮಿಳು ಮರುತ್ತುವರ್ ಸಮಾಜದ ದಶಮಾನೋತ್ಸವ ಸಮಾರಂಭವು ತೊಕ್ಕೊಟ್ಟು ಒಳಪೇಟೆಯ ಕ್ಲಿಕ್ ಹಾಲ್ನಲ್ಲಿ ನಡೆಯಿತು. ಸಮಾಜದ ಹಕ್ಕುಗಳು, ಶೈಕ್ಷಣಿಕ ಅವಕಾಶಗಳು ಹಾಗೂ ಜಾತಿ ಪ್ರಮಾಣಪತ್ರ ಪಡೆಯುವಲ್ಲಿ ಎದುರಾಗುತ್ತಿರುವ ಸಮಸ್ಯೆಗಳ ಕುರಿತು ಸಮಾರಂಭದಲ್ಲಿ ಪ್ರಮುಖವಾಗಿ ಚರ್ಚಿಸಲಾಯಿತು. ಮರುತ್ತುವರ್ ಸಮಾಜವನ್ನು ಪ್ರವರ್ಗ 2ಎಗೆ ಅಧಿಕೃತವಾಗಿ ಸೇರಿಸಿ, ಅರ್ಹ ಸಮುದಾಯದ ಸದಸ್ಯರಿಗೆ ಜಾತಿ ಪ್ರಮಾಣಪತ್ರ ನೀಡುವ ಕುರಿತು ಸ್ಪಷ್ಟ ಸರ್ಕಾರಿ ಆದೇಶ ಹೊರಡಿಸಬೇಕೆಂದು ಒತ್ತಾಯಿಸಲಾಯಿತು.
ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಕೆ.ಟಿ. ಸುವರ್ಣ ಹಾಗೂ ಲೆಕ್ಸ್ ಜೂರಿಸ್ ಲಾ ಚೇಂಬರ್, ಮಂಗಳೂರು ಇದರ ವಕೀಲರಾದ ಮಹಮ್ಮದ್ ಅಸ್ಗರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇಬ್ಬರೂ ಸಭೆಯ ಗೌರವಾಧ್ಯಕ್ಷತೆಯನ್ನು ವಹಿಸಿದ್ದರು.
ಕೇರಳ ರಾಜ್ಯ ಮರುತ್ತುವರ್ ಸಮಾಜದ ಅಧ್ಯಕ್ಷರಾದ ಪಿ. ಸೆಲ್ವರಾಜ್, ತಮಿಳುನಾಡು ಮರುತ್ತುವರ್ ಸಮಾಜದ ಅಧ್ಯಕ್ಷರಾದ ಕೆ.ಟಿ. ರಘುಪತಿ, ಪಾಂಡಿಚೇರಿ ಮರುತ್ತುವರ್ ಸಮಾಜದ ಅಧ್ಯಕ್ಷರಾದ ಎಲ್. ರಾಜಾ, ಕರ್ನಾಟಕ ರಾಜ್ಯ ಮರುತ್ತುವರ್ ಸಮಾಜದ ಅಧ್ಯಕ್ಷರಾದ ಪಿ. ಕುಮಾರ್ ಸಾಲತ್ತೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ಎಸ್. ರವಿ ಬೆಳ್ತಂಗಡಿ ಉಪಸ್ಥಿತರಿದ್ದರು.
ಜಾತಿ ಪ್ರಮಾಣ ಪತ್ರಕ್ಕೆ ಸ್ಪಷ್ಟ ಆದೇಶ ಹೊರಡಿಸಲು ಆಗ್ರಹ: ಸಮಾಜದ ಪ್ರಧಾನ ಕಾರ್ಯದರ್ಶಿ ಎ. ಶಶಿಕುಮಾರ್ ಮರುತ್ತುವರ್ ಮಾತನಾಡಿ, ಮರುತ್ತುವರ್ ಸಮಾಜದವರು ಕಳೆದ 70 ವರ್ಷಗಳಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಕ್ಷೌರಿಕ ವೃತ್ತಿ ಸೇರಿದಂತೆ ಹಲವು ಕಸುಬುಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಆದರೆ, ನಮ್ಮ ಮಕ್ಕಳಿಗೆ ಮತ್ತು ವಿದ್ಯಾರ್ಥಿಗಳಿಗೆ ಜಾತಿ ಪ್ರಮಾಣಪತ್ರ ದೊರೆಯದ ಕಾರಣ ಶಿಕ್ಷಣ ಹಾಗೂ ಇತರ ಸೌಲಭ್ಯಗಳನ್ನು ಪಡೆಯುವಲ್ಲಿ ತೊಂದರೆ ಎದುರಾಗುತ್ತಿದೆ.
ಈ ಸಮಸ್ಯೆಯ ಪರಿಹಾರಕ್ಕಾಗಿ 2021ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ನಮ್ಮ ಮನವಿಯನ್ನು ಪರಿಶೀಲಿಸಿದ ಹಿಂದುಳಿದ ವರ್ಗಗಳ ಆಯೋಗವು ಮರುತ್ತುವರ್ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸಲು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅದರಂತೆ 2025–26ರ ಜಾತಿ ಗಣತಿಯಲ್ಲಿ ಕ್ರಮ ಸಂಖ್ಯೆ ಎ-950ರಲ್ಲಿ ಮರುತ್ತುವರ್ ಸಮಾಜದ ಹೆಸರನ್ನು ಪ್ರಕಟಿಸಲಾಗಿದೆ ಎಂದು ತಿಳಿಸಲಾಗಿದೆ.
ಆದರೆ, ಕೇವಲ ಪಟ್ಟಿಯಲ್ಲಿ ಹೆಸರು ಪ್ರಕಟಿಸುವುದರಿಂದ ನಮ್ಮ ಸಮಸ್ಯೆ ಸಂಪೂರ್ಣವಾಗಿ ಪರಿಹಾರವಾಗುವುದಿಲ್ಲ. ನಮ್ಮ ಪೂರ್ವಜರ ಕಾಲದಿಂದಲೂ ಮರುತ್ತುವರ್ ಎಂಬ ಗುರುತಿನೊಂದಿಗೆ ಬದುಕುತ್ತಿರುವ ಸಮಾಜದ ಸದಸ್ಯರಿಗೆ ಅಧಿಕೃತ ಜಾತಿ ಪ್ರಮಾಣಪತ್ರ ದೊರೆಯಬೇಕು. ನಮ್ಮ ನೋಂದಾಯಿತ ಸಂಘವು ನೀಡುವ ದೃಢೀಕರಣ ಪತ್ರವನ್ನು ಪರಿಗಣಿಸಿ, ಅರ್ಹರಿಗೆ ಗ್ರಾಮ ಆಡಳಿತಾಧಿಕಾರಿಗಳು ಮತ್ತು ತಹಶೀಲ್ದಾರ್ ಮೂಲಕ ಜಾತಿ ಪ್ರಮಾಣಪತ್ರ ನೀಡಲು ಸರ್ಕಾರ ಸ್ಪಷ್ಟ ಮಾರ್ಗಸೂಚಿ ಅಥವಾ ಆದೇಶ ಹೊರಡಿಸಬೇಕು. ಜೊತೆಗೆ ಸಮಾಜವನ್ನು ಪ್ರವರ್ಗ 2ಎ ಪಟ್ಟಿಯಲ್ಲಿ ಅಧಿಕೃತವಾಗಿ ಸೇರಿಸಿ, ನಮ್ಮ ಬೇಡಿಕೆಗೆ ಶೀಘ್ರ ನ್ಯಾಯ ಒದಗಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಸರ್ಕಾರದ ಗಮನ ಸೆಳೆಯಲು ಮನವಿ: ಕರ್ನಾಟಕ ಸರ್ಕಾರದ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯರಾದ ಕೆ.ಟಿ. ಸುವರ್ಣ ಮಾತನಾಡಿ, ನ್ಯಾಯಮೂರ್ತಿ ಜಯಪ್ರಕಾಶ್ ಹೆಗ್ಡೆ ಅವರ ನೇತೃತ್ವದ ಆಯೋಗದ ಅವಧಿಯಲ್ಲಿ ಕರ್ನಾಟಕದಲ್ಲಿ ದಶಕಗಳಿಂದ ನೆಲೆಸಿರುವ ಹಲವು ಸಮುದಾಯಗಳ ಬೇಡಿಕೆಗಳನ್ನು ಪರಿಶೀಲಿಸಿ ಶಿಫಾರಸುಗಳನ್ನು ಮಾಡಲಾಗಿದೆ. ಮರುತ್ತುವರ್ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವ ಕುರಿತು ಶಿಫಾರಸು ಮಾಡಿರುವುದಾಗಿ ತಿಳಿದುಬಂದಿದೆ. ಸರ್ಕಾರ ಈ ವಿಚಾರವನ್ನು ಆದಷ್ಟು ಬೇಗ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂಬ ವಿಶ್ವಾಸವಿದೆ. ಈ ನಿಟ್ಟಿನಲ್ಲಿ ನನ್ನ ಸಹಕಾರವೂ ಇರಲಿದೆ ಎಂದರು.
ಸಮಾಜಕ್ಕೆ ಕಾನೂನು ನೆರವು ನೀಡಲು ವಕೀಲ ಮಹಮ್ಮದ್ ಅಸ್ಗರ್ ಭರವಸೆ: ಕಾರ್ಯಕ್ರಮದ ಗೌರವಾಧ್ಯಕ್ಷತೆ ವಹಿಸಿದ್ದ ವಕೀಲ ಮಹಮ್ಮದ್ ಅಸ್ಗರ್ ಮಾತನಾಡಿ, ಮರುತ್ತುವರ್ ಸಮಾಜದ ಸದಸ್ಯರಿಗೆ ಜಾತಿ ಪ್ರಮಾಣಪತ್ರ, ಸರ್ಕಾರಿ ಸೌಲಭ್ಯಗಳು ಹಾಗೂ ಇತರ ಕಾನೂನು ಸಂಬಂಧಿತ ವಿಚಾರಗಳಲ್ಲಿ ಯಾವುದೇ ಸಮಸ್ಯೆ ಎದುರಾದರೆ ಸೂಕ್ತ ಕಾನೂನು ಮಾರ್ಗದರ್ಶನ ಮತ್ತು ನೆರವು ಪಡೆಯಲು ತಮ್ಮನ್ನು ಸಂಪರ್ಕಿಸಬಹುದು ಎಂದು ಭರವಸೆ ನೀಡಿದರು.
ಸಾಧಕರಿಗೆ ಸನ್ಮಾನ: ದಶಮಾನೋತ್ಸವದ ಅಂಗವಾಗಿ ಕೇರಳ, ತಮಿಳುನಾಡು ಹಾಗೂ ಪಾಂಡಿಚೇರಿ ರಾಜ್ಯಗಳ ಸಮಾಜ ಸೇವಕರನ್ನು ಗೌರವಿಸಲಾಯಿತು. ಶೈಕ್ಷಣಿಕ, ಕ್ರೀಡಾ ಮತ್ತು ಕಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ನೆರವೇರಿಸಲಾಯಿತು. ಸಮಾಜದ ಹಿರಿಯ ಕ್ಷೌರಿಕ ವೃತ್ತಿದಾರರನ್ನು, ವಿಶೇಷವಾಗಿ 60 ವರ್ಷ ಮೇಲ್ಪಟ್ಟವರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಸಮಾರಂಭದಲ್ಲಿ ಸಮಾಜದ ತಾಲೂಕು ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು, ಹಾಗೂ ನೂರಾರು ಸಮಾಜ ಬಾಂಧವರು ಭಾಗವಹಿಸಿದ್ದರು.
ಸಮಾಜದ ಪ್ರಧಾನ ಕಾರ್ಯದರ್ಶಿ ಎ. ಶಶಿಕುಮಾರ್ ಮರುತ್ತುವರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.




By
ForthFocus™