Sunday, October 18, 2026
Sunday, October 18, 2026

ಮಾಹೆ: ‘ಯುಕೆ-ಇಂಡಿಯಾ ಹೆಲ್ತ್ ಟೆಕ್ ಆಕ್ಸಿಲರೇಟರ್’- ಬ್ರಿಟಿಷ್ ಹೈಕಮಿಷನ್ ಸಹಭಾಗಿತ್ವ

ಮಾಹೆ: ‘ಯುಕೆ-ಇಂಡಿಯಾ ಹೆಲ್ತ್ ಟೆಕ್ ಆಕ್ಸಿಲರೇಟರ್’- ಬ್ರಿಟಿಷ್ ಹೈಕಮಿಷನ್ ಸಹಭಾಗಿತ್ವ

Date:

ಮಣಿಪಾಲ, ಜು.23: ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾದ ಉತ್ಕೃಷ್ಟ ಸಂಸ್ಥೆಯ ಡಾ. ಟಿ.ಎಂ.ಎ. ಪೈ ಸಭಾಂಗಣದಲ್ಲಿ 4ನೇ ಆವೃತ್ತಿಯ ‘ಯುಕೆ–ಇಂಡಿಯಾ ಹೆಲ್ತ್ ಟೆಕ್ ಆಕ್ಸಿಲರೇಟರ್ ಕಾರ್ಯಕ್ರಮಕ್ಕೆ (2026–2028) ಚಾಲನೆ ದೊರೆಯಿತು. ಬ್ರಿಟಿಷ್ ಹೈಕಮಿಷನ್ ಸಹಭಾಗಿತ್ವದಲ್ಲಿ ಆಯೋಜಿಸಲಾಗಿರುವ ಮೂರು ದಿನಗಳ (ಜುಲೈ 22–24) ಈ ಕಾರ್ಯಕ್ರಮವು, ಆರೋಗ್ಯ ತಂತ್ರಜ್ಞಾನ ಮತ್ತು ಡಿಜಿಟಲ್ ಆರೋಗ್ಯ ಕ್ಷೇತ್ರಗಳಲ್ಲಿ ಭಾರತ ಹಾಗೂ ಬ್ರಿಟನ್ (ಯುಕೆ) ನಡುವಿನ ಬಾಂಧವ್ಯ ವೃದ್ಧಿಗೆ ಹೊಸ ಮುನ್ನುಡಿ ಬರೆದಿದೆ. ಉದ್ಘಾಟನಾ ಸಮಾರಂಭದಲ್ಲಿ ಶೈಕ್ಷಣಿಕ ಕ್ಷೇತ್ರ, ಸರ್ಕಾರ ಹಾಗೂ ಯುಕೆಯ ವಿಜ್ಞಾನ ಮತ್ತು ನಾವೀನ್ಯ ವಲಯದ ಪ್ರಮುಖರು ಮಾತನಾಡಿದರು.

ದೆಹಲಿಯ ಬ್ರಿಟಿಷ್ ಹೈಕಮಿಷನ್‌ನ ಹಿರಿಯ ಸಲಹೆಗಾರರಾದ (ಆರೋಗ್ಯ ಮತ್ತು ಜೀವ ವಿಜ್ಞಾನ) ಡಾ. ನೇಹಾ ಶರ್ಮಾ ಅವರು ಕಾರ್ಯಕ್ರಮದ ರೂಪುರೇಷೆಗಳನ್ನು ವಿವರಿಸಿದರು. ದೆಹಲಿಯ ಬ್ರಿಟಿಷ್ ಹೈಕಮಿಷನ್‌ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಸೋಫಿಯಾ ನೆಸ್ಟಿಯಸ್-ಬೂತ್ ಅವರು ಆರೋಗ್ಯ ಮತ್ತು ಜೀವ ವಿಜ್ಞಾನ ಕ್ಷೇತ್ರದಲ್ಲಿ ಭಾರತ-ಬ್ರಿಟನ್ ನಡುವಿನ ಬಾಂಧವ್ಯವು ಮತ್ತಷ್ಟು ಗಟ್ಟಿಯಾಗುತ್ತಿರುವ ಬಗ್ಗೆ ಮಾತನಾಡಿದರು. ಆರೋಗ್ಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಹಾಗೂ ಎರಡು ದೇಶಗಳ ನಡುವಿನ ದೀರ್ಘಕಾಲದ ದ್ವಿಪಕ್ಷೀಯ ಸಂಬಂಧವನ್ನು ವೃದ್ಧಿಸಲು ಜಂಟಿ ಆವಿಷ್ಕಾರಗಳು, ಜ್ಞಾನ ವಿನಿಮಯ ಮತ್ತು ತಂತ್ರಜ್ಞಾನ-ಚಾಲಿತ ಪರಿಹಾರಗಳು ಅತ್ಯಗತ್ಯ ಎಂದು ಅವರು ವಿವರಿಸಿದರು. ಭುವನೇಶ್ವರ ಸಿಟಿ ನಾಲೆಡ್ಜ್ ಇನ್ನೋವೇಶನ್ ಕ್ಲಸ್ಟರ್ ಫೌಂಡೇಶನ್’ (ಬಿಸಿಕೆಐಸಿ) ಅಧ್ಯಕ್ಷ ಡಾ. ಮೃತ್ಯುಂಜಯ್ ಸುವಾರ್ ಮಾತನಾಡಿ, ʼಶೈಕ್ಷಣಿಕ ಕ್ಷೇತ್ರ, ಉದ್ಯಮಗಳು, ಸ್ಟಾರ್ಟ್‌ಅಪ್‌ಗಳು ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಕಾರ್ಯನಿರ್ವಹಿಸುವ ಸದೃಢ ನಾವೀನ್ಯ ಪರಿಸರ ವ್ಯವಸ್ಥೆ ರೂಪಿಸುವುದು ಇಂದಿನ ಅಗತ್ಯವಾಗಿದೆ,ʼ ಎಂದುರು.

ಮಾಹೆಯ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಮಾತನಾಡಿ, ‘ಆರೋಗ್ಯ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳು ನಡೆಯಬೇಕಾದರೆ ಇಂದು ದೇಶ-ವಿದೇಶಗಳ ಗಡಿಗಳನ್ನು ಮೀರಿದ ಬಾಂಧವ್ಯದ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುಕೆ-ಇಂಡಿಯಾ ಹೆಲ್ತ್ ಟೆಕ್ ಆಕ್ಸಿಲರೇಟರ್‌ನಂತಹ ಕಾರ್ಯಕ್ರಮಗಳು ಮಹತ್ವದ ಪಾತ್ರ ವಹಿಸುತ್ತವೆ. ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಶಿಕ್ಷಣ ಸಂಸ್ಥೆಗಳು, ಕೈಗಾರಿಕಾ ವಲಯ ಹಾಗೂ ಸರ್ಕಾರ ಒಟ್ಟಾಗಿ ಕೆಲಸ ಮಾಡುವಂತಹ ವಾತಾವರಣವನ್ನು ಸೃಷ್ಟಿಸುವಲ್ಲಿ ಮಾಹೆ ಸದಾ ಮುಂದಿದೆ’ ಎಂದು ವಿವರಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಯು.ಟಿ. ಖಾದರ್, ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್, ಮಾಹೆ ಕುಲಪತಿ ಡಾ. ಶರತ್ ಕೆ. ರಾವ್, ಬ್ರಿಟಿಷ್ ಹೈಕಮಿಷನ್‌ನ ಅಧಿಕಾರಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ಕರ್ನಾಟಕದ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಮಾತನಾಡಿ, “ಭಾರತ ಮತ್ತು ಬ್ರಿಟನ್ ನಡುವಿನ ಸಂಬಂಧ ಹೊಸ ಆವಿಷ್ಕಾರಗಳ ಮೂಲಕ ಮತ್ತಷ್ಟು ಗಟ್ಟಿಯಾಗುತ್ತಿರುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ. ನಮ್ಮ ದೇಶದ ಉದ್ಯಮಿಗಳನ್ನು ಬ್ರಿಟನ್‌ನ ಆರೋಗ್ಯ ವ್ಯವಸ್ಥೆಯೊಂದಿಗೆ ಜೋಡಿಸುವ ಮೂಲಕ, ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಲು ನೆರವಾಗುವಂತಹ ಹೊಸ ತಂತ್ರಜ್ಞಾನಗಳನ್ನು ರೂಪಿಸಲು ನಾವು ಉತ್ತೇಜನ ನೀಡುತ್ತಿದ್ದೇವೆ. ಇದರಿಂದ ಉಭಯ ದೇಶಗಳ ನಡುವೆ ದೀರ್ಘಕಾಲದ ವಾಣಿಜ್ಯ ಸಂಬಂಧಗಳೂ ಬೆಳೆಯಲಿವೆ,” ಎಂಬ ಭರವಸೆ ವ್ಯಕ್ತಪಡಿಸಿದರು. ಮಾಹೆಯ ಕುಲಪತಿ ಡಾ. ಶರತ್ ಕೆ. ರಾವ್ ಮಾತನಾಡಿ, “ಯುಕೆ-ಇಂಡಿಯಾ ಹೆಲ್ತ್ ಟೆಕ್ ಕಾರ್ಯಕ್ರಮವನ್ನು ನಮ್ಮ ಮಾಹೆಯಲ್ಲಿ ಆಯೋಜಿಸಿರುವುದು ಬಹಳ ಖುಷಿ ಇದೆ. ಹೊಸ ಆಲೋಚನೆಗಳಿಗೆ ಆರೋಗ್ಯ ಕ್ಷೇತ್ರದಲ್ಲಿ ಬದಲಾವಣೆ ತರಲು ಶಿಕ್ಷಣ ಸಂಸ್ಥೆಗಳು, ಉದ್ಯಮಗಳು ಹಾಗೂ ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕಿದೆ. ಬ್ರಿಟಿಷ್ ಹೈಕಮಿಷನ್ ಜತೆ ಸೇರಿ, ನಮ್ಮ ದೇಶದ ಪ್ರತಿಭೆಗಳಿಗೆ ಆರೋಗ್ಯ ತಂತ್ರಜ್ಞಾನಗಳನ್ನು ರೂಪಿಸಲು ನಾವು ಬೆಂಬಲ ನೀಡುತ್ತಿದ್ದೇವೆ. ಇದರಿಂದ ರೋಗಿಗಳಿಗೆ ಉತ್ತಮ ಚಿಕಿತ್ಸೆ ಸಿಗುವಂತಾಗಬೇಕು ಎನ್ನುವುದೇ ನಮ್ಮ ಆಶಯ,” ಎಂದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಹೆಚ್‌ಐವಿ /ಏಡ್ಸ್ ಅರಿವು ಮೂಡಿಸಲು ಜಿಲ್ಲಾಮಟ್ಟದ ರೆಡ್ ರಿಬ್ಬನ್ ರನ್ ಮ್ಯಾರಥಾನ್

ಉಡುಪಿ, ಅ.17: ಹೆಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಯುವಜನರಲ್ಲಿ ಆರೋಗ್ಯದ...

ಪೊಲೀಸರಂತೆ ಕರ್ತವ್ಯ ನಿರ್ವಹಿಸುವ ಗೃಹರಕ್ಷಕರ ಕಾರ್ಯ ಶ್ಲಾಘನೀಯ: ಹರಿರಾಮ್ ಶಂಕರ್

ಉಡುಪಿ, ಅ.17: ಕಾನೂನು ಸುವ್ಯವಸ್ಥೆ, ಬಂದೋಬಸ್ತ್ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪೊಲೀಸ್...

ಕಾರ್ಮಿಕರು ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ನೋಡಿಕೊಳ್ಳಿ: ಟಿ.ಎಂ.ಶಾಹಿದ್ ತೆಕ್ಕಿಲ್

ಉಡುಪಿ, ಅ.17: ಸರಕಾರವು ಕಾರ್ಮಿಕರ ಶ್ರೇಯೋಭಿವೃದ್ಧಿಗೆ ಜಾರಿಗೊಳಿಸಿರುವ ಕಲ್ಯಾಣ ಕಾರ್ಯಕ್ರಮಗಳನ್ನು ಅರ್ಹ...
error: Content is protected !!