ಕಾರ್ಕಳ, ಆ.1: ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮಾಳ ಗ್ರಾಮ ಪಂಚಾಯಿತಿಗೆ ಸೇರಿದ ಮಾಳಚೌಕಿ ಧರ್ಮಚಾವಡಿ ಹೆಗ್ಗಡತಿ ಎಂಬ ಹೆಸರಿನ ಮನೆಯ ಹೊರ ಭಾಗದಲ್ಲಿರುವ ಈ ಶಾಸನವು ಹಿಂದೊಮ್ಮೆ ಧರ್ಮಚಾವಡಿ ಮನೆಯ ದುಗ್ಗಲ್ಲಾಯ ದೈವಗುಂಡದ ಬಳಿ ಇತ್ತೆಂದು, ಕಾಲಕ್ರಮೇಣ ಮನೆಯು ವಿಸ್ತರಣೆಗೊಂಡಾಗ ಮನೆಯ ಹೊರಭಾಗದಲ್ಲಿ ಶಾಸನವನ್ನು ಸಂರಕ್ಷಿಸಿ, ನಿಲ್ಲಿಸಲಾಯಿತು ಎಂದು ಪಾಂಡಿರಾಜ ಪೆರ್ಗಡೆ ಮತ್ತು ಅವರ ಸಹೋದರ ರವಿರಾಜ ಪೆರ್ಗಡೆ ತಿಳಿಸಿರುವರು.
ಆದರೆ ಈ ಶಾಸನದ ಕುರಿತು ಯಾವುದೇ ಅಧಿಕೃತ ದಾಖಲೆಗಳು ಲಭ್ಯವಿಲ್ಲದ ಕಾರಣ ಡಾ. ಪಿ. ಸತ್ಯನಾರಾಯಣ ಭಟ್ (ಖ್ಯಾತ ಆಯುರ್ವೇದ ವೈದ್ಯರು) ಅವರ ಪ್ರಾಥಮಿಕ ಮಾಹಿತಿಯ ಮೇರೆಗೆ ಪ್ರಾಚ್ಯಸಂಚಯ ಸಂಶೋಧನ ಕೇಂದ್ರ-ಉಡುಪಿ ಇದರ ಅಧ್ಯಯನ ನಿರ್ದೇಶಕರಾದ ಪ್ರೊ. ಎಸ್. ಎ. ಕೃಷ್ಣಯ್ಯ ಅವರು ತಮ್ಮ ಸಂಶೋಧನ ತಂಡದೊಂದಿಗೆ ಸದರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಅಪ್ರಕಟಿತ ಶಾಸನದ ಅಧ್ಯಯನವನ್ನು ಇತಿಹಾಸ & ಪುರಾತತ್ತ್ವ ಸಂಶೋಧನಾರ್ಥಿ – ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಮಾಡಿದ್ದು ಅದರ ಸಂಶೋಧನ ವಿವರಗಳು ಈ ಕೆಳಗಿನಂತಿವೆ.
ಬಾಣಭಟ್ಟನ ‘ಹರ್ಷಚರಿತ’ದಲ್ಲಿ ಉಲ್ಲೇಖಿತವಾದ “ನಮಸ್ತುಂಗ ಶಿರಶ್ಚುಂಬಿ ಚಂದ್ರಚಾಮರ ಚಾರವೇ | ತ್ರೈಲೋಕ್ಯ ನಗರಾರಂಭ ಮೂಲಸ್ಥಂಭಾಯ ಶಂಭವೇ ||” ಎಂಬ ಶೈವ ಪ್ರಾರ್ಥನಾ ಶ್ಲೋಕದೊಂದಿಗೆ ಈ ಶಿಲಾಶಾಸನವು ಪ್ರಾರಂಭವಾಗುತ್ತದೆ. ಕನ್ನಡ ಲಿಪಿ ಮತ್ತು ಭಾಷೆಯಲ್ಲಿ ರಚಿತವಾಗಿರುವ ಈ ಶಿಲಾಶಾಸನವು ಒಟ್ಟು 15 ಸಾಲುಗಳನ್ನು ಒಳಗೊಂಡಿದೆ.
ಶಾಸನದಲ್ಲಿ ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಶಕವರುಶ ಸಾವಿರದ ಆಯ್ದುನೂರ ಮೂವತ್ತ ಎಂಟನೆಯ ನಳ ಸಂವತ್ಸರದ ವಯಿಶಾಖ ಶುದ್ಧ ೧೨ ಯಿಂದುವಾರ ಎಂಬ ಕಾಲಮಾನದ ಉಲ್ಲೇಖವಿದ್ದು, ಇದು ಸಾಮಾನ್ಯ ವರ್ಷ 1616 ಏಪ್ರಿಲ್ 26, ಸೋಮವಾರಕ್ಕೆ ಸರಿಹೊಂದುತ್ತದೆ. ಈ ಕಾಲಮಾನದಲ್ಲಿ ಮಾಲ್ಲೂರ (ಪ್ರಸ್ತುತ ಮಲ್ಲಾರ್) ಸ್ಥಳದಲ್ಲಿ ಹಿರಿಯರ ಅನುಮತಿಯ ಮೇರೆಗೆ ಶಾಸನವನ್ನು ಮಾಡಿಸಿದ್ದು ಸಾಂತೈಯನಯ್ಯನ ಮಗ ಮಲೈಯ ಎಂಬ ಉಲ್ಲೇಖವನ್ನು ನೀಡುತ್ತದೆ.
ಶಾಸನದಲ್ಲಿ ರಾಜನ ಉಲ್ಲೇಖ ಹಾಗೂ ಶಾಸನವನ್ನು ಹಾಕಿರುವ ಉದ್ದೇಶ ಕಂಡು ಬರುವುದಿಲ್ಲ. ಶಾಸನೋಕ್ತ ಕಾಲಘಟ್ಟದಲ್ಲಿ ಕಾರ್ಕಳ ಪ್ರದೇಶವನ್ನು ಭೈರವರಸರು ಆಳ್ವಿಕೆ ಮಾಡುತ್ತಿದ್ದರಿಂದ ಈ ಶಾಸನವು ಅವರ ಕಾಲಮಾನಕ್ಕೆ ಸೇರಿರಬಹುದೆಂದು ಸಂಶೋಧನಾರ್ಥಿಯು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕ್ಷೇತ್ರಕಾರ್ಯ ಶೋಧನೆಯಲ್ಲಿ ಇತಿಹಾಸ ಮತ್ತು ಪುರಾತತ್ತ್ವ ಸಂಶೋಧನಾರ್ಥಿ ಶಶಾಂತ್ ಪಳ್ಳಿ ಹಾಗೂ ಇತಿಹಾಸ ಆಸಕ್ತರಾದ ಕೇಶವ ಡೋಂಗ್ರೆ ಮತ್ತು ಯದುಗೋಪನ್ ಕೆ.ಆರ್ ಅವರು ಸಹಕಾರ ನೀಡಿದ್ದಾರೆ.




By
ForthFocus™