Thursday, October 1, 2026
Thursday, October 1, 2026

ವಿಶ್ವ ಹೃದಯ ದಿನ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣ

ವಿಶ್ವ ಹೃದಯ ದಿನ: ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದಲ್ಲಿ ಹೃದಯ ಆರೋಗ್ಯ ಜಾಗೃತಿ ಶಿಲ್ಪ ಅನಾವರಣ

Date:

ಮಣಿಪಾಲ, ಸೆ.29: ವಿಶ್ವ ಹೃದಯ ದಿನದ ಅಂಗವಾಗಿ ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ನೆಲ ಮಹಡಿಯ ಒಪಿಡಿ ಲಾಂಜ್‌ನಲ್ಲಿ ಹೃದಯ ಆರೋಗ್ಯ ಜಾಗೃತಿ ಶಿಲ್ಪವನ್ನು ಇಂದು ಅನಾವರಣಗೊಳಿಸಲಾಯಿತು. ಕಸ್ತೂರ್ಬಾ ಆಸ್ಪತ್ರೆ, ಮಣಿಪಾಲದ ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಅವರು ಶಿಲ್ಪವನ್ನು ಅನಾವರಣಗೊಳಿಸಿದರು. ಮಾಹೆ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಕಸ್ತೂರ್ಬಾ ಆಸ್ಪತ್ರೆಯ ಹೃದ್ರೋಗ ವಿಭಾಗ ಹಾಗೂ ಕಾರ್ಡಿಯೋ ವ್ಯಾಸ್ಕುಲರ್ ಮತ್ತು ಥೊರಾಸಿಕ್ ಸರ್ಜರಿ ವಿಭಾಗದ ವತಿಯಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಹೃದಯದ ಒಂದು ಬಡಿತವನ್ನೂ ನಿರ್ಲಕ್ಷಿಸಬೇಡಿ ಎಂಬುದು ಈ ವರ್ಷದ ವಿಶ್ವ ಹೃದಯ ದಿನದ ಸಂದೇಶ. ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲದ ಸಮುದಾಯ ವೈದ್ಯಕೀಯ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಅಶ್ವಿನಿ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಅದೇ ವಿಭಾಗದ ಶ್ರೀನಾಥ್ ಮಣಿಪಾಲ್ ಅವರು ಈ 3 ಡಿ ಕಲಾಕೃತಿಯನ್ನು ರೂಪಿಸಿದ್ದಾರೆ. ಈ ಶಿಲ್ಪವು ಈ ವರ್ಷದ ಧ್ಯೇಯವಾಕ್ಯದ ಆಶಯವನ್ನು ಅರ್ಥಪೂರ್ಣವಾಗಿ ಬಿಂಬಿಸುತ್ತದೆ. ಆಸ್ಪತ್ರೆಯ ಅತ್ಯಂತ ಜನನಿಬಿಡ ಸ್ಥಳಗಳಲ್ಲಿ ಒಂದಾದ ಒಪಿಡಿ ಲಾಂಜ್‌ನಲ್ಲಿ ಇದನ್ನು ಅನಾವರಣಗೊಳಿಸಲಾಯಿತು. ಹೃದಯದ ಆರೈಕೆಯ ಮಹತ್ವವನ್ನು ರೋಗಿಗಳು, ಅವರ ಆರೈಕೆದಾರರು ಮತ್ತು ಸಂದರ್ಶಕರಿಗೆ ಇದು ಪ್ರತಿದಿನ ನೆನಪಿಸಲಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಅವಿನಾಶ್ ಶೆಟ್ಟಿ ಅವರು, “ಭಾರತದಲ್ಲಿ ಸಂಭವಿಸುವ ಸಾವುಗಳಿಗೆ ಹೃದ್ರೋಗವು ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಆದರೆ ಇದರಲ್ಲಿ ಬಹುಪಾಲನ್ನು ತಡೆಗಟ್ಟಲು ಸಾಧ್ಯವಿದೆ. ಎದೆಯಲ್ಲಿ ಅಸ್ವಸ್ಥತೆ, ಉಸಿರಾಟದ ತೊಂದರೆ ಅಥವಾ ಅಸಹಜ ಆಯಾಸದಂತಹ ಆರಂಭಿಕ ಎಚ್ಚರಿಕೆಯ ಲಕ್ಷಣಗಳನ್ನು ಅನೇಕರು ತಡವಾಗುವವರೆಗೂ ನಿರ್ಲಕ್ಷಿಸುತ್ತಾರೆ. ಪ್ರತಿದಿನ ಸಾವಿರಾರು ಜನರು ಈ ಲಾಂಜ್ ಮೂಲಕ ಹಾದುಹೋಗುತ್ತಾರೆ. ಈ ಶಿಲ್ಪವು ಪ್ರತಿಯೊಬ್ಬರನ್ನೂ ಒಂದು ಕ್ಷಣ ನಿಂತು ತಮ್ಮ ಹೃದಯದ ಬಗ್ಗೆ ಯೋಚಿಸುವಂತೆ ಮಾಡಲಿ ಎಂಬುದು ನಮ್ಮ ಆಶಯ. ಈ ವರ್ಷದ ಧ್ಯೇಯವಾಕ್ಯಕ್ಕೆ ಇಷ್ಟು ಅರ್ಥಪೂರ್ಣ ರೂಪ ನೀಡಿದ ಶ್ರೀನಾಥ್ ಮತ್ತು ಡಾ. ಅಶ್ವಿನಿ ಕುಮಾರ್ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಆರೋಗ್ಯಕರ ಆಹಾರ, ನಿಯಮಿತ ದೈಹಿಕ ಚಟುವಟಿಕೆ, ತಂಬಾಕು ಸೇವನೆಯಿಂದ ದೂರವಿರುವುದು ಮತ್ತು ಸಕಾಲದಲ್ಲಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ದೊಡ್ಡ ಬದಲಾವಣೆ ತರಬಲ್ಲದು. ಈ ವಿಶ್ವ ಹೃದಯ ದಿನದಂದು ನಮ್ಮ ಸಂದೇಶ ಸರಳ: ಹೃದಯದ ಒಂದು ಬಡಿತವನ್ನೂ ನಿರ್ಲಕ್ಷಿಸಬೇಡಿ, ಆರೋಗ್ಯ ತಪಾಸಣೆಯನ್ನೂ ತಪ್ಪಿಸಬೇಡಿ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಹೃದ್ರೋಗ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಗಣೇಶ್ ಪಿ ಹಾಗೂ ಕಾರ್ಡಿಯೋ ವ್ಯಾಸ್ಕುಲರ್ ಮತ್ತು ಥೊರಾಸಿಕ್ ಸರ್ಜರಿ ವಿಭಾಗದ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರಾದ ಡಾ. ಗಣೇಶ್ ಕಾಮತ್ ಎಸ್ , ಪ್ರಾದ್ಯಾಪಕ ಡಾ ಟಾಮ್ ದೇವಾಸಿಯಾ ಉಪಸ್ಥಿತರಿದ್ದರು. ಬೋಧಕ ಸಿಬ್ಬಂದಿ, ವೈದ್ಯರು, ಶುಶ್ರೂಷ ಸಿಬ್ಬಂದಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ಭಾಗವಹಿಸಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಉಡುಪಿ ಜಿಲ್ಲಾ ಅತ್ಯುತ್ತಮ ಉಪನ್ಯಾಸಕ ಪ್ರಶಸ್ತಿಗೆ ಐವರು ಆಯ್ಕೆ

ಉಡುಪಿ, ಅ.1: ಕರ್ನಾಟಕ ಅನುದಾನರಹಿತ ಪದವಿಪೂರ್ವ ಕಾಲೇಜುಗಳ ಆಡಳಿತ ಮಂಡಳಿಗಳ ಸಂಘಟನೆ...
error: Content is protected !!