Wednesday, September 30, 2026
Wednesday, September 30, 2026

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ: ಜಿಲ್ಲಾಧಿಕಾರಿ

Date:

ಉಡುಪಿ, ನ.20: ಡಿಸೆಂಬರ್ 21 ರಂದು ನಡೆಯುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ 0-5 ಒಳಗಿನ ಜಿಲ್ಲೆಯ ಎಲ್ಲಾ ಮಕ್ಕಳಿಗೂ ಪೋಷಕರು ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಕರೆ ನೀಡಿದರು. ಅವರು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಜಿಲ್ಲಾ ಲಸಿಕಾ ಕಾರ್ಯಪಡೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಪಲ್ಸ್ ಪೊಲೀಯೋ ಕಾರ್ಯಕ್ರಮದಡಿಯಲ್ಲಿ ಡಿಸೆಂಬರ್ 21 ರ ಭಾನುವಾರದಂದು 0-5 ವರ್ಷದೊಳಗಿನ ಮಕ್ಕಳಿಗೆ ಜಿಲ್ಲೆಯ ಸುಮಾರು 660 ಲಸಿಕಾ ಕೇಂದ್ರಗಳಲ್ಲಿ ಪೊಲೀಯೋ ಹನಿಗಳನ್ನು ಹಾಕಲಾಗುವುದು ಎಂದ ಅವರು, ಯಾವುದೇ ಮಕ್ಕಳು ಪಲ್ಸ್ ಪೊಲೀಯೋ ಲಸಿಕೆಯಿಂದ ತಪ್ಪಿ ಹೋಗದಂತೆ ನೋಡಿಕೊಳ್ಳಬೇಕು ಎಂದರು.

ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಲ್ಲಿ 53,595 ಹಾಗೂ ನಗರ ಪ್ರದೇಶಗಳಲ್ಲಿ 13,545 ಸೇರಿದಂತೆ ಒಟ್ಟು 67,140 ಐದು ವರ್ಷದೊಳಗಿನ ಮಕ್ಕಳನ್ನು ಈಗಾಗಲೇ ಗುರುತಿಸಲಾಗಿದೆ. ಇವರುಗಳಿಗೆ ಲಸಿಕೆಗಳನ್ನು ನೀಡಲು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಒಟ್ಟು 660 ಲಸಿಕಾ ಕೇಂದ್ರಗಳನ್ನು ತೆರೆಯಲಾಗುವುದು ಎಂದ ಅವರು, ಇವುಗಳ ಜೊತೆಯಲ್ಲಿ ಟ್ರಾನ್ಸಿಟ್ 31 ಬೂತುಗಳು, 6 ಮೊಬೈಲ್ ಟೀಮ್‌ಗಳಿದ್ದು, 2788 ಸಿಬ್ಬಂದಿಗಳು ಹಾಗೂ 144 ಮೇಲ್ವಿಚಾರಕರುಗಳನ್ನು ನೇಮಿಸಲಾಗಿದೆ ಎಂದರು. ರಾಜ್ಯದಿಂದ 85,870 ಡೋಸ್‌ನಷ್ಟು ಪೊಲೀಯೋ ಲಸಿಕೆ ಜಿಲ್ಲೆಗೆ ನೀಡಲಾಗುತ್ತಿದ್ದು, ಲಸಿಕೆಯನ್ನು ಸುರಕ್ಷಿತವಾಗಿ ದಾಸ್ತಾನು ಇಟ್ಟುಕೊಳ್ಳಬೇಕು. ಲಸಿಕೆ ಹಾಳಾಗದಂತೆ ಮುಂಜಾಗ್ರತೆ ವಹಿಸುವ ನಿಟ್ಟಿನಲ್ಲಿ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು. ಅವುಗಳ ವಿತರಣೆಯೂ ಸಹ ಸುರಕ್ಷಿತವಾಗಿ ನಿರ್ವಹಿಸಬೇಕು ಎಂದು ತಿಳಿಸಿದರು.

ಲಸಿಕಾ ದಿನದಂದು ಬಿಟ್ಟು ಹೋದ ಮಕ್ಕಳಿಗೆ ಗ್ರಾಮೀಣ ಭಾಗದಲ್ಲಿ ಡಿಸೆಂಬರ್ 22 ರಿಂದ 23 ರ ವರೆಗೆ ಹಾಗೂ ನಗರ ಭಾಗಗಳಲ್ಲಿ ಡಿ. 22 ರಿಂದ 24 ರ ವರೆಗೆ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ನರ್ಸಿಂಗ್ ವಿದ್ಯಾರ್ಥಿಗಳು ಮನೆ-ಮನೆಗೆ ತೆರಳಿ ಲಸಿಕೆ ಹಾಕಲಿದ್ದು, ಅವರುಗಳಿಗೆ ಅಗತ್ಯ ಸಹಕಾರ ನೀಡಬೇಕು ಎಂದ ಅವರು, ರೈಲ್ವೆ, ಬಸ್ ನಿಲ್ದಾಣ ಸೇರಿದಂತೆ ಮತ್ತಿತರ ಜನನಿಬಿಡ ಪ್ರದೇಶಗಳಲ್ಲಿ ಡಿ. 21 ರಿಂದ 24 ರ ವರೆಗೆ ಟ್ರಾನ್ಸಿಸ್ಟ್ ಬೂತ್‌ಗಳನ್ನು ತೆರೆಯಲಾಗುತ್ತಿದ್ದು, ಇದರ ಸದುಪಯೋಗವನ್ನು ಪೋಷಕರು ಪಡೆದುಕೊಳ್ಳಬೇಕು ಎಂದರು. ವಲಸೆ, ಕಟ್ಟಡ ಹಾಗೂ ಮತ್ತಿತರ ಕೂಲಿ ಕಾರ್ಮಿಕರ ಮಕ್ಕಳು ಲಸಿಕೆ ಪಡೆಯುವುದರಿಂದ ಹೊರಗೆ ಉಳಿಯದಂತೆ ನೋಡಿಕೊಳ್ಳಬೇಕು. ಪಲ್ಸ್ ಪೊಲೀಯೋ ಕಾರ್ಯಕ್ರಮದ ಯಶಸ್ವಿಗೆ ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗಳ ಪಾತ್ರ ಮಹತ್ತರವಾಗಿದ್ದು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯೊಂದಿಗೆ ಸಮನ್ವಯತೆ ಸಾಧಿಸಿ ಕೆಲಸ ನಿರ್ವಹಿಸಬೇಕು ಎಂದರು.

ಲಸಿಕೆ ನೀಡುತ್ತಿರುವ ಬಗ್ಗೆ ಸಾರ್ವಜನಿಕರಲ್ಲಿ ರೇಡಿಯೋ, ಸಾಮಾಜಿಕ ಜಾಲತಾಣಗಳ ಮೂಲಕ ಹೆಚ್ಚಿನ ಪ್ರಚಾರ ನೀಡಬೇಕು. ಶಾಲೆಗಳಲ್ಲಿಯೂ ಸಹ ಶಿಕ್ಷಕರು ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತು ಮಕ್ಕಳಿಗೆ ಮಾಹಿತಿ ನೀಡಬೇಕು ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಪೌರಾಯುಕ್ತ ಮಹಾಂತೇಶ ಹಂಗರಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಬಸವರಾಜ ಹುಬ್ಬಳ್ಳಿ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಶಾಂತ್ ಭಟ್, ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ನಾಗರತ್ನ, ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಲತಾ ನಾಯಕ್, ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ. ಜ್ಯೋತ್ಸ್ನಾ ಬಿ.ಕೆ, ವಿವಿಧ ಜಿಲ್ಲಾಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಸಮಾನತೆಯ ಸಮಾಜ ನಿರ್ಮಾಣಕ್ಕೆ ಸಂವಿಧಾನ ಭದ್ರ ಬುನಾದಿ: ಡಾ.ಶ್ರೀಪಾದ್ ಭಟ್

ಉಡುಪಿ, ಸೆ.29: ಅಂಬೇಡ್ಕರ್ ರವರು ಶಿಕ್ಷಣಕ್ಕೆ ಅತ್ಯಂತ ಮಹತ್ವವನ್ನು ನೀಡಿದವರು. ಶಿಕ್ಷಣ...

ಮಣಿಪಾಲ ಜ್ಞಾನಸುಧಾ: ಎನ್.ಎಸ್. ಎಸ್ ದಿನಾಚರಣೆ

ಮಣಿಪಾಲ, ಸೆ.29: ಮಣಿಪಾಲ ಜ್ಞಾನಸುಧಾ ಪ. ಪೂ. ಕಾಲೇಜಿನಲ್ಲಿ ಎನ್.ಎಸ್. ಎಸ್...

ಸಂಗೊಳ್ಳಿ ರಾಯಣ್ಣ ಪುರಸ್ಕಾರಕ್ಕೆ ಸಂಘಟಕ, ರಂಗಕರ್ಮಿ ರವಿರಾಜ್ ಎಚ್. ಪಿ. ಆಯ್ಕೆ

ಉಡುಪಿ, ಸೆ.29: ಹತ್ತು ಹಲವು ಸಂಘ ಸಂಸ್ಥೆಯಲ್ಲಿ ತೊಡಗಿಸಿಕೊಂಡಿರುವ ಸಂಘಟಕ, ರಂಗಕರ್ಮಿ,...

ದೇಶದ ಕೃಷಿಯಲ್ಲಿ ರೈತ ಮಹಿಳೆಯರ ಪಾತ್ರ ಪ್ರಮುಖವಾದುದು: ವಿಧಾನಸಭೆ ಸಭಾಧ್ಯಕ್ಷ ಜಿ.ಎಸ್.ಪಾಟೀಲ

ಧಾರವಾಡ, ಸೆ.29: ರೈತರು ಬೆಳೆದ ಬೆಳೆಗಳಿಗೆ ಯೋಗ್ಯ ಬೆಲೆ ದೊರೆಯಬೇಕು. ವಿಶ್ವಸಂಸ್ಥೆಯು...
error: Content is protected !!