Friday, September 25, 2026
Friday, September 25, 2026

ಜನಸಾಮಾನ್ಯರ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

ಜನಸಾಮಾನ್ಯರ ವಾಹನಗಳ ಸುರಕ್ಷಿತ ಸಂಚಾರಕ್ಕೆ ಅಗತ್ಯ ಕ್ರಮ ಕೈಗೊಳ್ಳಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ

Date:

ಉಡುಪಿ, ಸೆ.25: ಜಿಲ್ಲಾ ವ್ಯಾಪ್ತಿಯ ಸಾರ್ವಜನಿಕ ಎಲ್ಲಾ ರಸ್ತೆಗಳಲ್ಲಿ ಜನಸಾಮಾನ್ಯರ ವಾಹನಗಳು ಸುರಕ್ಷಿತವಾಗಿ ಸಂಚರಿಸಲು ಅಗತ್ಯವಿರುವ ಎಲ್ಲಾ ರೀತಿಯ ರಸ್ತೆ ಅಭಿವೃದ್ಧಿ ಹಾಗೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಅಪಘಾತ ಪ್ರಕರಣಗಳು ಆಗದಂತೆ ಕ್ರಮ ವಹಿಸಬೇಕೆಂದು ಇಲಾಖಾ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸಾರ್ವಜನಿಕ ವಾಹನಗಳು ಸಂಚರಿಸುವಾಗ ಪ್ರಾಧಿಕಾರದ ವತಿಯಿಂದ ನಗರ ಹಾಗೂ ನಗರದ ಹೊರ ವಲಯದಲ್ಲಿ ವಾಹನಗಳ ವೇಗದ ಮಿತಿಯನ್ನು ನಿಗದಿಪಡಿಸಿದ್ದು, ಇದನ್ನು ಎಲ್ಲರೂ ಪಾಲಿಸಬೇಕು. ರಸ್ತೆ ಸುರಕ್ಷತಾ ನಿಯಮಗಳನ್ನು ಸಹ ಚಾಚೂ ತಪ್ಪದೇ ಪಾಲಿಸಿದ್ದಲ್ಲಿ ಅಪಘಾತ ಪ್ರಕರಣಗಳ ಪ್ರಮಾಣ ಹೇರಳವಾಗಿ ಕಡಿಮೆಯಾಗಲು ಸಾಧ್ಯ. ಇದಕ್ಕೆ ಒತ್ತು ನೀಡಬೇಕು ಎಂದರು. ಜಿಲ್ಲೆಯಲ್ಲಿ 3785 ಸಂಚರಿಸುವ 6 ಚಕ್ರ ಮತ್ತು ಮೇಲ್ಪಟ್ಟ ಎಲ್ಲಾ ಸರಕು ಸಾಗಾಣಿಕೆ ವಾಹನಗಳಿದ್ದು, ಅವುಗಳಲ್ಲಿ 1952 ವಾಹನಗಳಿಗೆ ವೇಗ ನಿಯಂತ್ರಕಗಳನ್ನು ಅಳವಡಿಸಲಾಗಿದೆ. ಕಳೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಎಲ್ಲಾ ವಾಹನಗಳಿಗೂ ವೇಗ ನಿಯಂತ್ರಕ ಅಳವಡಿಸಲು ಕ್ರಮ ವಹಿಸಲು ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧಿಕಾರಿಗಳಿಗೆ ತಿಳಿಸಲಾಗಿತ್ತು, ಆದರೆ 1800 ಕ್ಕೂ ಹೆಚ್ಚು ಅಳವಡಿಕಿಗೆ ಬಾಕಿ ಇದೆ. ಮುಂದಿನ ಒಂದು ತಿಂಗಳ ಒಳಗಾಗಿ ಪ್ರತಿಯೊಂದು ವಾಹನಕ್ಕೂ ಸೀಡ್ ಗವರ್ನರ್ ಅಳವಡಿಸಲು ಕ್ರಮ ವಹಿಸಬೇಕೆಂದು ಸೂಚಿಸಿದರು.

ಸಿದ್ಧ ಕಾಂಕ್ರೀಟ್ ಮಿಕ್ಸಿಂಗ್ ವಾಹನಗಳು ಓವರ್ ಲೋಡ್‌ನಿಂದಾಗಿ ರಸ್ತೆ ಮೇಲೆ ಕಾಂಕ್ರೀಟ್ ಎಲ್ಲೆಡೆ ಬಿದ್ದು ರಸ್ತೆ ಹಾಳಾಗುತ್ತಿದೆ ಹಾಗೂ ಮರಳು ಸಾಗಾಣಿಕೆ ವಾಹನಗಳ ಓವರ್ ಲೋಡ್‌ನಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದರ ಜೊತೆಗೆ ಅಪಘಾತಗಳು ಆಗುತ್ತಿರುವ ಹಿನ್ನೆಲೆ, ಕಳೆದ ಮೂರು ತಿಂಗಳಲ್ಲಿ 1569 ವಾಹನಗಳ ತಪಾಸಣೆ ನಡೆಸಿ, 15 ಪ್ರಕರಣಗಳನ್ನು ದಾಖಲಿಸಿ, 3.33 ಲಕ್ಷ ರೂ. ದಂಡ ವಸೂಲಾತಿಯಾಗಿದೆ. ಈ ಬಗ್ಗೆ ಮುಂದಿನ ದಿವಸಗಳಲ್ಲಿ ತೀವ್ರ ತಪಾಸಣೆ ನಡೆಸುವಂತೆ ಸೂಚಿಸಿದರು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಅನಧೀಕೃತವಾಗಿರುವ ಗೂಡಂಗಡಿ, ಫಾಸ್ಟ್ ಫುಡ್ ಸೆಂಟರ್, ತಳ್ಳುಗಾಡಿ ಹಾಗೂ ಗೂಡಂಗಡಿಗಳನ್ನು ಈಗಾಗಲೇ ನಗರಸಭಾ ವ್ಯಾಪ್ತಿಯಲ್ಲಿ ಗುರುತಿಸಲಾದ 6 ವೆಂಡಿಂಗ್ ಝೋನ್‌ಗಳಿಗೆ ಸ್ಥಳಾಂತರಿಸಬೇಕು ಎಂದ ಅವರು, ಸದ್ರಿ ಝೋನ್‌ಗಳಲ್ಲಿ ಶೀಘ್ರವಾಗಿ ಶೆಲ್ಟರ್‌ಗಳನ್ನು ನಿರ್ಮಿಸಲು ಕ್ರಮವಹಿಸುವಂತೆ ನಗರಸಭಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಪ್ರಮುಖ 5 ಜಂಕ್ಷನ್‌ಗಳಿದ್ದು, ಅವುಗಳಲ್ಲಿ ಕಲ್ಸಂಕ ಮತ್ತು ಮಣಿಪಾಲ ಸಿಂಡಿಕೇಟ್ ಸರ್ಕಲ್ ಜಂಕ್ಷನ್‌ನಲ್ಲಿ ಈಗಾಗಲೇ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದ್ದು, ಅದರಂತೆ ಬಾಕಿ ಉಳಿದವುಗಳಿಗೆ ಹಾಗೂ ಜಿಲ್ಲೆಯ ಪಡುಬಿದ್ರೆ, ಕೋಟಾ, ಬ್ರಹ್ಮಾವರ ಹಾಗೂ ಕುಂದಾಪುರದ ಪ್ರಮುಖ ಜಂಕ್ಷನ್‌ಗಳಲ್ಲಿ ಸಿಗ್ನಲ್ ಲೈಟ್ ಅಳವಡಿಸುವಂತೆ ಸೂಚನೆ ನೀಡಿದರು. ಜಿಲ್ಲೆಯಲ್ಲಿರುವ ಶಾಲಾ-ಕಾಲೇಜುಗಳ ಪರಿಮಿತಿಯ ರಸ್ತೆಗಳಲ್ಲಿ ಸೂಚನಾ ಫಲಕಗಳು, ವೇಗತಡೆ ಉಬ್ಬುಗಳು, ಬ್ಯಾರಿಕೇಡ್, ಝೀಬ್ರಾ ಪಟ್ಟಿ ಸೇರಿದಂತೆ ಮತ್ತಿತರ ಅಗತ್ಯ ಸುರಕ್ಷತಾ ಕ್ರಮಗಳನ್ನು ಆದ್ಯತೆಯ ಮೇಲೆ ಕೈಗೊಳ್ಳಬೇಕು ಎಂದ ಅವರು, ರಸ್ತೆ ಅಪಘಾತವಾಗುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಸೂಚನಾ ಫಲಕ, ಹಂಪ್ಸ್, ಬೀದಿ ದೀಪಗಳನ್ನು ಅಳವಡಿಸಲು ಮುಂದಾಗಬೇಕು ಎಂದರು.

ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಖಾಸಗಿ ಹಾಗೂ ಸರ್ಕಾರಿ ಬಸ್‌ಗಳಲ್ಲಿ ಕಡ್ಡಾಯವಾಗಿ ಬಾಗಿಲುಗಳನ್ನು ಅಳವಡಿಸಿರುವ ಕುರಿತು ಪರಿಶೀಲಿಸುವಂತೆ ಈ ಹಿಂದಿನ ಸಭೆಯಲ್ಲಿ ಸೂಚಿಸಲಾಗಿದ್ದರೂ ಸಹ ಇದು ಪೂರ್ಣ ಪ್ರಮಾಣದಲ್ಲಿ ಆಗಿಲ್ಲ. ಎರಡು ತಿಂಗಳ ಒಳಗಾಗಿ ಜಿಲ್ಲೆಯಲ್ಲಿ ಸಂಚರಿಸುವ ಎಲ್ಲಾ ಬಸ್‌ಗಳಿಗೆ ಡೋರ್ ಅಳವಡಿಸಿರುವ ಕುರಿತು ಮಾಹಿತಿ ನೀಡುವಂತೆ ಆರ್.ಟಿ.ಓ ಅಧಿಕಾರಿಗಳಿಗೆ ಸೂಚಿಸಿದರು. ಸಾರ್ವಜನಿಕರು ಬಸ್‌ಗಳಲ್ಲಿ ಸಂಚರಿಸುವಾಗ ನೀರಿನ ಬಾಟೆಲ್ ಸೇರಿದಂತೆ ಮತ್ತಿತರ ವಸ್ತುಗಳನ್ನು ರಸ್ತೆಗೆ ಎಸೆಯಲ್ಪಡುತ್ತಾರೆ. ಇದರಿಂದ ರಸ್ತೆಯ ಮೇಲೆ ಸಂಚರಿಸುವ ಇತರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವುದರ ಜೊತೆಗೆ ಅನೈರ್ಮಲ್ಯ ಉಂಟಾಗುತ್ತದೆ. ಆದ್ದರಿಂದ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಬಸ್ಸಿನಲ್ಲಿಯೇ ಕಸದ ಬುಟ್ಟಿಗಳನ್ನು ಅಳವಡಿಸುವಂತೆ ಈ ಹಿಂದಿನ ಸಭೆಯಲ್ಲಿ ಸೂಚನೆ ನೀಡಲಾಗಿದ್ದರೂ ಸಹ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸುತ್ತಿಲ್ಲ. ಆದಷ್ಟು ಶೀಘ್ರವಾಗಿ ಎಲ್ಲಾ ಬಸ್‌ಗಳಲ್ಲಿಯೂ ಕಸದ ಬುಟ್ಟಿ ಇರಿಸಿ, ವರದಿ ನೀಡುವಂತೆ ಕೆ.ಎಸ್.ಆರ್.ಟಿ.ಸಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಸೂಚಿಸಿದರು.

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಕಾಮಗಾರಿಗೆ ಅನುಕೂಲವಾಗುವ ಉದ್ದೇಶದಿಂದ ಕೆಲವು ರಸ್ತೆ ವಿಭಜಕಗಳನ್ನು ಬಿಟ್ಟಿದ್ದು, ಕಾಮಗಾರಿ ಪೂರ್ಣಗೊಂಡರೂ ಅವುಗಳು ಒಪನ್ ಇವೆ. ಅವುಗಳನ್ನು ಬಂದ್ ಮಾಡಬೇಕು ಎಂದ ಅವರು, ರಸ್ತೆ ವಿಭಜಕಗಳು ಬೇಕೆಂದು ಜನರಿಂದ ಮನವಿಗಳು ಬಂದ ಸಂದರ್ಭದಲ್ಲಿ ಪೊಲೀಸ್ ಹಾಗೂ ಸಂಬಂಧಪಟ್ಟ ಅಭಿಯಂತರರುಗಳು ಜಂಟಿ ಸ್ಥಳ ಪರಿಶೀಲನೆ ಮಾಡಿ, ಅವಶ್ಯವಿದ್ದಲ್ಲಿ ವಿಭಜಕಗಳನ್ನು ಮಾಡಿಕೊಡಬೇಕು ಎಂದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ಪೌರಾಯುಕ್ತ ಮಹಾಂತೇಶ ಹಂಗರಗಿ, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಕಿರಣ್ ಎಸ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ಲಾ ಮೊಹಮ್ಮದ್ ಅಜ್ಮಿ, ಅಭಿಯಂತರರುಗಳು, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ರಥಬೀದಿ ಕಾಲೇಜು: ಕಾನೂನು ಅರಿವು ಕಾರ್ಯಕ್ರಮ

ಮಂಗಳೂರು, ಸೆ.25: ಡಾ. ಪಿ ದಯಾನಂದ ಪೈ ಪಿ ಸತೀಶ ಪೈ...

ಆಯುರ್ವೇದ ಜೀವನದ ಪದ್ದತಿಯಾದಾಗ ಬದುಕು ಸುಂದರ: ಎಂ.ಎ. ಗಫೂರ್

ಉಡುಪಿ, ಸೆ.25: ಆಯುರ್ವೇದ ಕೇವಲ ಒಂದು ವೈದ್ಯಕೀಯ ಪದ್ಧತಿಯಲ್ಲ, ಅದು ಜೀವನ...

ಕೃತಕ ಬುದ್ಧಿಮತ್ತೆ (ಎಐ), ಬಾಹ್ಯಾಕಾಶ, ಇಂಧನ ಮತ್ತು ಸಂಸ್ಕೃತಿ ಕುರಿತು ಮಹತ್ವದ ಚರ್ಚೆ ನಡೆಸಿದ ಭಾರತ, ಯುಎಇ ಮತ್ತು ಫ್ರಾನ್ಸ್‌

ಯು.ಬಿ.ಎನ್.ಡಿ., ಸೆ.24: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ 81ನೇ ಅಧಿವೇಶನದ...
error: Content is protected !!