ಬೆಂಗಳೂರು: ದಲಿತರ ಬಗ್ಗೆ ಬಿಜೆಪಿಯವರಿಗೆ ನೈಜ ಕಾಳಜಿ ಇದ್ದರೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ದಲಿತರನ್ನೇ ಮುಖ್ಯಮಂತ್ರಿ ಮಾಡಲಿ. ಇದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ನನ್ನ ಸವಾಲು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
ಸಿದ್ದರಾಮಯ್ಯ ದಲಿತರನ್ನು ಸಿಎಂ ಮಾಡಲಿ ಎಂದು ನಳಿನ್ ಕುಮಾರ್ ಕಟೀಲ್ ನನಗೆ ಹೇಳಿದ್ದರು. ನಮ್ಮ ಪಕ್ಷದಲ್ಲಿ ದಲಿತರು ಸಿಎಂ ಆಗಿದ್ದಾರೆ. ಹೀಗಾಗಿ ಸದ್ಯ ಬಿಜೆಪಿಗೆ ಆ ಅವಕಾಶ ಇದೆ, ನಳಿನ್ ಕುಮಾರ್ ಕಟೀಲ್ ಅವರು ಈಗ ದಲಿತರನ್ನು ಸಿಎಂ ಮಾಡಿ, ಸಾಮಾಜಿಕ ನ್ಯಾಯ ಎತ್ತಿ ಹಿಡಿಯಲಿ.
ಮಠಾಧೀಶರೇ, ರಾಜಕಾರಣಕ್ಕೆ ಬರಬೇಡಿ:
ಯಾವುದೇ ಮಠಾಧೀಶರು ರಾಜಕಾರಣಕ್ಕೆ ಕೈ ಹಾಕಬಾರದು. ಇಲ್ಲಿ ಜನಾಭಿಪ್ರಾಯವೇ ಅಂತಿಮ. ಮಠಾಧೀಶರು ರಾಜಕೀಯ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಠಗಳ ಬಗ್ಗೆ ಜನರಿಗಿರುವ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ ಎಂದು ಸಿದ್ಧರಾಮಯ್ಯ ಹೇಳಿದರು.
ವಲಸಿಗರಿಗಿಲ್ಲ ಸಹಾಯ’ಹಸ್ತ’:
ವಲಸಿಗ ಸಚಿವರನ್ನು ಮತ್ತೆ ಕಾಂಗ್ರೆಸ್ ಗೆ ಸೇರಿಸಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ ಅವರು ನಮ್ಮ ಪಕ್ಷಕ್ಕೆ ಬರುತ್ತಾರೋ, ಇಲ್ಲವೋ ಎನ್ನುವುದು ನನಗಂತೂ ಗೊತ್ತಿಲ್ಲ. ಪಕ್ಷಕ್ಕೆ ಅವರನ್ನು ವಾಪಾಸು ಸೇರಿಸಿಕೊಳ್ಳುವುದಿಲ್ಲ ಎಂದು ಈ ಹಿಂದೆ ಸದನದಲ್ಲೇ ಹೇಳಿದ್ದೇನೆ. ಅದಕ್ಕೆ ನಾನು ಈಗಲೂ ಬದ್ಧನಿದ್ದೇನೆ ಎಂದು ಸಿದ್ಧರಾಮಯ್ಯ ಒತ್ತಿ ಹೇಳಿದರು.




By
ForthFocus™