ಹಿರಿಯಡಕ, ಏ.9: ದೈಹಿಕ ಕ್ಷಮತೆಯೊಂದಿಗೆ ಮಾನಸಿಕ ಸದೃಢತೆಯನ್ನು ಉದ್ದೀಪಿಸುವ ಕ್ರೀಡಾ ಚಟುವಟಿಕೆಗಳು ಯುವ ಮನಸ್ಸುಗಳನ್ನು ಸಾಮಾಜಿಕ ಮತ್ತು ಶೈಕ್ಷಣಿಕ ಆರೋಗ್ಯದೊಂದಿಗೆ ಸುಶಿಕ್ಷಿತ ನಾಗರೀಕರನ್ನಾಗಿ ಕಟ್ಟುವಲ್ಲಿ ಉಪಯುಕ್ತವಾಗಿ ಒದಗಿ ಬರುತ್ತವೆಂದು ಹಿರಿಯಡಕ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್ ಹೇಳಿದರು. ಅವರು ಬುಧವಾರ ನಡೆದ ಹಿರಿಯಡಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 2024-25ನೇ ಸಾಲಿನ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಇವರು ಕ್ರೀಡಾಸ್ಪೂರ್ತಿಯೊಂದಿಗೆ ಜವಾಬ್ದಾರಿಯುತ ನಾಗರೀಕರನ್ನಾಗಿ ವಿದ್ಯಾರ್ಥಿಗಳು ತಮ್ಮನ್ನು ನಿರೂಪಿಸಿಕೊಳ್ಳುವ ಅವಕಾಶವಾಗಿ ಒದಗಿ ಬರುವ ಇಂತಹ ಚಟುವಟಿಕೆಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸಿಕೊಳ್ಳುವಲ್ಲಿ ನೆರವಾಗುತ್ತವೆ ಎಂದರು.
ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲ ಪ್ರಕಾಶ್ ಪ್ರಭು, ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿ ಸಂಚಾಲಕಿ ಡಾ. ಸೌಮ್ಯಲತಾ ಪಿ. ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ.ಎಂ., ದೈಹಿಕ ಶಿಕ್ಷಣ ನಿರ್ದೇಶಕ ಮಹ್ಮದ್ ರಫಿಕ್ ಮುಜಾವರ್ ಹಾಗೂ ಕ್ರೀಡಾ ಕಾರ್ಯದರ್ಶಿಗಳಾದ ರಿತೇಶ್ ಹಾಗೂ ಶ್ರೇಯಾ ಉಪಸ್ಥಿತರಿದ್ದರು. ವಿಖ್ಯಾತ್ ಪ್ರಾರ್ಥಿಸಿ, ಪ್ರಿಯಾ ಸ್ವಾಗತಿಸಿ ಶ್ರೇಯಾ ವಂದಿಸಿದರು. ಕನ್ನಡ ಉಪನ್ಯಾಸಕ ರವಿಚಂದ್ರ ಬಾಯರಿ ಕೆ. ನಿರೂಪಿಸಿದರು.




By
ForthFocus™