ಮಂಗಳೂರು, ಏ.13: ಕಾಲೇಜುಗಳಲ್ಲಿ ತುಳು ಭಾಷೆಯ ಕಲಿಕೆಗೆ ಅವಕಾಶ, ತುಳು ಸಂಸ್ಕೃತಿಗೆ ಸಂಬಂಧಿಸಿದ ಕಾರ್ಯಕ್ರಮಗಳ ಸಂಘಟಣೆ ಇತ್ಯಾದಿಗಳು ಭಾಷೆಯನ್ನು ಉಳಿಸುವ ಮತ್ತು ಬೆಳೆಸುವ ದೃಷ್ಟಿಯಲ್ಲಿ ಭರವಸೆ ಮೂಡಿಸುವಂತಹ ಬೆಳವಣಿಗೆಗಳು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ರಥಬೀದಿಯ ಡಾ. ಪಿ. ದಯಾನಂದ ಪೈ ಪಿ. ಸತೀಶ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತುಳು ಅಕಾಡೆಮಿಯ ಜಂಟಿ ಸಹಭಾಗಿತ್ವದಲ್ಲಿ ಶನಿವಾರ ನಡೆದ ತುಳು ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ವೈವಿಧ್ಯಮಯ ಅಂತರ್ ಕಾಲೇಜು ಸ್ಪರ್ಧೆ ʼಐಸಿರೊ ೨೦೨೫ʼ ನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ರಂಗ ಹಾಗು ಚಲನಚಿತ್ರ ನಟ ಪ್ರದೀಪ ಆಳ್ವ ಕದ್ರಿಯವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು, ಹಿಂದೆ ಶಾಲೆ-ಕಾಲೇಜುಗಳಲ್ಲಿ ತುಳು ಮಾತನಾಡಿದರೆ ಶಿಕ್ಷಿಸಲಾಗುತ್ತಿತ್ತು. ಆದರೆ ಈಗ ತುಳುವಿನಲ್ಲಿಯೇ ಸ್ಪರ್ಧೆಗಳು ನಡೆಯುತ್ತಿರುವುದು ಸಂತೋಷದ ವಿಚಾರ ಎಂದರು. ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಯೋಜಕರಾದ ದೇವಿಪ್ರಸಾದ್, ಕಾರ್ಯಕ್ರಮ ಸಂಘಟಿಸಿದ ಸಾಂಸ್ಕೃತಿಕ ವೇದಿಕೆಯ ಡಾ. ಜ್ಯೋತಿಪ್ರಿಯ ಮತ್ತು ಡಾ. ಕೃಷ್ಣಪ್ರಭಾ, ತುಳು ವಿಭಾಗದ ಉಪನ್ಯಾಸಕಿ ಮಣಿ ರೈ ಮೊದಲಾದವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮಮತಾ ಸ್ವಾಗತಿಸಿ, ವಿದ್ಯಾರ್ಥಿ ಶಶಾಂಕ್ ಕಾರ್ಯಕ್ರಮ ನಿರೂಪಿಸಿದರು.
ನಂತರ ನಡೆದ ವಿವಿಧ ಸ್ಪರ್ಧೆಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಹತ್ತು ಸರಕಾರಿ ಪದವಿ ಕಾಲೇಜುಗಳಿಂದ ಆಗಮಿಸಿದ್ದ ಸುಮಾರು ನೂರಿಪ್ಪತ್ತಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ಸಮಗ್ರ ಪ್ರಶಸ್ತಿಗಳಲ್ಲಿ ಮೊದಲ ಸ್ಥಾನವನ್ನು ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಬಲ್ಮಟ, ದ್ವಿತೀಯ ಸ್ಥಾನವನ್ನು ವಾಮದಪದವು ಸರಕಾರಿ ಕಾಲೇಜು ಹಾಗೂ ತೃತೀಯ ಸ್ಥಾನವನ್ನು ಸಿದ್ದಕಟ್ಟೆ ಸರಕಾರಿ ಕಾಲೇಜು ಪಡೆದುಕೊಂಡವು. ವಿಜಯಲಕ್ಷ್ಮಿ ರೈ, ಸಂಧ್ಯಾ, ಮೋಹಿತ್ ಮತ್ತು ಶರಣ್ ತೀರ್ಪುಗಾರರಾಗಿದ್ದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್ ಸಮರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದರು.




By
ForthFocus™