Friday, October 23, 2026
Friday, October 23, 2026

ದಾರ್ಶನಿಕರ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶ, ಜೀವನ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿ: ಶಾಸಕ ಯಶ್‌ಪಾಲ್ ಎ ಸುವರ್ಣ

ದಾರ್ಶನಿಕರ, ಸ್ವಾತಂತ್ರ್ಯ ಹೋರಾಟಗಾರರ ಆದರ್ಶ, ಜೀವನ ತತ್ವಗಳನ್ನು ಪ್ರತಿಯೊಬ್ಬರೂ ಪಾಲಿಸಿ: ಶಾಸಕ ಯಶ್‌ಪಾಲ್ ಎ ಸುವರ್ಣ

Date:

ಉಡುಪಿ, ಅ.23: ನಾಡಿನ ಸಾಂಸ್ಕೃತಿಕ, ಸಾಮಾಜಿಕ ಮತ್ತು ಧಾರ್ಮಿಕ ಬೆಳವಣಿಗೆಗೆ ಶ್ರಮಿಸಿದ ದಾರ್ಶನಿಕರ ಆದರ್ಶಗಳನ್ನು ಹಾಗೂ ದೇಶಕ್ಕೆ ಸ್ವಾತಂತ್ರ‍್ಯ ದೊರಕುವಲ್ಲಿ ಪ್ರಮುಖ ಪಾತ್ರ ವಹಿಸಿದ ಹೋರಾಟಗಾರರ ಜೀವನ ತತ್ವಗಳನ್ನು ಜನಸಾಮಾನ್ಯರು ಅರ್ಥೈಸಿಕೊಂಡು ಪಾಲಿಸಿದಾಗ ಜಯಂತಿ ಕಾರ್ಯಕ್ರಮಗಳು ಸಾರ್ಥಕತೆ ಹೊಂದುತ್ತವೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಎ ಸುವರ್ಣ ಹೇಳಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಪಂಚಾಯತ್ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಗದ್ಗುರು ಶ್ರೀ ಮಧ್ವಾಚಾರ್ಯರ ಜಯಂತಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಧ್ವಾಚಾರ್ಯರು ಹಾಗೂ ರಾಣಿ ಚೆನ್ನಮ್ಮರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡುತ್ತಿದ್ದರು.

ಸಮಾಜದ ಸುಧಾರಣೆಗೆ, ಸಮ ಸಮಾಜ ನಿರ್ಮಾಣಕ್ಕೆ ಹಾಗೂ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿಕೊಡುವಲ್ಲಿ ಮಹನೀಯರು, ದಾರ್ಶನಿಕರು, ವೀರ ಮಹಿಳೆಯರು, ಪುರುಷರು ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರುಗಳನ್ನು ಸ್ಮರಿಸುವ ಕೆಲಸ ಪ್ರತಿಯೊಬ್ಬರೂ ಮಾಡಬೇಕು ಎಂದರು. ಭಾರತೀಯ ಆಧ್ಯಾತ್ಮಿಕ ಚಿಂತಕ ಮತ್ತು ನೈತಿಕ ಮೌಲ್ಯಗಳ ಪ್ರತಿಪಾದಕರಾದ ಮಧ್ವಾಚಾರ್ಯರ ಜಯಂತಿಯನ್ನು ಪ್ರಸ್ತುತ ಸಾಲಿನಿಂದ ಸರ್ಕಾರದ ವತಿಯಿಂದ ಆಚರಿಸುತ್ತಿರುವುದು ಸಂತಸದ ಸಂಗತಿ. ಉಡುಪಿಯ ಪಾಜಕ ಕ್ಷೇತ್ರದ ಪುಣ್ಯ ಭೂಮಿಯಲ್ಲಿ ಅವತರಿಸಿದ ಜಗದ್ಗುರು ಮಧ್ವಾಚಾರ್ಯರು ನಡೆದಾಡಿದ ಪುಣ್ಯಭೂಮಿಯಲ್ಲಿ ನಾವೆಲ್ಲರೂ ಜೀವನ ನಡೆಸುತ್ತಿರುವುದು ಉಡುಪಿಯ ಜನತೆಯ ಪಾಲಿಗೆ ಸದಾ ಹೆಮ್ಮೆಯ ವಿಷಯ ಎಂದರು.

ಮಲ್ಪೆ ಕಡಲತೀರದಿಂದ ಶ್ರೀಕೃಷ್ಣನ ಮೂರ್ತಿಯನ್ನು ತಂದು ಉಡುಪಿಯಲ್ಲಿ ಶ್ರೀಕೃಷ್ಣ ಮಠವನ್ನು ಸ್ಥಾಪಿಸಿ ಅಷ್ಟಮಠಗಳನ್ನು ಯತಿಗಳೇ ಪೂಜಿಸುವ ಪರಂಪರೆಯ ಮೂಲಕ ಉಡುಪಿಯನ್ನು ಜಗತ್ತಿಗೆ ಪರಿಚಯಿಸಿದ ಜಗದ್ಗುರುಗಳ ಜಯಂತಿ ಆಚರಣೆಯನ್ನು ಮುಂದಿನ ದಿನಗಳಲ್ಲಿ ಶ್ರೀಕೃಷ್ಣ ಮಠದ ಅಷ್ಟಮಠಗಳ ಯತಿಗಳ ಸಲಹೆ ಹಾಗೂ ಮಾರ್ಗದರ್ಶನದಲ್ಲಿ ಅತ್ಯಂತ ಶ್ರದ್ಧಾಭಕ್ತಿಯಿಂದ ವೈಭವಯುತವಾಗಿ ರಾಜ್ಯಕ್ಕೆ ಮಾದರಿಯಾಗುವ ನಿಟ್ಟಿನಲ್ಲಿ ಉಡುಪಿಯಲ್ಲಿ ಆಯೋಜಿಸುವ ಆಶಯ ವ್ಯಕ್ತಪಡಿಸಿದ ಅವರು, ತುಳು ಭಾಷೆಗೆ ವಿಶೇಷ ಮಾನ್ಯತೆ ನೀಡಿರುವ ಮಧ್ವಾಚಾರ್ಯರು, ಇಂದಿಗೂ ಅಷ್ಟಮಠದ ಯತಿಗಳು ತುಳು ಲಿಪಿಯಲ್ಲಿಯೇ ಸಹಿ ಮಾಡುವ ಮೂಲಕ ತುಳುವಿಗೆ ಗೌರವ ಸಲ್ಲಿಸುತ್ತಿದ್ದಾರೆ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ ಪ್ರಥಮ ಮಹಿಳಾ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕಿತ್ತೂರು ರಾಣಿ ಚೆನ್ನಮ್ಮರ ವೀರ, ಶೌರ್ಯ ಗುಣಗಳನ್ನು ಮಹಿಳೆಯರೂ ಸಹ ಅಳವಡಿಸಿಕೊಳ್ಳಬೇಕು ಎಂದರು. ಮಂಗಳೂರು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿ, ದ್ವೈತ ಸಿದ್ಧಾಂತದ ಪ್ರತಿಪಾದಕ ಮಧ್ವಾಚಾರ್ಯರ ತತ್ವಗಳು ಅನುಕರಣೀಯವಾಗಿವೆ. ಜಲಸಂಪನ್ಮೂಲದ ಅಭಿವೃದ್ಧಿಗೆ ಕೊಡುಗೆ ನೀಡುವ ಮೂಲಕ ಬದುಕು ಕಟ್ಟಿಕೊಡುವ ಕೆಲಸವನ್ನು ಆಗಿನ ಕಾಲದಲ್ಲಿಯೇ ಮಾಡಿದ್ದರು ಎಂದರು. ಕಿತ್ತೂರು ರಾಣಿ ಚೆನ್ನಮ್ಮನ ವೀರಗುಣಗಳನ್ನು ಪ್ರಸ್ತುತ ಸ್ತ್ರೀಯರು ಅಳವಡಿಸಿಕೊಳ್ಳಬೇಕು. ವಿಸ್ತೀರ್ಣದಲ್ಲಿ ಪುಟ್ಟ ರಾಜ್ಯವಾಗಿದ್ದ ಕಿತ್ತೂರಿನ ಮೇಲೆ ಬ್ರಿಟಿಷರು ಆಕ್ರಮಣ ಮಾಡಿದಾಗ ಎದೆಗುಂದದೆ ಹೋರಾಡಿದ ಕೀರ್ತಿ ರಾಣಿ ಚೆನ್ನಮ್ಮ ಅವರದ್ದು, ಅನ್ಯಾಯದ ವಿರುದ್ಧ ಧ್ವನಿ ಎತ್ತುವ ಚೆನ್ನಮ್ಮನ ಧೈರ್ಯ ಇಂದಿನ ಸಮಾಜದಲ್ಲಿ ಮಹಿಳೆಯರು ಅನುಸರಿಸಬೇಕು ಎಂದ ಅವರು, ದೇಶ ಹಾಗೂ ನಾಡಿನಲ್ಲಿ ಜನಿಸಿದ ಸಮಾಜ ಸುಧಾರಕರು, ದಾರ್ಶನಿಕರು, ವಚನಕಾರರು, ಹೋರಾಟಗಾರರು ತಮ್ಮ ವಿಚಾರಧಾರೆಗಳ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮೂಡಿಸುವ ಕೆಲಸ ಮಾಡಿದ್ದರು ಎಂದರು.

ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಮಾತನಾಡಿ, ಉಡುಪಿಗೆ ಕೃಷ್ಣನಗರಿ ಎಂಬ ಹಿರಿಮೆ ದೊರೆಯುವಲ್ಲಿ ಕಾರಣೀಭೂತರು ಮಧ್ವಾಚಾರ್ಯರು. ಶ್ರೀಕೃಷ್ಣನ ನಿರಂತರ ಪೂಜೆ ಹಾಗೂ ದ್ವೈತ ತತ್ವದ ಪ್ರಚಾರಕ್ಕಾಗಿ ಮಧ್ವಾಚಾರ್ಯರು ತಮ್ಮ ಎಂಟು ಜನ ಪ್ರಮುಖ ಸನ್ಯಾಸಿ ಶಿಷ್ಯರನ್ನು ನೇಮಿಸಿ, ಉಡುಪಿಯ ಅಷ್ಟ ಮಠಗಳನ್ನು ಸ್ಥಾಪಿಸಿದರು ಎಂದ ಅವರು, ಕಿತ್ತೂರು ರಾಣಿ ಚೆನ್ನಮ್ಮನ ವೀರಗುಣಗಳನ್ನು ಸ್ತ್ರೀಯರು ಅಳವಡಿಸಿಕೊಳ್ಳಬೇಕು ಎಂದರು. ಉಡುಪಿಯ ಶ್ರೀ ವಾದಿರಾಜ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಬಿ. ಗೋಪಾಲ್ ಆಚಾರ್ ಜಗದ್ಗುರು ಶ್ರೀ ಮರ್ಧವಾಚಾರ್ಯರ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ, ಭಾರತೀಯ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಸೇವೆ ಸಲ್ಲಿಸಿದ ಮಧ್ವಾಚಾರ್ಯರ ಜಯಂತಿಯನ್ನು ಇಂದು ನಾವುಗಳು ಸರಕಾರದ ಆದೇಶದಂತೆ ಆಚರಿಸುತ್ತಿರುವುದು ಸಂತೋಷದ ವಿಷಯ. ಮಧ್ವಾಚಾರ್ಯರು ಹುಟ್ಟಿ ಬೆಳೆದು ಓಡಾಡಿದ ಈ ಮಣ್ಣಿನಲ್ಲಿ ಇಂದು ನಾವುಗಳು ಜೀವಿಸುತ್ತಿದ್ದೇವೆ. ಅವರು ಓಡಾಡಿದ ಈ ಭೂಮಿಯನ್ನು ಸ್ಪರ್ಶ ಮಾಡಿದರೆ ಸಾಕು ಅದು ನಮ್ಮನ್ನು ಪಾಪ ಮುಕ್ತಗೊಳಿಸುತ್ತದೆ. ತುಳು ನಾಡಿಗೆ ತುಳು ಸಂಸ್ಕೃತಿಗೆ ಬಹುದೊಡ್ಡ ಕೊಡುಗೆ ನೀಡಿದವರು ಮಧ್ವಾಚಾರ್ಯರು. ಮಧ್ವರ ಅನೇಕ ತತ್ವಗಳು ಇಂದಿಗೂ ಸಾರ್ವಕಾಲಿವಾದುದು ಎಂದ ಅವರು, ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಪ್ರತಿಯೊಬ್ಬರೂ ಮನನ ಮಾಡಿಕೊಳ್ಳಬೇಕು. ಸಮಾಜಕ್ಕೆ ಸೇವೆ ಸಲ್ಲಿಸುವ ಮನಸ್ಥಿತಿ ನಮ್ಮಗಳದ್ದಾಗಲಿ ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಕಿತ್ತೂರು ರಾಣಿ ಚೆನ್ನಮ್ಮರ ಕುರಿತು ಉಪನ್ಯಾಸ ನೀಡಿ ಮಾತನಾಡುತ್ತಾ, ಕಿತ್ತೂರು ರಾಣಿ ಚೆನ್ನಮ್ಮ ಅವರು ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಥಮ ಧೀರ ಸ್ವಾತಂತ್ರ‍್ಯ ಹೋರಾಟಗಾರ್ತಿ ಮತ್ತು ಕರ್ನಾಟಕದ ಕಿತ್ತೂರು ಸಂಸ್ಥಾನದ ರಾಣಿ. ಬಾಲ್ಯದಲ್ಲಿಯೇ ಬಿಲ್ಲುಗಾರಿಕೆ, ಕತ್ತಿವರಸೆ, ಕುದುರೆಸವಾರಿ ಸೇರಿದಂತೆ ಮೊದಲಾದ ವಿದ್ಯೆಗಳಲ್ಲಿ ಪರಿಣಿತಿ ಹೊಂದಿದ್ದರು. ಚೆನ್ನಮ್ಮನ ಸ್ವಾಭಿಮಾನ ಮತ್ತು ಹೋರಾಟದ ಮನೋಭಾವವೇ ಅವರನ್ನು ಇತಿಹಾಸದಲ್ಲಿ ಇಂದಿಗೂ ಅಜರಾಮರರನ್ನಾಗಿಸಿವೆ ಎಂದರು. ಸ್ವಾತಂತ್ರ್ಯ ಸಂಗ್ರಾಮದ ಪೂರ್ವದಲ್ಲಿ ತನ್ನ ಕುಟುಂಬವನ್ನು ಕಳೆದುಕೊಂಡ ಸಂದರ್ಭದಲ್ಲಿಯೂ ಎದೆಗುಂದದೇ ರಾಜ್ಯದ ರಕ್ಷಣೆಗೆ ಪಣತೊಟ್ಟು ಬ್ರಿಟಿಷರ ವಿರುದ್ಧ ಹೋರಾಡಿ, ಬಂಧಿಸಲ್ಪಟ್ಟು ಬೈಲಹೊಂಗಲದ ಸೆರೆಮನೆಯಲಿದ್ದರು. ಸ್ಯಾತಂತ್ರ್ಯಕ್ಕಾಗಿ ಹೋರಾಡಿದ ಆಕೆಯ ಧೈರ್ಯ ಇಂದಿಗೂ ಅವಿಸ್ಮರಣೀಯ ಎಂದ ಅವರು, ನಾಡಿನ ಮಹಿಳೆಯರಿಗೆ ಮತ್ತು ಕನ್ನಡಿಗರಿಗೆ ಧೈರ್ಯ ಹಾಗೂ ಸ್ವಾಭಿಮಾನದ ಸಂಕೇತವಾಗಿ ಚೆನ್ನಮ್ಮ ನಿಂತಿದ್ದಾರೆ ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಎಸ್.ಎಸ್ ಕಾದ್ರೋಳ್ಳಿ, ತುಳು ಶಿವಳ್ಳಿ ಮಾಧ್ವ ಮಹಾಮಂಡಲದ (ರಿ) ದ ಅಧ್ಯಕ್ಷ ಜಯರಾಮ ಆಚಾರ್ಯ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ನಿರಂಜನ ಚೋಳಯ್ಯ, ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಉಪನ್ಯಾಸಕ ರಾಮಾಂಜಿ ನಿರೂಪಿಸಿ ವಂದಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ವಿವಿಧ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ

ಪೆರ್ಡೂರು, ಅ.23: ಕಾಪು ವಿಧಾನಸಭಾ ಕ್ಷೇತ್ರದ ಪೆರ್ಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ...

ಅ.24: ಉಡುಪಿಯಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ

ಉಡುಪಿ, ಅ.23: ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಯ...

ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ

ನವದೆಹಲಿ, ಅ.23: ಬಂಗಾಲ ಕೊಲ್ಲಿಯಲ್ಲಿ ವಾಯುಭಾರ ಕುಸಿತವೊಂದು ಉಂಟಾಗಿದ್ದು, ಮುಂದಿನ ದಿನಗಳಲ್ಲಿ...
error: Content is protected !!