ಉಡುಪಿ, ಏ.30: ಜಿಲ್ಲೆಯ ಉಡುಪಿ ತಾಲೂಕಿನ ಉದ್ಯಾವರ ಹಾಗೂ ಕಾಪು ತಾಲೂಕಿನ ಬೆಳ್ಳೆ ಹಾಗೂ ಪಡುಬಿದ್ರೆ ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ / ತೆರವಾಗಿರುವ ತಲಾ 01 ಸದಸ್ಯ ಸ್ಥಾನಗಳೂ ಸೇರಿದಂತೆ ಒಟ್ಟು 3 ಸದಸ್ಯ ಸ್ಥಾನಗಳಿಗೆ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 308 ಎಎ ಮತ್ತು 308 ಎಬಿ ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಚುನಾವಣೆ ನಡೆಸುವ) ನಿಯಮಗಳು 1993 ರ ನಿಯಮ 12 ರ ಅನ್ವಯ ಉಪ ಚುನಾವಣೆ ನಡೆಸಲು ಪರಿಷ್ಕೃತ ವೇಳಾಪಟ್ಟಿಯನ್ನು ನಿಗಧಿಪಡಿಸಿ ರಾಜ್ಯ ಚುನಾವಣಾ ಆಯೋಗವು ಆದೇಶ ಹೊರಡಿಸಿದೆ. ಜಿಲ್ಲಾಧಿಕಾರಿಗಳು ಮೇ 8 ರಂದು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದು, ನಾಮಪತ್ರಗಳನ್ನು ಸಲ್ಲಿಸಲು ಮೇ 14 ಕೊನೆಯ ದಿನ. ಮೇ 15 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಮೇ 17 ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿದೆ. ಮೇ 25 ರಂದು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ಮತದಾನ ನಡೆಯಲಿದ್ದು, ಮೇ 28 ರಂದು ತಾಲೂಕು ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಗಳ ಎಣಿಕಾ ಕಾರ್ಯಗಳು ನಡೆಯಲಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ, 1993 ರ ಪ್ರಕರಣ 308 ಎಸಿ ರಂತೆ ಚುನಾವಣಾ ನೀತಿ ಸಂಹಿತೆಯು ಚುನಾವಣೆ ನಡೆಯುವ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೇ 8 ರಿಂದ ಮೇ 28 ರ ವರೆಗೆ ಜಾರಿಯಲ್ಲಿರಲಿದೆ ಎಂದು ರಾಜ್ಯ ಚುನಾವಣಾ ಆಯೋಗದ ಕಚೇರಿ ಪ್ರಕಟಣೆ ತಿಳಿಸಿದೆ.




By
ForthFocus™