ಉಡುಪಿ, ನ.22: ಜಿಲ್ಲೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನ್ಯಾಯಬೆಲೆ ಅಂಗಡಿಗಳಿಂದ ಪಡಿತರ ಪಡೆಯುತ್ತಿರುವ ಆದ್ಯತಾ (ಬಿಪಿಎಲ್) ಮತ್ತು ಅಂತ್ಯೋದಯ (ಎಎವೈ) ಪಡಿತರ ಚೀಟಿಯಲ್ಲಿರುವ ಫಲಾನುಭವಿಗಳ ಮಾಹಿತಿಯನ್ನು ನವೀಕರಿಸುವ ಉದ್ದೇಶದಿಂದ ಇ- ಕೆವೈಸಿ ಮಾಡಿಸಿ 1 ವರ್ಷ ಪೂರ್ಣಗೊಂಡಿರುವ ಮತ್ತು ಇ-ಕೆವೈಸಿ ಮಾಡಿಸಿ 5 ವರ್ಷಗಳು ಪೂರ್ಣಗೊಂಡಿರುವ ಪಡಿತರ ಚೀಟಿದಾರರು ಹೀಗೆ ಎರಡೂ ವರ್ಗಗಳ ಪಡಿತರ ಚೀಟಿದಾರರು ಕಡ್ಡಾಯವಾಗಿ ಮರು ಇ-ಕೆವೈಸಿ ಮಾಡಿಸಿಕೊಳ್ಳಬೇಕಾಗಿರುತ್ತದೆ. ಈ ಸಂಬಂಧ, ಜಿಲ್ಲೆಯಲ್ಲಿ 1 ವರ್ಷ ಪೂರೈಸಿರುವ ಒಟ್ಟು 2,70,204 ಫಲಾನುಭವಿಗಳ ಪೈಕಿ 27,708 ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಂಡಿದ್ದು, ಇನ್ನೂ 2,42,496 ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆಯು ಬಾಕಿ ಇರುತ್ತದೆ. ಅದೇ ರೀತಿ 5 ವರ್ಷಗಳು ಪೂರೈಸಿರುವ ಒಟ್ಟು 4,47,562 ಫಲಾನುಭವಿಗಳ ಪೈಕಿ 3,99,882 ಫಲಾನುಭವಿಗಳ ಇ-ಕೆವೈಸಿ ಪೂರ್ಣಗೊಂಡಿದ್ದು, ಇನ್ನೂ 47,680 ಫಲಾನುಭವಿಗಳ ಇ-ಕೆವೈಸಿ ಪ್ರಕ್ರಿಯೆಯು ಬಾಕಿ ಇರುತ್ತದೆ.
ಬಾಕಿ ಉಳಿದಿರುವ ಎಲ್ಲಾ ಫಲಾನುಭವಿಗಳ ಇ-ಕೆವೈಸಿ ಮಾಡಿಸಲು ನವೆಂಬರ್ 30 ರ ಕಾಲಾವಕಾಶ ನೀಡಲಾಗಿದ್ದು, ಫಲಾನುಭವಿಗಳು ತಮ್ಮ ಹತ್ತಿರದ ಯಾವುದೇ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಅಥವಾ “ಅನ್ನಸೇವಾ” ಆಪ್ ಅನ್ನು ಮೊಬೈಲ್‌ನ ಪ್ಲೇಸ್ಟೋರ್‌ನಿಂದ ಡೌನ್ಲೋಡ್ ಮಾಡಿಕೊಂಡು ಇ-ಕೆವೈಸಿಯನ್ನು ಮಾಡಿಕೊಳ್ಳಬಹುದಾಗಿದೆ. ಇದು ಸಂಪೂರ್ಣ ಉಚಿತವಾಗಿದ್ದು, ನಿಗದಿತ ಗಡುವಿನ ಒಳಗಾಗಿ ಇ-ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಕೊಳ್ಳಬೇಕು. ನಿಗದಿತ ಅವಧಿಯೊಳಗೆ ಇ-ಕೆವೈಸಿ ಮಾಡಿಸಿಕೊಳ್ಳದ ಪಡಿತರ ಚೀಟಿದಾರರಿಗೆ ಮುಂದಿನ ದಿನಗಳಲ್ಲಿ ಪಡಿತರ ವಿತರಣೆಯಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇರುವುದರಿಂದ ಮೇಲ್ಕಂಡ ಇ-ಕೆವೈಸಿ ಮಾಡಿಸದೇ ಇರುವ ಅರ್ಹ ಫಲಾನುಭವಿಗಳು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ.
ಇ-ಕೆವೈಸಿ ಮಾಡಿಸಲು ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ, ಮೊಬೈಲ್ ಸಂಖ್ಯೆ ಲಿಂಕ್ ಆಗಿರುವ ಆಧಾರ್ ಕಾರ್ಡ್ನ್ನು ತೆಗೆದುಕೊಂಡು ಸಮೀಪದ ನ್ಯಾಯಬೆಲೆ ಅಂಗಡಿಗೆ ತೆರೆಳಿ ಇ-ಕೆವೈಸಿಯನ್ನು ಮಾಡಿಸಿಕೊಳ್ಳಬಹುದಾಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.




By
ForthFocus™