ಕುಂದಾಪುರ, ಅ.21: ಆಕಾರಗಳೊಂದಿಗೆ ಅಧ್ಯಯನ ಮಾಡಿದರೆ ಬಾರ್ಕೂರಿನ ಕುರಿತ ಐತಿಹಾಸಿಕವಾದ ಹೊಸ ವಿಷಯಗಳನ್ನು ತಿಳಿಯಬಹುದು. ಬಾರ್ಕೂರು ವ್ಯಾಪಾರಿ ಕೇಂದ್ರವಾಗಿದ್ದು ದೀರ್ಘಕಾಲ ಅಳುಪರು ಆಡಳಿತ ನಡೆಸಿದ ಈ ಪ್ರದೇಶದಲ್ಲಿ ಶಾಸನಗಳು, ಕೇರಿಗಳು, ದೇವಸ್ಥಾನಗಳು, ಬಸದಿಗಳಿವೆ . ಜನರ ಒಳಿತಿಗಾಗಿ ವಿಜಯನಗರ ಸಾಮ್ರಾಜ್ಯದ ಅರಸರ ರಾಜ್ಯಪಾಲರು ಕಾರ್ಯನಿರ್ವಹಿಸಿದ ದಾಖಲೆಗಳು ಸಿಗುವಂತಹ ಬಾರ್ಕೂರಿನಲ್ಲಿ ಅಳುಪರು ವಿಜಯನಗರ ಸಾಮ್ರಾಜ್ಯದವರು ಹಾಗೂ ಹೊಯ್ಸಳರು ಆಡಳಿತ ನಡೆಸಿದರು ಎಂಬ ವಿವರ ಶಾಸನಗಳಲ್ಲಿ ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ಐತಿಹಾಸಿಕವಾಗಿ ಈ ನಾಡು ಸಮೃದ್ಧವಾಗಿದೆ ಎನ್ನುವುದನ್ನು ಇದರ ಕುರಿತಾದ ಶಾಸನಗಳು ತಿಳಿಸಿಕೊಡುತ್ತವೆ ಎಂದು ಉಡುಪಿಯ ಡಾ. ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತ ಅಧಿಕಾರಿ, ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಬಿ. ಜಗದೀಶ್ ಶೆಟ್ಟಿ ಹೇಳಿದರು. ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ಮತ್ತು 2ರ ವಿಶೇಷ ಶಿಬಿರದ ಸ್ವಯಂಸೇವಕರು ಬಾರ್ಕೂರಿನ ಐತಿಹಾಸಿಕ ಮಹತ್ವ ತಿಳಿಯಲು ಅಧ್ಯಯನ ಭೇಟಿ ನೀಡಿದ ಸಂದರ್ಭದಲ್ಲಿ ಮಾತನಾಡಿದರು.
ಕಾಲೇಜಿನ ಆಡಳಿತ ನಿಕಾಯಕ ರಕ್ಷಿತ್ ರಾವ್ ಗುಜ್ಜಾಡಿ ಕಾರ್ಯಕ್ರಮ ಸಂಯೋಜಿಸಿದರು. ಎನ್ಎಸ್ಎಸ್ ಶಿಬಿರಾಧಿಕಾರಿಗಳಾದ ರಾಜೇಶ್ ಶೆಟ್ಟಿ ವಕ್ವಾಡಿ, ಪೂಜಾ ಕುಂದರ್, ಪ್ರಾಧ್ಯಾಪಕರಾದ ದೀಪಿಕಾ ಜಿ., ಸ್ವಾತಿ ಜಿ. ರಾವ್, ರೇಷ್ಮಾ ಶೆಟ್ಟಿ, ಸಚಿನ್, ಮಂಜುನಾಥ್ ಕುಲಾಲ್ ಹಾಗೂ ಎನ್.ಎಸ್.ಎಸ್ ಸ್ವಯಂಸೇವಕರು ಉಪಸ್ಥಿತರಿದ್ದರು.




By
ForthFocus™