Wednesday, October 21, 2026
Wednesday, October 21, 2026

ತಮಿಳುನಾಡು ಸರ್ಕಾರ ಕೂಡ ನಿಯೋಗ ಕಳುಹಿಸಿ ಮೇಕೆದಾಟು ಯೋಜನೆ ಸ್ಥಳಕ್ಕೆ ಬಂದು ಜಾಗ ಪರಿಶೀಲನೆ ಮಾಡಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ತಮಿಳುನಾಡು ಸರ್ಕಾರ ಕೂಡ ನಿಯೋಗ ಕಳುಹಿಸಿ ಮೇಕೆದಾಟು ಯೋಜನೆ ಸ್ಥಳಕ್ಕೆ ಬಂದು ಜಾಗ ಪರಿಶೀಲನೆ ಮಾಡಲಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Date:

ನವದೆಹಲಿ, ಸೆ.29: ದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸಚಿವರ ಭೇಟಿಯ ಬಳಿಕ ಕರ್ನಾಟಕ ಭವನದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದದರು. ಮೇಕೆದಾಟು ಯೋಜನೆಯಿಂದ ನಾವು ಕುಡಿಯುವ ಉದ್ದೇಶಕ್ಕೆ ಮಾತ್ರ ನೀರನ್ನು ಬಳಸಿಕೊಳ್ಳಬಹುದು, ನೀರಾವರಿಗೆ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂಬ ಅಂಶ ಕೇಂದ್ರ ಸಚಿವರಿಗೆ ಮನದಟ್ಟಾಗಿದೆ. ತಮಿಳುನಾಡು ಸರ್ಕಾರ ಕೂಡ ನಿಯೋಗ ಕಳುಹಿಸಿ ಯೋಜನೆ ಜಾಗ ಪರಿಶೀಲನೆ ಮಾಡಲಿ. ಈ ಯೋಜನೆಯಲ್ಲಿ ಮುಳುಗಡೆಯಾಗುವ ಅರಣ್ಯ ಭೂಮಿಗೆ ಪರ್ಯಾಯ ಸ್ಥಳ ಗುರುತಿಸಲಾಗಿದೆ. ಈಗ 5 ಸಾವಿರ ಕ್ಯೂಸೆಕ್ ನೀರಿಗೆ ಬಡಿದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಬಾರಿ ಕೆ.ಆರ್.ಎಸ್ ತುಂಬಿಲ್ಲದ ಕಾರಣ ಕಬಿನಿ ಭಾಗದ ರೈತರು ಗಲಾಟೆ ಮಾಡುತ್ತಿದ್ದಾರೆ. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಕೇಂದ್ರ ತಂಡ ಸ್ಥಳಕ್ಕೆ ಭೇಟಿ ನೀಡಿದೆ.

ತಮಿಳುನಾಡು ತಂಡ ಭೇಟಿ ನೀಡಿದರೂ ಅವರಿಗೂ ಸಹಕಾರ ನೀಡಲಾಗುವುದು. ನೀರನ್ನು ದುರ್ಬಳಕೆ ಮಾಡಲು ಸಾಧ್ಯವಿಲ್ಲ ಎನ್ನುವುದು ಅಧಿಕಾರಿಗಳಿಗೂ ಸಹ ಮನದಟ್ಟಾಗಿದೆ. ತಮಿಳುನಾಡು ಮುಖ್ಯಮಂತ್ರಿಯವರಿಗೆ ಮೇಕೆದಾಟು ಯೋಜನೆಯ ಸಭೆಯಲ್ಲಿ ಪಾಲ್ಗೊಳ್ಳಲು ಹಾಗೂ ಸ್ಥಳಕ್ಕೆ ಭೇಟಿ ನೀಡಲು ಮನವಿ ಮಾಡಿಕೊಳ್ಳಲಾಗುವುದು. ಜಲಶಕ್ತಿ ಸಚಿವರಿಂದ ಸಕಾರಾತ್ಮಕ ಸ್ಪಂದನೆ ರಾಜ್ಯದ ಕೃಷ್ಣಾ, ಮೇಕೆದಾಟು ಸೇರಿದಂತೆ ಇತರೆ ಜಲವಿವಾದಗಳ ಕುರಿತು ಕೇಂದ್ರ ಜಲಶಕ್ತಿ ಸಚಿವ ಸಿ. ಆರ್. ಪಾಟೀಲ್ ಅವರೊಂದಿಗೆ ಚರ್ಚಿಸಿ, ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರವು ಮಧ್ಯಸ್ಥಿಕೆ ವಹಿಸಿ ಸಹಕರಿಸಲು ಮನವಿ ಮಾಡಲಾಗಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರಾಜ್ಯದ ಯೋಜನೆಗಳಿಗೆ ಬರಬೇಕಾದ ಅನುದಾನಗಳ ಬಗ್ಗೆಯೂ ಮನವಿ ಮಾಡಲಾಗಿದೆ.

ಮಹದಾಯಿ ಯೋಜನೆಯ ಕುರಿತು ಜಂಟಿ ಸಭೆ ನಡೆಸಲು ಕೇಂದ್ರದ ಭರವಸೆ: ಮಹದಾಯಿ ಮತ್ತು ಅರಣ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜಂಟಿ ಸಭೆಯನ್ನು ಕೈಗೊಳ್ಳುವುದಾಗಿ ಕೇಂದ್ರ ಭರವಸೆ ನೀಡಿದೆ. ಹಾಗೂ ಕೃಷ್ಣಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ ಅಕ್ಕಪಕ್ಕದ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದು ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದೆ. ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಪತ್ರವ್ಯವಹಾರ ಸರಿಯಾಗಿ ಆಗುತ್ತಿಲ್ಲ ಎನ್ನುವುದು ಸುಳ್ಳು. ಕೇಂದ್ರ ಸರ್ಕಾರ 2023ರ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆಗೆ 5300 ಕೋಟಿ ರೂ. ಮೀಸಲಿರಿಸಿದ್ದರೂ ಈವರೆಗೆ ಅನುದಾನ ಬಿಡುಗಡೆ ಮಾಡಿಲ್ಲ. ನಾವು ಕೇಳುತ್ತಲೇ ಇದ್ದೇವೆ, ಆದರೆ ಅವರು ಬಿಡುಗಡೆ ಮಾಡುತ್ತಿಲ್ಲ.

ರಾಜ್ಯದ ಹಿತಕ್ಕೆ ಸಹಕಾರ ನೀಡುವುದಾಗಿ ಕೇಂದ್ರದ ಭರವಸೆ: ದಕ್ಷಿಣ ವಲಯದ ಮುಖ್ಯಮಂತ್ರಿಗಳ ಸಮ್ಮೇಳನದಲ್ಲಿ ಕೇಂದ್ರ ಗೃಹ ಸಚಿವರು ತಮಿಳುನಾಡಿನಲ್ಲಿ ಸಭೆ ಕರೆದು ಸಮಸ್ಯೆ ಇತ್ಯರ್ಥ ಮಾಡುವುದಾಗಿ ಮಾತು ಕೊಟ್ಟಂತೆ ಶೀಘ್ರದಲ್ಲಿಯೇ ಸಭೆ ಕರೆಯುವುದಾಗಿ ತಿಳಿಸಿದ್ದಾರೆ. ಕೇಂದ್ರ ಸರ್ಕಾರದಿಂದ ಬರಬೇಕಾದ ಅನುದಾನ, ಪ್ರಸ್ತಾವನೆಗಳನ್ನು ಅವರ ಮುಂದಿಡಲಾಗಿದೆ. ಎಲ್ಲರೂ ರಾಜ್ಯದ ಹಿತಕ್ಕೆ ಸಹಕಾರ ಕೊಡುವುದಾಗಿ ಒಪ್ಪಿದ್ದಾರೆ. ಅಕ್ಟೋಬರ್ 10ರ ನಂತರ ಸಮಯ ನೀಡುವುದಾಗಿ ತಿಳಿಸಿದ್ದಾರೆ.

ಬರ ಪರಿಹಾರಕ್ಕೆ ಮನವಿ: ರಾಜ್ಯದಲ್ಲಿ 200ಕ್ಕೂ ಹೆಚ್ಚು ತಾಲೂಕುಗಳು ಬರಪೀಡಿತವಾಗಿವೆ. 101 ತಾಲೂಕುಗಳಿಗೆ 700 ಕೋಟಿ ರೂ. ಅನುದಾನ ಕೋರಲಾಗಿತ್ತು. ಪ್ರಸ್ತುತ ಬರಪೀಡಿತ ತಾಲೂಕುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಪರಿಹಾರದ ಮೊತ್ತವೂ ಏರಿಕೆಯಾಗಲಿದೆ. ಅಕ್ಟೋಬರ್ 3 ರಂದು ಕೇಂದ್ರದ ತಂಡ ಬರ ಪರಿಶೀಲನೆಗಾಗಿ ರಾಜ್ಯಕ್ಕೆ ಆಗಮಿಸಲಿದೆ.

ಭದ್ರಾ ಮೇಲ್ದಂಡೆ ಯೋಜನೆ ಅನುದಾನ ಬಿಡುಗಡೆಗೆ ಮನವಿ: ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆಯೂ ಕೇಂದ್ರಕ್ಕೆ ಮನದಟ್ಟು ಮಾಡಿಕೊಡಲಾಗಿದೆ. ಮೂರು ನಾಲ್ಕು ವರ್ಷಗಳಿಂದ ಕೇವಲ ಮಾತುಗಳನ್ನೇ ಆಡಿದ್ದು ಅನುದಾನ ಬಿಡುಗಡೆಯಾಗಿಲ್ಲ ಎಂದು ತಿಳಿಸಲಾಗಿದೆ. ವಿಚಾರ ಸಚಿವ ಸಂಪುಟ ಸಭೆಯಲ್ಲಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಮಾಡಲು ತೀರ್ಮಾನ ಕೈಗೊಳ್ಳಲು ಒತ್ತಾಯಿಸಲಾಗಿದೆ.

ಬೆಂಗಳೂರಿನಲ್ಲಿ ಹಸಿರು ಉದ್ಯಾನವನ: ರಕ್ಷಣಾ ಸಚಿವರ ಭರವಸೆ: ಬೆಂಗಳೂರಿನ ಇಬ್ಬಲೂರಿನಲ್ಲಿ 700 ಎಕರೆ ರಕ್ಷಣಾ ಇಲಾಖೆಯ ಭೂಮಿ ಖಾಲಿ ಇದೆ. ಅಲ್ಲಿ ಹಸಿರು ಉದ್ಯಾನವನ ಪ್ರಾರಂಭಿಸಲು ಸರ್ಕಾರ ಯೋಜಿಸಿದೆ. ಇದಕ್ಕೆ ರಕ್ಷಣಾ ಸಚಿವರು ಸಕಾರಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇದರ ಜೊತೆಗೆ ಉದ್ಯಾನವನ, ಮೇಕ್ರಿ ಸರ್ಕಲ್ ಹಾಗೂ ಸರ್ಜಾಪುರ ರಸ್ತೆ ಅಗಲೀಕರಣಕ್ಕೆ ಇಲಾಖೆ ಜಮೀನು ಹಸ್ತಾಂತರಿಸಲು ಮನವಿ ಮಾಡಲಾಗಿದೆ. ಬೆಂಗಳೂರಿನ ರಕ್ಷಣಾ ಜಮೀನಿನಲ್ಲಿರುವ ಕೊಳಚೆ ಪ್ರದೇಶಗಳ ಅಭಿವೃದ್ಧಿ, ಅವಳಿ ಸುರಂಗ ಯೋಜನೆ, ಅಗರ-ಸರ್ಜಾಪುರ ರಸ್ತೆ ವಿಸ್ತರಣೆ, ಏರ್ಪೋರ್ಟ್ ರಸ್ತೆಯಿಂದ (ಬಳ್ಳಾರಿ ರಸ್ತೆ) ಸರೋವರ ಲೇಔಟ್‌ಗೆ ಲಿಂಕ್ ರಸ್ತೆ ನಿರ್ಮಾಣಕ್ಕೆ ನೆರವು ಬಗ್ಗೆ ಮನವಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ

ಉಡುಪಿ, ಅ.20: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ...

ಅ. 20: ಉಡುಪಿ ನಗರ ವ್ಯಾಪ್ತಿಯ ಮನೆ ಮನೆ ಕಸ ಸಂಗ್ರಹಣೆಯಲ್ಲಿ ವ್ಯತ್ಯಯ

ಉಡುಪಿ, ಅ. 20: ನವರಾತ್ರಿ ಆಯುಧ ಪೂಜೆಯ ಪ್ರಯುಕ್ತ ಅಕ್ಟೋಬರ್ 20...

ಉಚ್ಚಿಲ ದಸರಾ ಶೋಭಾಯಾತ್ರೆ: ವಾಹನ ಸಂಚಾರಕ್ಕೆ ಬದಲಿ ಮಾರ್ಗ

ಉಡುಪಿ, ಅ.20: ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಆಯೋಜಿಸಿರುವ ಉಡುಪಿ-ಉಚ್ಚಿಲ ದಸರಾ...

ನವರಾತ್ರಿ ಮಹೋತ್ಸವ

ಪೀಠಿಕೆ ಭಾರತೀಯ ಸಾಂಸ್ಕೃತಿಕ ಪರಂಪರೆಯಲ್ಲಿ ಶರತ್ಕಾಲದ ಆಶ್ವಯುಜ ಮಾಸದ ಶುಕ್ಲ ಪಕ್ಷದ ಪಾಡ್ಯದಿಂದ...
error: Content is protected !!