Wednesday, November 11, 2026
Wednesday, November 11, 2026

ನಾರಿ ಶಕ್ತಿಯ ಪ್ರತೀಕ ವೀರ ವನಿತೆ ಒನಕೆ ಓಬವ್ವ: ದಿನಕರ ಹೇರೂರು

ನಾರಿ ಶಕ್ತಿಯ ಪ್ರತೀಕ ವೀರ ವನಿತೆ ಒನಕೆ ಓಬವ್ವ: ದಿನಕರ ಹೇರೂರು

Date:

ಉಡುಪಿ, ನ.11: ವೀರ ವನಿತೆ ಓಬವ್ವ ಎಂಬ ಪದ ಕೇಳಿದರೆ ಪ್ರತಿಯೊಬ್ಬರಿಗೂ ಮೈ ರೋಮಾಂಚನವಾಗುತ್ತದೆ. ಕಿಚ್ಚು, ಧೈರ್ಯ, ಸಾಹಸಕ್ಕೆ ಹೆಸರುವಾಸಿಯಾದ ಇವರು, ಶತ್ರುಗಳ ದಾಳಿಯಿಂದ ಚಿತ್ರದುರ್ಗ ಕೋಟೆಯನ್ನು ರಕ್ಷಿಸುವ ಮೂಲಕ ನಾರೀ ಶಕ್ತಿಯ ಪ್ರತೀಕವಾಗಿ ಹಾಗೂ ಮಹಿಳೆಯರಿಗೆ ಪ್ರೇರಣೆಯಾಗಿ ಇಂದಿಗೂ ಚಿರಸ್ಥಾಯಿಯಾಗಿದ್ದಾರೆ ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ವೀರ ವನಿತೆ ಒನಕೆ ಓಬವ್ವ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಓಬವ್ವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಸಮೃದ್ಧವಾದ ನಾಡನ್ನು ಕಟ್ಟುವಲ್ಲಿ ಅನೇಕ ಮಹನೀಯರು, ಮಹಿಳೆಯರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅಂತಹ ಮಹಿಳೆಯರಲ್ಲಿ ಒಬವ್ವ ಕೂಡ ಒಬ್ಬರು. ಅವರ ಸಾಹಸಗಾಥೆಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ನಿಟ್ಟಿನಲ್ಲಿ ಹಾಗೂ ಅವರ ಮಾರ್ಗದರ್ಶನದಲ್ಲಿ ನಡೆಯಲು ಸರಕಾರದ ವತಿಯಿಂದ ಇಂತಹ ಮಹಾನ್ ಚೇತನರ ಜಯಂತಿ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದರು. ಹೈದರಾಲಿ ಸೈನ್ಯವು ಚಿತ್ರದುರ್ಗದ ಕೋಟೆಯ ಮೇಲೆ ದಾಳಿ ನಡೆಸಿ, ರಹಸ್ಯ ಕಿಂಡಿಯ ಮೂಲಕ ಕೋಟೆಯೊಳಗೆ ನುಸುಳಲು ಶತ್ರು ಸೈನಿಕರು ಯತ್ನಿಸುತ್ತಿರುವುದನ್ನು ಕಂಡ ಓಬವ್ವ ತನ್ನ ನಾಡನ್ನು ಶತ್ರುಗಳಿಂದ ರಕ್ಷಿಸಲು, ಒನಕೆಯನ್ನು ತನ್ನ ಆಯುಧವನ್ನಾಗಿ ಮಾಡಿಕೊಂಡು ಶತ್ರು ಸೈನಿಕರನ್ನು ಒಬ್ಬೊಬ್ಬರಾಗಿ ಕೊಂದು ಕೋಟೆಯನ್ನು ರಕ್ಷಿಸಿದಳು. ಓಬವ್ವ ರಂತೆ ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಸೇರಿದಂತೆ ಮತ್ತಿತರ ಮಹಿಳೆಯರು ತಮ್ಮದೇ ಮಾರ್ಗದಲ್ಲಿ ದೇಶ, ನಾಡು ರಕ್ಷಣೆಗೆ ಸೇವೆ ಸಲ್ಲಿಸಿದ್ದಾರೆ. ಅವರ ಈ ತ್ಯಾಗ, ಸಾಹಸ ಮತ್ತು ಕೆಚ್ಚೆದೆಯ ಬದುಕು ಮಹಿಳೆಯರು ಸೇರಿದಂತೆ ಪ್ರತಿಯೊಬ್ಬರಿಗೂ ಸ್ಫೂರ್ತಿಯಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಪರ ಜಿಲ್ಲಾಧಿಕಾರಿ ಅಬೀದ್ ಗದ್ಯಾಳ್ ಮಾತನಾಡಿ, ಹೆಣ್ಣು ಮಕ್ಕಳು ತಮ್ಮ ಆತ್ಮರಕ್ಷಣೆಯ ಜೊತೆಗೆ ದೇಶ ರಕ್ಷಣೆಯನ್ನು ಮಾಡಬಹುದು ಎನ್ನುವುದು ಓಬವ್ವ ಸೇರಿದಂತೆ ಅನೇಕ ವೀರ ಮಹಿಳೆಯರ ಯಶೋಗಾಥೆಯಿಂದ ತಿಳಿಯಬಹುದು. ಅವರ ಸಮರ್ಪಣಾ ಭಾವ ಪ್ರತಿಯೊಬ್ಬರಿಗೂ ಮಾದರಿಯಾಗುವಂತದ್ದು ಎಂದ ಅವರು, ಪ್ರತಿ ಪೋಷಕರ ತಮ್ಮ ಮಕ್ಕಳಿಗೆ ದೈಹಿಕ ಕಸರತ್ತನ್ನು ಕಲಿಸಬೇಕು ಎಂದರು. ಓಬವ್ವರ ಕುರಿತು ಉಪನ್ಯಾಸ ನೀಡಿದ ನಿವೃತ್ತ ಕನ್ನಡ ಉಪನ್ಯಾಸಕಿ ನಳಿನಾದೇವಿ ಎಂ.ಆರ್ ಮಾತನಾಡಿ, 18 ನೇ ಶತಮಾನದಲ್ಲಿ ಚಿತ್ರದುರ್ಗ ಎಂಬ ಉಕ್ಕಿನ ಕೋಟೆಯನ್ನು ಆಳುತ್ತಿದ್ದ ಪಾಳೆಗಾರ ಮದಕರಿ ನಾಯಕ. ಆ ಅರಮನೆಯ ಕಾವಲುಗಾರನ ಪತ್ನಿ ಓಬವ್ವ. ಮನೆವಾರ್ತೆ ಕೆಲಸ ಮಾಡಿಕೊಂಡಿದ್ದ ಓಬವ್ವ ಯುದ್ಧಕಲೆಯ ಆಳ, ಅಗಲದ ಅರಿವಿಲ್ಲದೆ ಇದ್ದರೂ ತನ್ನ ನಾಡಿನ ರಕ್ಷಣೆ ಮಾಡಬೇಕೆಂಬ ಕಿಚ್ಚು ಅವರಲ್ಲಿತ್ತು. ಹೈದರಾಲಿಯ ಸೈನಿಕರು ಚಿತ್ರದುರ್ಗದ ಕೋಟೆಯನ್ನು ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಊಟ ಮಾಡುತ್ತಿರುವ ಗಂಡನನ್ನು ಎಬ್ಬಿಸದೇ, ಶತ್ರು ಸೈನ್ಯವನ್ನು ಕೇವಲ ಒನಕೆಯಿಂದ ಸದೆ ಬಡಿದು, ಕೆಚ್ಚೆದೆಯಿಂದ ಹೋರಾಡಿ ವೀರ ಮರಣವನ್ನಪ್ಪಿದ ಧೀರ ಮಹಿಳೆ. ಆಕೆಯ ಅಪ್ರತಿಮ ಸಾಹಸ, ಧೈರ್ಯ, ಸಮಯಪ್ರಜ್ಞೆ ಸ್ತ್ರೀ ಶಕ್ತಿಯ ಪ್ರತೀಕವಾಗಿದ್ದು, ಅವರ ತೇಜಸ್ಸು ಪ್ರತಿಯೊಬ್ಬರಲ್ಲೂ ಉದ್ದೀಪನಗೊಳ್ಳಬೇಕಿದೆ ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ಉಪತಹಶೀಲ್ದಾರ್ ನವನೀತ್, ಜಿಲ್ಲಾಡಳಿತದ ಸಿಬ್ಬಂದಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿ, ಇಲಾಖೆಯ ಸಿಬ್ಬಂದಿ ವರ್ಷಾ ಬಿ ಕೋಟ್ಯಾನ್ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಮಣಿಪಾಲ ಜ್ಞಾನಸುಧಾ ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ

ಉಡುಪಿ, ನ.11: ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಅತ್ಯುತ್ತಮ ಪಠ್ಯೇತರ ಚಟುವಟಿಕೆಗಳಲ್ಲೊಂದು ರಾಷ್ಟ್ರೀಯ...

ಡಾ. ಬಿ. ಬಿ ಹೆಗ್ಡೆ ಕಾಲೇಜು: ದೀಪಾವಳಿ ಸಂಭ್ರಮ

ಕುಂದಾಪುರ, ನ.11: ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ...

ತುಳು ಸಂಸ್ಕೃತಿ ಬೆಳಗಿದ ಆಕಾಶದೀಪ; ಇತಿಹಾಸ ನೆನಪಿಸಿದ ಪರ್ಕಳ ವಾಲಿಬಾಲ್​ ಫ್ರೆಂಡ್ಸ್​

ಕ್ರೀಡಾ ಕ್ಷೇತ್ರದೊಂದಿಗೆ ಸಾಮಾಜಿಕ ಕಾರ್ಯಗಳ ಮೂಲಕವೂ ನಾಡಿನ ಗಮನ ಸೆಳೆಯುವ ಪರ್ಕಳದ...

ಹಿಂದಿನ ಎಲ್ಲಾ ಸಾಧಕರು ಮಾತೃಭಾಷೆಯಲ್ಲೇ ಶಿಕ್ಷಣ ಪಡೆದಿದ್ದಾರೆ: ಸಾಹಿತಿ ಇಂದಿರಾ ಹಾಲಂಬಿ

ಉಡುಪಿ, ನ.9: ದೇಶ ಬಹಳಷ್ಟು ಪ್ರಗತಿ ಸಾಧಿಸಿದೆ. ಶೈಕ್ಷಣಿಕ, ತಾಂತ್ರಿ​ಕ ಕ್ಷೇತ್ರದಲ್ಲಿ...
error: Content is protected !!