ಉಡುಪಿ, ಆ.26: ಶ್ರೀ ಕೃಷ್ಣ ಮಠ ಪರ್ಯಾಯ ಶ್ರೀ ಶೀರೂರು ಮಠ ಉಡುಪಿ ಆಶ್ರಯದಲ್ಲಿ ‘ಉಡುಪಿಗೆ ಬನ್ನಿ’ ನೇತೃತ್ವದಲ್ಲಿ ಎನ್.ಎನ್. ಇನ್ಫ್ರಾಸ್ಟ್ರಕ್ಚರ್ ಡೆವಲಪರ್ಸ್, ಚಿತ್ರಕೂಟ ಆಯುರ್ವೇದ, ಅನಂತ ವೈದಿಕ ಕೇಂದ್ರ ಉಡುಪಿ ಸಹಕಾರದೊಂದಿಗೆ ವಿಟ್ಲಪಿಂಡಿ ಪ್ರಯುಕ್ತ ‘ಕೃಷ್ಣ ರಂಗ’ ರಾಜ್ಯಮಟ್ಟದ ರೀಲ್ಸ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಈ ಸ್ಪರ್ಧೆಯ ಪೋಸ್ಟರ್ ಅನ್ನು ಪರ್ಯಾಯ ಶ್ರೀ ಶೀರೂರು ಮಠಾಧೀಶರಾದ ಶ್ರೀ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಬುಧವಾರ ಬಿಡುಗಡೆಗೊಳಿಸಿ ಸ್ಪರ್ಧೆಯು ಯಶಸ್ವಿಯಾಗಿ ನಡೆಯಲಿ ಎಂದು ಅನುಗ್ರಹ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ‘ಉಡುಪಿಗೆ ಬನ್ನಿ’ ನಿರ್ವಾಹಕರಾದ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕು ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು, ಹ್ಯೂಮನ್ ರೈಟ್ಸ್ ಫೆಡರೇಶನ್ ಆಫ್ ಇಂಡಿಯಾ ಉಡುಪಿ ವಿಭಾಗೀಯ ಅಧ್ಯಕ್ಷರಾದ ಉದಯ ನಾಯ್ಕ್ ಮುಂತಾದವರು ಉಪಸ್ಥಿತರಿದ್ದರು.
ಸ್ಪರ್ಧೆಯ ವಿವರ: ಸ್ಪರ್ಧಿಗಳು ಸೆಪ್ಟೆಂಬರ್ 5 ರಂದು ಉಡುಪಿ ಶ್ರೀ ಕೃಷ್ಣ ಮಠದಲ್ಲಿ ನಡೆಯುವ ವಿಟ್ಲಪಿಂಡಿಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಆಯ್ದ ಅಂಶಗಳನ್ನು ರೀಲ್ಸ್ ನಲ್ಲಿ ಪ್ರಸ್ತುತಪಡಿಸಬೇಕು. ರೀಲ್ಸ್ ಅನ್ನು ಇನ್ಸ್ಟಾಗ್ರಾಮ್ ನಲ್ಲಿ ಪ್ರಕಟಿಸಿ ‘ಉಡುಪಿಗೆ ಬನ್ನಿ’ ಕೊಲೇಬೊರೇಟ್ ಮಾಡಬೇಕು. ರೀಲ್ಸ್ ಕಳುಹಿಸಲು ಸೆಪ್ಟೆಂಬರ್ 15 ಕೊನೆಯ ದಿನವಾಗಿದ್ದು ಫಲಿತಾಂಶವನ್ನು ಸೆಪ್ಟೆಂಬರ್ 19 ಕ್ಕೆ ಪ್ರಕಟಿಸಲಾಗುವುದು. ಪ್ರಥಮ ಬಹುಮಾನ ರೂ. ಹತ್ತು ಸಾವಿರ ಮತ್ತು ಪ್ರಶಸ್ತಿ ಪತ್ರ, ದ್ವಿತೀಯ ಬಹುಮಾನ ರೂ. ಐದು ಸಾವಿರ ಮತ್ತು ಪ್ರಶಸ್ತಿ ಪತ್ರ ಮತ್ತು 5 ಮಂದಿಗೆ ರೂ. ಒಂದು ಸಾವಿರ ಸಮಾಧಾನಕರ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು. ಸ್ಪರ್ಧಿಸಿದ ಪ್ರತಿಯೊಬ್ಬರಿಗೂ ಪಾರ್ಟಿಸಿಪೇಶನ್ ಸರ್ಟಿಫಿಕೇಟ್ ನೀಡಲಾಗುವುದು ಮತ್ತು ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ‘ಉಡುಪಿಗೆ ಬನ್ನಿ’ ಇನ್ಸ್ಟಗ್ರಾಮ್ ಪೇಜ್ ನಲ್ಲಿ ನೋಡಬಹುದು ಎಂದು ಆಯೋಜಕರ ಪ್ರಕಟನೆ ತಿಳಿಸಿದೆ.





By
ForthFocus™