ಉಡುಪಿ, ಅ.8: ವನ್ಯಜೀವಿಗಳ ಸಂರಕ್ಷಣೆ ಮತ್ತು ಪರಿಸರದ ಸಮತೋಲನವನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರಸಕ್ತ ಸಾಲಿನಲ್ಲಿ Connecting Habitats, Thriving Wildlife ಎಂಬ ರಾಷ್ಟ್ರೀಯ ಘೋಷವಾಕ್ಯದೊಂದಿಗೆ ಹಾಗೂ ಕರ್ನಾಟಕ ರಾಜ್ಯ ಮಟ್ಟದ ಅಭಿಯಾನವು Wild Karnataka; people, Landscapes, Wildlife Together ಎಂಬ ಸಂದೇಶದೊಂದಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಅದರಂತೆ ಪಶ್ಚಿಮ ಘಟ್ಟಗಳ ಅತಿಸೂಕ್ಷ್ಮ ಹಾಗೂ ಅತ್ಯಂತ ಸಮೃದ್ಧ ಜೀವವೈವಿಧ್ಯದ ಆಶ್ರಯತಾಣವಾದ ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ 72 ನೇ “ವನ್ಯಜೀವಿ ಸಪ್ತಾಹ”ವನ್ನು ಅಕ್ಟೋಬರ್ 2 ರಿಂದ 8 ರವರೆಗೆ ಆಚರಿಸಲಾಗಿರುತ್ತದೆ. ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ವತಿಯಿಂದ ಅ.2 ರಂದು ವನ್ಯಜೀವಿ ಸಪ್ತಾಹಕ್ಕೆ ಸಾಂಕೇತಿಕ ಚಾಲನೆ ನೀಡಲಾಗಿದ್ದು, ವನ್ಯಜೀವಿ ಸಪ್ತಾಹದ ಅಂಗವಾಗಿ ಅ. 3 ರಂದು ವಿಭಾಗ ಮಟ್ಟದಲ್ಲಿ ಜಾಗೃತಿ ಜಾಥಾ, 4 ರಂದು ವಲಯ ಮಟ್ಟದಲ್ಲಿ ಹಕ್ಕಿ ಮತ್ತು ಚಿಟ್ಟೆಗಳ ವೀಕ್ಷಣೆ, 5 ರಂದು ವಲಯ ಮಟ್ಟದಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ವಿಭಾಗ ಮಟ್ಟದ ಸ್ಪರ್ಧೆಗಳು, 6 ರಂದು ವಲಯ ಮಟ್ಟದಲ್ಲಿ ಸ್ವಚ್ಛತಾ ಕಾರ್ಯಕ್ರಮ, 7 ರಂದು ವಲಯ ಮಟ್ಟದಲ್ಲಿ ಚಾರಣ (ಟ್ರಕ್ಕಿಂಗ್) ಕಾರ್ಯಕ್ರಮ ಹಾಗೂ ಅ. 8 ರಂದು ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭ ನಡೆಯಿತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ, ಸೋಮೇಶ್ವರ ಹಾಗೂ ಮೂಕಾಂಬಿಕಾ ಅಭಯಾರಣ್ಯಗಳನ್ನೊಳಗೊಂಡ ಈ ರಕ್ಷಿತ ಅರಣ್ಯ ಪ್ರದೇಶವು ಅನೇಕ ನದಿಗಳ ಉಗಮಸ್ಥಾನವಾಗಿದೆ. ಇಲ್ಲಿನ ಶೋಲಾ ಅರಣ್ಯಗಳು ಮತ್ತು ಹುಲ್ಲುಗಾವಲುಗಳು ಅಸಂಖ್ಯಾತ ಅಪರೂಪದ ಪ್ರಾಣಿ-ಪಕ್ಷಿಗಳಿಗೆ ಸುರಕ್ಷಿತ ಆವಾಸಸ್ಥಾನ ಕಲ್ಪಿಸಿವೆ. ಈ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಪ್ರಸಕ್ತ ಸಾಲಿನಲ್ಲಿ ವನ್ಯಜೀವಿ ಸಪ್ತಾಹವನ್ನು ಆಚರಿಸಲಾಗಿರುತ್ತದೆ. ಕಾರ್ಯಕ್ರಮಗಳಲ್ಲಿ ಅರಣ್ಯ ಇಲಾಖಾ ಕಛೇರಿಗಳು, ಸಿಬ್ಬಂದಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು, ಗ್ರಾಮ ಅರಣ್ಯ ಸಮಿತಿಗಳು, ಸಂಘ ಸಂಸ್ಥೆಗಳು, ಅರಣ್ಯದ ಅಂಚಿನ ಗ್ರಾಮಸ್ಥರು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿರುತ್ತಾರೆ ಎಂದು ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.
ಕುದುರೆಮುಖ ವನ್ಯಜೀವಿ ವಿಭಾಗ: ವನ್ಯಜೀವಿ ಸಪ್ತಾಹ ಆಚರಣೆ
ಕುದುರೆಮುಖ ವನ್ಯಜೀವಿ ವಿಭಾಗ: ವನ್ಯಜೀವಿ ಸಪ್ತಾಹ ಆಚರಣೆ
Date:




By
ForthFocus™