ಉಡುಪಿ, ನ.23: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‍ನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ರಶ್ಮಿತಾ (ಚಂದ್ರಾವತಿ ಮತ್ತು ರಮೇಶ ನಾಯ್ಕ ಪುತ್ರಿ) ಇವಳಿಗೆ ಪೇತ್ರಿಯ ಕನ್ನಾರಿನಲ್ಲಿ, ಪಾರಂಪಳ್ಳಿ ಪಡುಕೆರೆ ಉಪಾಧ್ಯರ ಕೇರಿಯ ಬಂಧುಗಳು ತಮ್ಮ ಗ್ರಾಮ ದೇವತೆಯ ಸೇವೆಯಾಗಿ ನಿರ್ಮಿಸಿದ ನೂತನ ಮನೆ ‘ಇಷ್ಟದೇವತಾ ಕೃಪಾ’ ಭಾನುವಾರ ಹಸ್ತಾಂತರಗೊಂಡಿತು. ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಹಿರಿಯರಾದ ಶ್ರೀಧರ ಉಪಾಧ್ಯ ದಂಪತಿಗಳು ಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಾ ಸಮಾಜಮುಖಿಯಾಗಿ ಕೆಲಸ ಮಾಡುತ್ತಿರುವ ಯಕ್ಷಗಾನ ಕಲಾರಂಗವನ್ನು ಮತ್ತು ಫಲಾನುಭವಿ ರಶ್ಮಿತಾಳ ಕುಟುಂಬವನ್ನು ಹರಸಿದರು. ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಯಶ್ ಪಾಲ್ ಎ ಸುವರ್ಣ ಮಾತನಾಡಿ ಕಲಾರಂಗ ಮಾಡುತ್ತಿರುವ ಕೆಲಸದ ಅಗಾಧತೆಗೆ ಬೆರಗಾಗಿದ್ದೇನೆ. ವಿದ್ಯಾಪೋಷಕ್, ಯಕ್ಷಶಿಕ್ಷಣ ಹೀಗೆ ಸಾಮಾಜಿಕವಾಗಿ ಸಾಂಸ್ಕೃತಿಕವಾಗಿ ಈ ಸಂಸ್ಥೆಯು ಸರಕಾರಿ ಇಲಾಖೆಗಳು ಮಾಡಬೇಕಾದ ಕೆಲಸವನ್ನು ಮಾಡುತ್ತಿದೆ ಎಂದರು. ಲಕ್ಷ್ಮೀನಾರಾಯಣ ಉಪಾಧ್ಯರು ಮಾತನಾಡಿ ನಾನು ಆರಂಭದಲ್ಲಿ ಕಲಾರಂಗದ ಕೋಶಾಧಿಕಾರಿಯಾಗಿದ್ದವನು. ಇಂದಿನ ನಾಯಕತ್ವ ಮತ್ತು ಕಾರ್ಯಕರ್ತರ ಪಡೆ ಮಾಡುತ್ತಿರುವ ಸಾಧನೆ ಅತ್ಯಂತ ಸಂತೋಷ ತಂದಿದೆ. ಪಾರಂಪಳ್ಳಿ ಕೇರಿಯ ಉಪಾಧ್ಯರ ಮನೆತನದ ಹಿರಿಯರ ಹಿರಿಮೆಯನ್ನು ಸ್ಮರಿಸಿಕೊಂಡರು. ಡಾ. ಗಿರಿಧರ ಉಪಾಧ್ಯರು ರಾಷ್ಟ್ರ ಎಲ್ಲಕ್ಕಿಂತಲೂ ದೊಡ್ದದು, ಯಾವುದೇ ಜಾತಿ ಮತ ಎಣಿಸದೆ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡುವ ಕಲಾರಂಗವು ರಾಷ್ಟ್ರದೇವೋಭವ ಎಂಬ ತತ್ವವನ್ನು ರೂಢಿಸಿಕೊಂಡಿದೆ ಎಂದರು. ವೈದ್ಯರಾದ ಡಾ. ಮಧುಸೂದನ ಉಪಾಧ್ಯರು ವಿದ್ಯಾಪೋಷಕ್ ನಲ್ಲಿ ದೈಹಿಕ ಮತ್ತು ಮಾನಸಿಕ ಅನಾರೋಗ್ಯಕ್ಕೆ ಒಳಗಾದ ಕುಟುಂಬಕ್ಕೆ ವೈದ್ಯಕೀಯ ಸಹಾಯ ಮಾಡಲು ತಾನು ಸಹಕರಿಸುತ್ತೇನೆ ಎಂದು ಹೇಳಿದರು.
ಇಷ್ಟದೇವತಾ ಅರ್ಚಕ ಅರುಣ್ ಉಪಾಧ್ಯರು ನಮ್ಮ ಆರಾಧ್ಯ ದೈವ ಎಲ್ಲರಿಗೂ ಒಳಿತು ಮಾಡಲೆಂದು ಹಾರೈಸಿದರು. ವಿವೇಕ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ ನಾವುಡರು ಬರುವ ವರ್ಷ ರಶ್ಮಿತಾಳ ಕಾಲೇಜು ಶುಲ್ಕವನ್ನು ಪೂರ್ತಿಯಾಗಿ ಭರಿಸಲು ತಾನು ವ್ಯವಸ್ಥೆ ಮಾಡುತ್ತೇನೆ ಎಂದರು. ಮನೆನಿರ್ಮಾಣ ಪ್ರಾಯೋಜಕತ್ವ ವಹಿಸುವಲ್ಲಿ ಎಲ್ಲರನ್ನೂ ಒಟ್ಟುಗೂಡಿಸಿದ ಮಂಟಪ ನಟರಾಜ ಉಪಾಧ್ಯರು ವಿವೇಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ವರ್ಷ ಮನೆನಿರ್ಮಾಣವು ಸೇರಿದಂತೆ ರೂ ಮೂವತ್ತು ಲಕ್ಷಕ್ಕೂ ಹೆಚ್ಚು ನೆರವು ಪಡೆದಿದ್ದಾರೆ. ಈ ಕಾಲೇಜಿನ ಹಳೆ ವಿದ್ಯಾರ್ಥಿಗಳು ಇದನ್ನು ಲಕ್ಷ್ಯದಲ್ಲಿಟ್ಟು ಕಲಾರಂಗದ ಕೆಲಸಕ್ಕೆ ಸಹಾಯ ಮಾಡಬೇಕೆಂದು ವಿನಂತಿಸುತ್ತೇನೆ ಎಂದರು.
ಮನೆನಿರ್ಮಾಣಕ್ಕೆ ದೇಣಿಗೆ ನೀಡಿದ ಮಂಟಪ ಮನೋಹರ ಉಪಾಧ್ಯ, ಯಶೋದಾ ಗೋಪಾಲ ಉಪಾಧ್ಯ, ಪ್ರವೀಣ್ ಉಪಾಧ್ಯ, ರಾಘವೇಂದ್ರ ಉಪಾಧ್ಯ, ದಿನೇಶ್ ಉಪಾಧ್ಯ, ಶಶಿಧರ ಉಪಾಧ್ಯ, ಶ್ರೀನಿವಾಸ ಉಪಾಧ್ಯ ಮತ್ತು ನಾಗಭೂಷಣ ಉಪಾಧ್ಯ ಇವರುಗಳನ್ನು ಗೌರವಿಸಲಾಯಿತು. ಹಿರಿಯ ಸಾಮಾಜಿಕ ಕಾರ್ಯಕರ್ತ ಕಮಲಾಕ್ಷ ಹೆಬ್ಬಾರ್, ಕನ್ನಾರು ನಾರಾಯಣ ಮಂಜ, ನಿವೃತ್ತ ಶಿಕ್ಷಕ ಭಾಸ್ಕರ ಭಟ್, ಚಂದ್ರಶೇಖರ ನಾವುಡ, ಅನ್ನಪೂರ್ಣ ನರ್ಸರಿಯ ಪ್ರಸಾದ್ ಭಟ್, ಟಿ. ಭಾಸ್ಕರ್ ರೈ, ಹರೀಶ್ ಶೆಟ್ಟಿ ಚೇರ್ಕಾಡಿ, ಮೇಜರ್ ಜಿ. ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ಪ್ರೊ. ಕೆ. ಸದಾಶಿವ ರಾವ್, ಸದಸ್ಯರುಗಳಾದ ರಾಜಗೋಪಾಲ ಆಚಾರ್ಯ, ಅನಂತರಾಜ್ ಉಪಾಧ್ಯ, ಹಿರಿಯಣ್ಣ ಕಿದಿಯೂರು, ಡಾ. ರಾಜೇಶ್ ನಾವುಡ, ವಸಂತ ಆರ್, ನಾಗರಾಜ ಹೆಗಡೆ, ಡಾ. ಪ್ರತಿಮಾ ಆಚಾರ್ಯ, ವಿನೋದಾ ಎಂ. ಕಡೆಕಾರ್ ಭಾಗವಹಿಸಿದ್ದರು. ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.




By
ForthFocus™