ಉಡುಪಿ, ಅ.17: ಹೆಚ್ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ ಬಗ್ಗೆ ಅರಿವು ಬೆಳೆಸುವುದು ಹಾಗೂ ಹೆಚ್ಐವಿ ಸೋಂಕಿತರ ಬಗೆಗಿನ ತಾರತಮ್ಯ ಮತ್ತು ಕಳಂಕವನ್ನು ನಿವಾರಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಸೊಸೈಟಿ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ ಉಡುಪಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮತ್ತು ಅಮೇಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಸಹಯೋಗದೊಂದಿಗೆ ಇಂದು ಉಡುಪಿಯ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದ ಮುಂಭಾಗದಲ್ಲಿ ಜಿಲ್ಲಾ ಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮವನ್ನು ಅಪರ ಜಿಲ್ಲಾಧಿಕಾರಿ ಅಬಿದ್ ಗದ್ಯಾಳ್, ಹಸಿರು ಬಾವುಟ ತೋರಿಸುವ ಮೂಲಕ ರೆಡ್ ರಿಬ್ಬನ್ ರನ್ ಮ್ಯಾರಥಾನಗೆ ಚಾಲನೆ ನೀಡಿದರು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು,ಎಸ್.ವಿ, ಪ್ರಾಸ್ತಾವಿಕವಾಗಿ ಮಾತನಾಡಿ ಯುವಜನರು ದೇಶದ ಭವಿಷ್ಯವಾಗಿದ್ದು, ಅವರಲ್ಲಿ ಆರೋಗ್ಯದ ಬಗ್ಗೆ ಸರಿಯಾದ ತಿಳಿವಳಿಕೆ ಮೂಡಿಸುವುದು ಅತ್ಯಂತ ಮಹತ್ವದ್ದಾಗಿದೆ. ಕ್ರೀಡೆ ಮತ್ತು ಮ್ಯಾರಥಾನ್ಗಳಂತಹ ಚಟುವಟಿಕೆಗಳು ದೈಹಿಕ ಸದೃಢತೆಯನ್ನು ಹೆಚ್ಚಿಸುವುದರ ಜೊತೆಗೆ ಸಾಮಾಜಿಕ ಜಾಗೃತಿಯನ್ನು ಮೂಡಿಸಲು ಉತ್ತಮ ವೇದಿಕೆಯಾಗಿವೆ. ಎಂದರು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಬಸವರಾಜ ಜಿ. ಹುಬ್ಬಳ್ಳಿ ವಹಿಸಿದ್ದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ರೋಷನ್ ಕುಮಾರ್ ಶೆಟ್ಟಿ, ಅಮೇಚೂರ್ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಹರಿಪ್ರಸಾದ ರೈ, ಕಾರ್ಯದರ್ಶಿ ದಿನೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲಾ ಮಟ್ಟದ 5 ಕಿ.ಮೀ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಸುಮಾರು 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಈ ಮ್ಯಾರಥಾನ್ ಕಾರ್ಯಕ್ರಮದಲ್ಲಿ ಪುರುಷರ ವಿಭಾಗದಲ್ಲಿ ಉಡುಪಿ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಚೆನ್ನಬಸವ ಪ್ರಥಮ, ಮಂಜುನಾಥ ದ್ವಿತೀಯ ಹಾಗೂ ಚಂದ್ರಶೇಕರ್ ತೃತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ನಿಟ್ಟೆಯ ಡಾ. ಎನ್.ಎಸ್ ಎ .ಎಮ್ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಾದ ನಂದಿನಿ ಪ್ರಥಮ, ದೀಕ್ಷಿತಾ ಜಿ. ದ್ವೀತಿಯ ಹಾಗೂ ಸಾಕ್ಷಿ ತೃತೀಯ ಸ್ಥಾನ ಪಡೆದಿದ್ದು, ವಿಜೇತರಿಗೆ ನಗದು ಬಹುಮಾನ ಮತ್ತು ಪದಕ ನೀಡಿ ಗೌರವಿಸಲಾಯಿತು. ಜಿಲ್ಲಾ ಮಟ್ಟದ ವಿಜೇತರು ರಾಜ್ಯ ಮಟ್ಟದಲ್ಲಿ ನಡೆಯುವ ಮ್ಯಾರಥಾನ ಸ್ಪರ್ಧೆಗೆ ಭಾಗವಹಿಸಲು ಅವಕಾಶ ಪಡೆದುಕೊಂಡಿರುತ್ತಾರೆ.




By
ForthFocus™