ಬೆಂಗಳೂರು, ಜು.12: ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ʻನಾಡಹಬ್ಬ ದಸರಾ – 2026ʼ ಆಚರಿಸುವ ಸಂಬಂಧ ಉನ್ನತ ಮಟ್ಟದ ಪೂರ್ವಭಾವಿ ಸಭೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಿತು. ನಾಡಹಬ್ಬ ದಸರಾವನ್ನು ದೇಶ-ವಿದೇಶಗಳಲ್ಲಿ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಮಹೋತ್ಸವವಾಗಿ, ಇನ್ನಷ್ಟು ಅರ್ಥಪೂರ್ಣವಾಗಿ ಆಚರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮೈಸೂರು ದಸರಾ ಐತಿಹಾಸಿಕ ಮತ್ತು ಪಾರಂಪರಿಕ ಉತ್ಸವವಾಗಿದ್ದು, ಅದರ ಘನತೆಗೆ ಯಾವುದೇ ಧಕ್ಕೆಯಾಗದಂತೆ ಕಾಲಕ್ಕೆ ತಕ್ಕ ಬದಲಾವಣೆಗಳನ್ನು ಅಳವಡಿಸಿಕೊಂಡು ಅಂತಾರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಮೈಸೂರು ದಸರಾ ನಮ್ಮ ರಾಜ್ಯದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಜಗತ್ತಿಗೆ ಪರಿಚಯಿಸುವ ಮಹೋತ್ಸವವಾಗಿದ್ದು, ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳಿಗೆ ಅನುಗುಣವಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಶಕ್ತಿ ಯೋಜನೆ ಜಾರಿ ಬಳಿಕ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗಿದ್ದು,ಈ ಹಿನ್ನೆಲೆಯಲ್ಲಿ ಅಗತ್ಯ ಮೂಲಸೌಕರ್ಯ ಮತ್ತು ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕು.
ರಾಷ್ಟ್ರಮಟ್ಟದ ಖ್ಯಾತಿಯ ಗಾಯಕರು, ಸಂಗೀತಗಾರರು ಹಾಗೂ ಕಲಾವಿದರನ್ನು ಆಹ್ವಾನಿಸಿ ಜನರಿಗೆ ಗುಣಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಲಾಗಿದ್ದು, ಈ ಪರಂಪರೆಯನ್ನು ಮುಂದುವರಿಸಬೇಕು. ದಸರಾ ಆಯೋಜನಾ ಸಮಿತಿಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ಉತ್ಸವದ ಯಶಸ್ಸನ್ನೇ ಮುಖ್ಯ ಗುರಿಯನ್ನಾಗಿ ಮಾಡಿಕೊಂಡು ಕೆಲಸ ಮಾಡಬೇಕು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಅವಧಿಯಲ್ಲಿ ರೂಪುಗೊಂಡ ಉತ್ತಮ ಸಂಪ್ರದಾಯಗಳು ಹಾಗೂ ವ್ಯವಸ್ಥೆಗಳನ್ನು ಮುಂದುವರಿಸಿಕೊಂಡು ಹೋಗಬೇಕು. ದಸರಾ ಕುರಿತು ಟೀಕೆ-ವಿಮರ್ಶೆಗಳು ಸಹಜ. ಅವುಗಳಿಗೆ ಅತಿಯಾದ ಮಹತ್ವ ನೀಡದೆ, ಜನರ ನಿರೀಕ್ಷೆಗೆ ತಕ್ಕಂತೆ ಅತ್ಯುತ್ತಮ ಉತ್ಸವ ಆಯೋಜಿಸುವುದರತ್ತ ಸಂಪೂರ್ಣ ಗಮನಹರಿಸಬೇಕು. ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಉಪಮುಖ್ಯಮಂತ್ರಿಗಳಾದ ಡಾ. ಜಿ ಪರಮೇಶ್ವರ, ಸಚಿವರಾದ ಕೆ.ಜೆ ಜಾರ್ಜ್, ಪ್ರಿಯಾಂಕ್ ಖರ್ಗೆ, ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಸಚಿವರಾದ ಹೆಚ್.ಸಿ ಮಹದೇವಪ್ಪ, ಕೆ. ವೆಂಕಟೇಶ್, ಸಂಸದರಾದ ಯದುವೀರ್ ಒಡೆಯರ್, ಮಾಜಿ ಸಚಿವರಾದ ಜಿ.ಟಿ ದೇವೇಗೌಡ, ಶಾಸಕರಾದ ತನ್ವೀರ್ ಸೇಠ್, ಅನಿಲ್ ಚಿಕ್ಕಮಾದು, ರಮೇಶ್ ಬಂಡಿಸಿದ್ದೇಗೌಡ, ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಮುಂತಾದವರು ಉಪಸ್ಥಿತರಿದ್ದರು.




By
ForthFocus™