ಬಾರಕೂರು, ನ.5: ಶ್ರೀಮತಿ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ಬಾರ್ಕೂರು ಇಲ್ಲಿ 2026-27 ನೇ ಸಾಲಿನ ವಿದ್ಯಾರ್ಥಿ ಕ್ಷೇಮಪಾಲನಾ ವೇದಿಕೆಯ ಉದ್ಘಾಟನಾ ಕಾರ್ಯಕ್ರಮ ನಡೆಯಿತು. ಕುಂದಾಪುರ ಶಾಸಕರೂ, ಕಾಲೇಜು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರಾಗಿರುವ ಕಿರಣ್ ಕುಮಾರ್ ಕೊಡ್ಗಿ ಕಾರ್ಯಕ್ರಮ ಉದ್ಘಾಟಿಸಿದರು. ಇಂದಿನ ವಿದ್ಯಾರ್ಥಿಗಳು ಮೊಬೈಲ್ ಗೀಳು, ಡ್ರಗ್ಸ್ ಮುಂತಾದ ಬಾಹ್ಯ ಪ್ರಲೋಭನೆಗಳಿಂದ ನಿಮ್ಮನ್ನು ನೀವು ರಕ್ಷಿಸಿಕೊಂಡು, ಸಾಧನೆಯ ಕಡೆ ಮುನ್ನುಗ್ಗುವಂತೆ ಕರೆ ನೀಡಿದರು. ಯುವಜನತೆ ಭಾವೋದ್ವೇಗಕ್ಕೆ ಒಳಗಾಗದೆ ವೈಚಾರಿಕತೆಯನ್ನು ಬೆಳೆಸಿಕೊಂಡು ಉತ್ತಮ ನಾಯಕರಾಗಿ ಎಂದರು.
ಪ್ರಾಂಶುಪಾಲರಾದ ಪ್ರೊ. ಭಾಸ್ಕರ್ ಶೆಟ್ಟಿ ಎಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಾರ್ಕೂರು ರೋಟರಿ ಅಧ್ಯಕ್ಷರಾದ ಅಜಿತ್ ಕುಮಾರ್ ಶೆಟ್ಟಿ, ಟೀಚರ್ಸ ಕೋ ಆಪರೇಟಿವ್ ಬ್ಯಾಂಕ್ ಉಡುಪಿ ಇದರ ಅಧ್ಯಕ್ಷರಾದ ದಿನಕರ್ ಶೆಟ್ಟಿ ಅಂಪಾರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ವಿದ್ಯಾರ್ಥಿ ಪದಾಧಿಕಾರಿಗಳಿಗೆ ಪ್ರಮಾಣವಚನವನ್ನು ಬೋಧಿಸಲಾಯಿತು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿಗಳಾದ ಲೊಲಾಕ್ಷಿ ಸ್ವಾಗತಿಸಿ, ಅಂಕಿತ ತೃತೀಯ ಬಿಬಿಎ ವಂದಿಸಿದರು. ಕನ್ನಡ ವಿಭಾಗ ಮುಖ್ಯಸ್ಥರಾದ ಶೈಲಜಾ ಕಾರ್ಯಕ್ರಮ ನಿರೂಪಿಸಿದರು.




By
ForthFocus™