Home ಸುದ್ಧಿಗಳು ಪ್ರಾದೇಶಿಕ ಎಡನೀರು: ರಂಗಾಂತರಂಗ ಪುಸ್ತಕ ಬಿಡುಗಡೆ

ಎಡನೀರು: ರಂಗಾಂತರಂಗ ಪುಸ್ತಕ ಬಿಡುಗಡೆ

690
0

ಕಾಸರಗೋಡು: ಎಡನೀರು ಮಠದಲ್ಲಿ ಪತ್ರಕರ್ತ ಲಕ್ಷ್ಮೀ ಮಚ್ಚಿನ ಬರೆದ ಐದು ದಶಕಗಳ ಯಕ್ಷಗಾನ ತಿರುಗಾಟದ ಅನುಭವ ಇರುವ ಯಕ್ಷಗಾನದ ಹಿರಿಯ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯರ ಕಲಾಪಯಣದ ಪುಸ್ತಕ ’ರಂಗಾಂತರಂಗ’ವನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದರು ಅನಾವರಣಗೊಳಿಸಿದರು.

ತಮ್ಮ ಪೂರ್ವಾಶ್ರಮದಲ್ಲಿ ಲಕ್ಷ್ಮೀಶ ಅಮ್ಮಣ್ಣಾಯರ ಬಳಿ ಕೆಲ ಸಮಯ ಚೆಂಡೆ ಮದ್ದಳೆ ಕಲಿತ ಸಂದರ್ಭವನ್ನು ನೆನಪಿಸಿ, ವಿಜಯದಶಮಿಯ ಈ ಪರ್ವ ಕಾಲದಲ್ಲಿ ಪುಸ್ತಕ ಬಿಡುಗಡೆಗೊಂಡದ್ದು ಸುಯೋಗವೆಂದರು. ಲಕ್ಷ್ಮೀಶ ಅಮ್ಮಣ್ಣಾಯರ ಮಠದ ಜತೆಗಿನ ದೀರ್ಘ ಕಾಲಿಕ ಒಡನಾಟವನ್ನು ನೆನಪಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಷಿ, ಲಕ್ಷ್ಮೀಶ ಅಮ್ಮಣ್ಣಾಯರ ಕಲಾಮೌಲ್ಯ ಮತ್ತು ಶಿಸ್ತು ಇವನ್ನು ಉಲ್ಲೇಖಿಸಿ ತಾನು ಹೃದಯತುಂಬಿ ಮುನ್ನುಡಿ ಬರೆದ ಪುಸ್ತಕಗಳಲ್ಲಿ ಇದೂ ಒಂದು ಎಂದರು. ವಿಶ್ವ ರಂಗಭೂಮಿಯ ದೃಷ್ಟಿಯಿಂದ ಯಕ್ಷಗಾನ ಕಲಾವಿದರ ಕುರಿತಾದ ಪುಸ್ತಕಗಳು ಇನ್ನಷ್ಟು ಬರಬೇಕು ಎಂದರು.

ಸಮಾರಂಭದಲ್ಲಿ ಮದ್ದಳೆಗಾರ ಲಕ್ಷ್ಮೀಶ ಅಮ್ಮಣ್ಣಾಯ, ಗೀತಾ ಅಮ್ಮಣ್ಣಾಯ, ಭಾಗವತ ದಿನೇಶ ಅಮ್ಮಣ್ಣಾಯ, ಅರ್ಥಧಾರಿ ಸುಣ್ಣಂಬಳ ವಿಶ್ವೇಶ್ವರ ಭಟ್, ವಿಭಾ ಕೃಷ್ಣಪ್ರಕಾಶ್ ಉಳಿತ್ತಾಯ, ಗುರುಮೂರ್ತಿ ಅಮ್ಮಣ್ಣಾಯ ಉಪಸ್ಥಿತರಿದ್ದರು.

ಲೇಖಕ ಲಕ್ಷ್ಮೀ ಮಚ್ಚಿನ ಪ್ರಸ್ತಾವಿಸಿ, ಕಲಾವಿದ, ಲೇಖಕ ಕೃಷ್ಣಪ್ರಕಾಶ ಉಳಿತ್ತಾಯ ಸ್ವಾಗತಿಸಿ, ನಿರ್ವಹಿಸಿದರು.
ಸಮಾರಂಭಕ್ಕೆ ಮುನ್ನ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ‌ ಪಂಚವಟಿ ತಾಳಮದ್ದಳೆ ನಡೆಯಿತು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.