ಜಿಲ್ಲೆಯಲ್ಲಿ ಜೂನ್ 24 ರಂದು ಬೆಳಗ್ಗೆ 9.30 ರಿಂದ ಸಂಜೆ 4.30 ರ ವರೆಗೆ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳಿಗೆ, ಆದ್ಯತಾ ಗುಂಪಿನವರಿಗೆ, ಆರೋಗ್ಯ ಕಾರ್ಯಕರ್ತರುಗಳಿಗೆ, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರುಗಳಿಗೆ ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಪ್ರಥಮ ಡೋಸ್ ಮತ್ತು 2ನೇ ಡೋಸ್ ಕೋವಿಡ್-19 ಲಸಿಕೆಯು ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ (ಸೇಂಟ್ ಸಿಸಿಲಿ ಶಾಲೆ) ಕೋವಿಶೀಲ್ಡ್ – 150 ಡೋಸ್, ಕಕ್ಕುಂಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋವಿಶೀಲ್ಡ್ -300 ಡೋಸ್ ಹಾಗೂ ಹನುಮಂತನಗರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ (ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ) ಕೋವಿಶೀಲ್ಡ್ – 150 ಡೋಸ್ ಲಭ್ಯವಿರುತ್ತದೆ.
ಜೂನ್ 25 ರ ಒಳಗೆ ವಿದೇಶ ಪ್ರಯಾಣ ಮಾಡುವವರಲ್ಲಿ ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 28 ದಿನಗಳು ಮೀರಿದವರಿಗೆ 2ನೇ ಡೋಸ್ ಕೋವಿಶೀಲ್ಡ್- 200 ಡೋಸ್ ಲಸಿಕೆಯು ನಗರದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (ಬಿ.ಆರ್.ಎಸ್) ಲಭ್ಯವಿರುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ರಾಜ್ಯ ಸರಕಾರ ಗುರುತಿಸಿರುವ ಅನುಬಂಧ-1 ರಲ್ಲಿರುವ ಕೊರೋನ ಮುಂಚೂಣಿ ಕಾರ್ಯಕರ್ತರು, ದುರ್ಬಲ ಗುಂಪಿನ ಫಲಾನುಭವಿಗಳು, ಆದ್ಯತಾ ಗುಂಪಿನವರು, ಆರೋಗ್ಯ ಕಾರ್ಯಕರ್ತರು, ಕೇಂದ್ರ ಸರಕಾರ ಗುರುತಿಸಿರುವ ಮುಂಚೂಣಿ ಕಾರ್ಯಕರ್ತರು ಹಾಗೂ 45 ವರ್ಷ ಮೇಲ್ಪಟ್ಟ ಸಾರ್ವಜನಿಕರು ಕೋವಿಡ್-19 ಪ್ರಥಮ ಡೋಸ್ ಮತ್ತು 2ನೇ ಡೋಸ್ ಲಸಿಕೆ ಪಡೆಯಲು ಹತ್ತಿರದ ಸರಕಾರಿ ಆಸ್ಪತ್ರೆ/ಆಶಾ ಕಾರ್ಯಕರ್ತೆಯರನ್ನು ಸಂಪರ್ಕಿಸಿ ಲಸಿಕೆ ಲಭ್ಯತೆಯನ್ನು ಖಚಿತಪಡಿಸಿಕೊಂಡು ಜೂನ್ 24 ರಂದು ಲಸಿಕಾ ಕೇಂದ್ರಕ್ಕೆ ಬಂದು ಲಸಿಕೆ ಪಡೆಯಬಹುದು.
ಕೋವಿಶೀಲ್ಡ್ ಮೊದಲ ಡೋಸ್ ಲಸಿಕೆ ಪಡೆದು 84 ದಿನಗಳು ಮೀರಿದವರು 2ನೇ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆಯಲು ಹಾಗೂ ಕೋವ್ಯಾಕ್ಸಿನ್ ಪ್ರಥಮ ಡೋಸ್ ಲಸಿಕೆ ಪಡೆದು 4 ವಾರ (28 ದಿನ) ಮೀರಿದವರು ಕೋವ್ಯಾಕ್ಸಿನ್ 2ನೇ ಡೋಸ್ ಲಸಿಕೆ ಪಡೆಯಲು ಅರ್ಹರಿರುತ್ತಾರೆ. ಜಿಲ್ಲೆಯಲ್ಲಿ 18 ರಿಂದ 44 ವರ್ಷ ವಯೋಮಿತಿಯ ಸಾರ್ವಜನಿಕರಿಗೆ ಯಾವುದೇ ಕೋವಿಡ್-19 ಲಸಿಕೆ ಲಭ್ಯವಿರುವುದಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




By
ForthFocus™