ಉಡುಪಿ, ನ.12: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಸಾನ್ವಿ (ಯಶೋಧ ಮತ್ತು ದಿ. ರವಿ ಪೂಜಾರಿ ಪುತ್ರಿ) ಇವಳಿಗೆ ಬ್ರಹ್ಮಾವರ ತಾಲೂಕಿನ ಸಾಸ್ತಾನದ ಗುಂಡ್ಮಿಯಲ್ಲಿ, ಅಮೇರಿಕಾದ ಡಾ. ದಿನೇಶ್ ರಾವ್ ಪೇಜಾವರ ಮತ್ತು ವೃಂದಾ ರಾವ್ ಪೇಜಾವರ ದಂಪತಿಗಳು ತಮ್ಮ ಪುತ್ರ ನವೀನ್ ಪೇಜಾವರ್ ಇವರ ಸ್ಮರಣೆಯಲ್ಲಿ ನಿರ್ಮಿಸಿದ ನೂತನ ಮನೆ ‘ನವೀನ್ ನಿಲಯ’ ನವೆಂಬರ್ 11 ರಂದು ಉದ್ಘಾಟನೆಗೊಂಡಿತು. ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಡಾ.ದಿನೇಶ್ ರಾವ್ ದಂಪತಿಗಳು ಮಾತನಾಡಿ ದಾನ ಮಾಡುವುದು ಸುಲಭ. ಆದರೆ ಅದನ್ನು ಯೋಜಿಸಿ ಸತ್ಪಾತ್ರರಿಗೆ ತಲುಪುವಂತೆ ವ್ಯವಸ್ಥೆ ಮಾಡುವುದು ಸುಲಭವಲ್ಲ. ಅಂತಹ ಕಷ್ಟಕರ ಕೆಲಸವನ್ನು ಯಕ್ಷಗಾನ ಕಲಾರಂಗ ಬಹಳ ಸಮರ್ಪಕವಾಗಿ ನಿರ್ವಹಿಸುತ್ತಿದೆ. ಕಲಾರಂಗದ ಎಲ್ಲಾ ಕೆಲಸಗಳು ನಮಗೆ ಅತ್ಯಂತ ತೃಪ್ತಿ ಕೊಟ್ಟಿವೆ. ಸಾನ್ವಿ, ಅವಳ ತಾಯಿ ಮತ್ತು ತಮ್ಮ ಈ ಮನೆಯಲ್ಲಿ ಸುಖವಾಗಿರಲೆಂದು ಹರಿಸಿದರು.
ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಯಕ್ಷಗಾನ ಕಲಾರಂಗ ಯಾರ ಶಿಫಾರಸು ಮತ್ತು ಪ್ರಭಾವಕ್ಕೆ ಒಳಗಾಗದೆ ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ಬೇಕಾದ ಅಗತ್ಯಗಳನ್ನು ಪೂರೈಸುತ್ತಾ ಸಮಾಜಮುಖಿಯಾಗಿ ಕೆಲಸ ಮಾಡುವ ಉತ್ಕೃಷ್ಟ ಸಂಸ್ಥೆಯಾಗಿದೆ ಎಂದರು. ಅಭ್ಯಾಗತರಾದ ಪಣಂಬೂರು ವಾಸುದೇವ ಐತಾಳರು ಮಾತನಾಡಿ ಡಾ.ದಿನೇಶ್ ರಾವ್ ಪೇಜಾವರರು ಅಮೇರಿಕಾದಲ್ಲಿ ಮಾಡುತ್ತಿರುವ ಸಾಮಾಜಿಕ ಕೆಲಸಗಳನ್ನು ತಿಳಿಸಿ ಅಮೇರಿಕಾದಿಂದ ಬಂದ ಪೇಜಾವರರ ಬಂಧುಗಳಿಗೆ ಕಲಾರಂಗದ ಕಾರ್ಯವೈಖರಿಯನ್ನು ವಿವರಿಸಿದರು.
ಸುಜ್ಞಾನ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷ ರಮೇಶ್ ಶೆಟ್ಟಿಯವರು ವಿದ್ಯಾಪೋಷಕ್ ಪ್ರತಿಭಾವಂತ ಬಡವಿದ್ಯಾರ್ಥಿಗಳಿಗೆ ಆಸರೆಯಾಗಿದೆ. ನಮ್ಮ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾಪೋಷಕ್ ಫಲಾನುಭವಿಗಳಿಗೆ ಶುಲ್ಕದಲ್ಲಿ ರಿಯಾಯಿತಿ ನೀಡುವುದಾಗಿ ಹೇಳಿದರು. ಮಾಲತಿ ಕರ್ನಲ್ ರಾಮಚಂದ್ರ ರಾವ್, ಸಂಜಯ ರಾವ್, ಹೇಮಾ ರಾವ್, ಶ್ಯಾಮಲಾ ಪ್ರಸಾದ್, ಡಾ. ಅಶೋಕ್ ವಾಸನ್, ನಿರ್ಮಲಾ ವಾಸನ್, ಪೃಥ್ವಿರಾಜ್, ವಿಮಲಾ ರಮೇಶ್, ಮೀರಾ ಭಟ್, ಸಹನಾ ಭಾರಧ್ವಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಸ್ಥೆಯ ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್, ಸದಸ್ಯರಾದ ಯು. ವಿಶ್ವನಾಥ್ ಶೆಣೈ, ಭುವನಪ್ರಸಾದ್ ಹೆಗ್ಡೆ, ಯು. ಅನಂತರಾಜ್ ಉಪಾಧ್ಯ, ಮರ್ಣೆ ಉಮೇಶ್ ಭಟ್, ಆರ್. ವಸಂತ, ಅಜಿತ್ ಅಂಬಲಪಾಡಿ, ಡಾ. ಪ್ರತಿಮಾ ಜೆ. ಆಚಾರ್ಯ, ನರಸಿಂಹಮೂರ್ತಿ, ಜಯರಾಮ್ ಪಡಿಯಾರ್ ಭಾಗವಹಿಸಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.




By
ForthFocus™