ಉಡುಪಿ, ಆ.1: ಈ ಪುಣ್ಯ ಭೂಮಿಯಲ್ಲಿ ಹುಟ್ಟಿದ ಹಲವಾರು ಸಾಧು-ಸಂತ ಮಹಂತರು ತಮ್ಮ ಅನುಭವದ ಜ್ಞಾನವನ್ನು ದ್ವಿಪದಿ, ತ್ರಿಪದಿ, ವಚನ ಹಾಗೂ ಸಾಹಿತ್ಯಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ. ಸಮಾಜವನ್ನು ಸನ್ಮಾರ್ಗದಲ್ಲಿ ನಡೆಸಲು ಅವರು ಕೈಗೊಂಡ ಕಾರ್ಯಗಳು ನಿತ್ಯ ಸ್ಮರಣೀಯ. ಇಂತಹ ಸಾಧುಗಳಲ್ಲೇ ಶ್ರೇಷ್ಠರಾದವರು ಮಹಾಂತ ಡಾ.ಶಿವಯೋಗಿ ಸಾಮೀಜಿಗಳು. ವ್ಯಸನಮುಕ್ತ ಸಮಾಜ ನಿರ್ಮಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳಲು ಅವರು ನೀಡಿದ ಪ್ರೇರಣೆಗಳನ್ನು ಯುವಜನರು ಅನುಸರಿಸಿ ಸನ್ಮಾರ್ಗದಲ್ಲಿ ನಡೆದು ಬದುಕನ್ನು ಸುಂದರವಾಗಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ದಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು. ಅವರು ಶನಿವಾರ ನಗರದ ನೇತ್ರಜ್ಯೋತಿ ಕಾಲೇಜಿನ ಸಭಾಂಗಣದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಇಲಾಖೆ, ನೇತ್ರಜ್ಯೋತಿ ಕಾಲೇಜು, ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆ ಉಡುಪಿ ಹಾಗೂ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಡಾ. ಮಹಾಂತ್ ಶಿವಯೋಗಿ ಸ್ವಾಮೀಜಿ ಅವರ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಜನತೆ ಇಂದು ವ್ಯಸನಗಳ ದಾಸರಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವುದು ಕಳವಳಕಾರಿಯಾಗಿದೆ. ಸಾರ್ವಕಾಲಿಕ ಸಾಮಾಜಿಕ ಪಿಡುಗನ್ನು ಹೊಡೆದೋಡಿಸಲು ಸ್ವಾಮೀಜಿಗಳು ಅಂದೇ ಕಾರ್ಯಪ್ರವೃತ್ತರಾಗಿದ್ದರು. ಕುಡಿತ ಮತ್ತಿತರ ದುಶ್ಚಟಗಳ ದಾಸರಾದವರನ್ನು ಸರಿದಾರಿಗೆ ತರಲು ಅವರನ್ನು ದೇಶದ ಉತ್ತಮ ಪ್ರಜೆಯಾಗಿಸಲು, ಹೆತ್ತವರಿಗೆ ಒಳ್ಳೆಯ ಮಕ್ಕಳಾಗಲು ಪ್ರೇರೇಪಿಸಿ ಸ್ವಾಭಿಮಾನ ಮತ್ತು ಸೌಹಾರ್ದತೆಯ ಸಮಾಜ ಕಟ್ಟಲು ಅನವರತ ಶ್ರಮಿಸಿದರು. ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತಿದ್ದು ಯುವಜನತೆ ಮಾದಕ ವಸ್ತುಗಳ ಆಮಿಷಗಳಿಗೆ ಬಲಿಯಾಗದೆ ಎಚ್ಚರ ವಹಿಸಬೇಕು ಎಂದರು. ಜಿಲ್ಲಾ ಸರ್ಜನ್ ಡಾ.ಅಶೋಕ್ ಮಾತನಾಡಿ, ಸರಕಾರವು ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಕಟಿಬದ್ದವಾಗಿದೆ ಎನ್ನುವುದಕ್ಕೆ ಸ್ವಾಮೀಜಿಗಳ ಜನ್ಮದಿನವನ್ನು ವ್ಯಸನಮುಕ್ತ ದಿನವನ್ನಾಗಿ ಆಚರಿಸುತ್ತಿರುವುದೇ ಸಾಕ್ಷಿ. ಶೈಕ್ಷಣಿಕವಾಗಿ ಮುಂದಿರುವ ಉಭಯ ಜಿಲ್ಲೆಗಳಲ್ಲಿ ಮಾದಕ ವ್ಯಸನಿಗಳ ಸಂಖ್ಯೆ ಹೆಚ್ಚುತ್ತಿರುವುದು ಚಿಂತೆಗೀಡು ಮಾಡುವ ವಿಚಾರ. ಇದರಿಂದ ಮುಕ್ತಿ ಪಡೆಯಲು ಸಮರೋಪಾದಿಯಲ್ಲಿ ಕೆಲಸ ಮಾಡಬೇಕು. ಈ ಕಾರ್ಯಕ್ರಮವು ಒಂದು ದಿನಕ್ಕೆ ಸೀಮಿತವಾಗದೆ ವರ್ಷವಿಡೀ ನಡೆದು ಜನರಲ್ಲಿ ಮಾದಕ ವ್ಯಸನಗಳ ಕುರಿತು ಜಾಗೃತಿ ಮೂಡಿ ಕಾರ್ಯಕ್ರಮದ ಉದ್ದೇಶ ಸಾರ್ಥಕವಾಗಬೇಕು ಎಂದರು.
ಡಾ.ಎ.ವಿ ಬಾಳಿಗಾ ಸ್ಮಾರಕ ಆಸ್ಪತ್ರೆಯ ಮನೋವೈದ್ಯ ಡಾ.ಪಿ.ವಿ ಭಂಡಾರಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಶಿವಯೋಗಿ ಸ್ವಾಮಿಗಳು ಮೂಢನಂಬಿಕೆಗಳ ಬಗ್ಗೆ ಹಾಗೂ ವ್ಯಸನಗಳ ಬಗ್ಗೆ ಜನಜಾಗೃತಿ ಮೂಡಿಸಲು ಆ ಕಾಲದಲ್ಲಿ ಜಾತ್ರೆ ಮಾಡಿ 15 ಸಾವಿರಕ್ಕೂ ಹೆಚ್ಚು ಜನರಿಗೆ ಅರಿವು ಮೂಡಿಸುವ ಮಹಾನ್ ಕಾರ್ಯವನ್ನು ಕೈಗೊಂಡು, ಮನೆ ಮನೆಗೆ ಕಾಲಿನಡಿಗೆಯಲ್ಲಿ ತೆರಳಿ ಕುಡಿತದ ಚಟದಿಂದ ಹೊರಗೆ ಬರುವಂತೆ ಮನವಿ ಮಾಡುತ್ತಿದ್ದರು. ಬೀಡಿ, ಸಿಗರೇಟ್, ಗಾಂಜಾ, ಸಾರಾಯಿ ಡ್ರಗ್ಸ್, ಇವೆಲ್ಲವೂ ಯುವಜನತೆಯನ್ನು ದಾರಿ ತಪ್ಪಿಸುವ ಮಾದಕ ವಸ್ತುಗಳಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇವುಗಳ ಸೇವನೆಯನ್ನು ತ್ಯಜಿಸುವ ಮಾಹಿತಿಗಳು ಹರಿದಾಡುತ್ತವೆ ಯುವಕರು ಇಂತಹ ದುಶ್ಚಟಗಳಿಗೆ ಬಲಿಯಾಗಬಾರದು ಎಂದರು. ನೇತ್ರಜ್ಯೋತಿ ಕಾಲೇಜಿನ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗೌರಿ ಪ್ರಭು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಹದಿಹರೆಯದ ಪ್ರಾಯ ಬಹಳ ಸೂಕ್ಷ್ಮ. ಈ ಪ್ರಾಯದಲ್ಲಿ ವಿದ್ಯಾರ್ಥಿಗಳು ಹಾದಿ ತಪ್ಪುವುದು ಸಹಜ. ಸ್ನೇಹಿತರ ಒತ್ತಡಕ್ಕೆ ಮಣಿದು ಅಥವಾ ಕುತೂಹಲಕ್ಕೆ ಒಳಗಾಗಿ ಒಂದು ಬಾರಿ ಸಿಗರೇಟ್ ಮಧ್ಯಪಾನ ಅಥವಾ ಡ್ರಗ್ಸ್ ಸೇವನೆ ಮಾಡಿದಲ್ಲಿ ಜೀವನ ಹಾಳಾಗುತ್ತದೆ. ಈ ವ್ಯಸನದಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಆದುದರಿಂದ ವಿದ್ಯಾರ್ಥಿಗಳು ಯಾವುದೇ ಆಮಿಷಕ್ಕೆ ಒಳಗಾಗದೆ ಆಟ ಪಾಠಗಳಲ್ಲಿ ಗಮನ ವಿರಿಸಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಬಾಗಲಕೋಟೆಯ ಜಮಖಂಡಿ ತಾಲೂಕಿನ ಹಿಪ್ಪರಗಿ ಗ್ರಾಮದಲ್ಲಿ 1930 ಆಗಸ್ಟ್ 01 ರಂದು ಜನಿಸಿದ ಡಾ.ಮಹಾಂತ ಶಿವಯೋಗಿಗಳು ತಮ್ಮ 10ನೇ ವಯಸ್ಸಿಗೆ ಸವದಿಯ ವಿರಕ್ತಮಠದ ಕಿರಿಯ ಸ್ವಾಮೀಜಿಗಳಾದರು. ಅವರು ಅನೇಕ ಸಮಾಜ ಸುಧಾರಣೆಗಳನ್ನು ಕೈಗೊಂಡಿದ್ದು ಇದರಲ್ಲಿ ಪ್ರಮುಖವಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ 1975 ರಿಂದ ಕೈಗೊಂಡ ಮಹಾಂತ ಜೋಳಿಗೆ ಕಾರ್ಯಕ್ರಮ ಅತ್ಯಂತ ವಿಶಿಷ್ಟವಾದುದು. ಕುಡಿತದ ಚಟದಿಂದ ಸಾವಿರಾರು ಕುಟುಂಬಗಳು ಹಾಳಾಗಿರುವುದನ್ನು ಅರಿತು, ಇಂತಹ ದುಶ್ಚಟಗಳಿಗೆ ಒಳಗಾಗಿರುವವನ್ನು ಮುಕ್ತಗೊಳಿಸುವ ಉದ್ದೇಶದಿಂದ ಮಹಾಂತ ಜೋಳಿಗೆ ಯೋಜನೆ ಆರಂಭಿಸಿ ಮನೆ ಮನೆಗೆ ತೆರಳಿ ದುಶ್ಚಟಗಳನ್ನು ಬಿಡುವಂತೆ ಮನವಿ ಮಾಡುತ್ತಿದ್ದರು. ಡಾ.ಮಹಾಂತ ಶಿವಯೋಗಿ ಅವರ ಜನ್ಮದಿನವಾದ ಆಗಸ್ಟ್ 01 ಅನ್ನು ರಾಜ್ಯ ಸರ್ಕಾರವು ವ್ಯಸನ ಮುಕ್ತ ದಿನವನ್ನಾಗಿ ಆಚರಿಸಿ ಸಾರ್ವಜನಿಕರು ಹಾಗೂ ಯುವಜನತೆ ವ್ಯಸನಗಳಿಂದ ಮುಕ್ತವಾಗಲು ಪ್ರೇರಣೆ ನೀಡುತ್ತಿದೆ. ಸ್ವಾಮೀಜಿಯವರ ಕಾರ್ಯದಿಂದಾಗಿ ಲಕ್ಷಾಂತರ ಜನ ವ್ಯಸನಗಳಿಂದ ಮುಕ್ತರಾಗಿ ಅವರ ಕುಟುಂಬಗಳು ನೆಮ್ಮದಿಯ ಜೀವನ ಸಾಗಿಸುತ್ತಿವೆ ಎಂದರು. ಉಪನ್ಯಾಸಕರಾದ ಅಶ್ವಿನಿ ಮಾದಕ ವಸ್ತು ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಮಧ್ವ ವಲ್ಲಭ ಆಚಾರ್ಯ, ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿರರು ಉಪಸ್ಥಿತರಿದ್ದರು. ಕಾಲೇಜಿನ ಚೀಫ್ ಕೋ-ಆರ್ಡಿನೇಟರ್ ಮಾಧವ ಪೂಜಾರಿ ನಿರೂಪಿಸಿ, ವಂದಿಸಿದರು.




By
ForthFocus™