ಕುಂದಾಪುರ, ಜು.5: ವಿದ್ಯಾರ್ಥಿಗಳು ಯಶಸ್ಸಿನ ಪಥದಲ್ಲಿ ಮುನ್ನಡೆಯಲು ಪೋಷಕರು, ಸಕಾರಾತ್ಮಕ ಮನೋಭಾವ ಮತ್ತು ಪ್ರತಿಭೆ ಎಂಬ ಮೂರು ಅಂಶಗಳು ಅತ್ಯಂತ ಮಹತ್ವ ಪಡೆಯುತ್ತವೆ. ದೇಶದ ಪ್ರಗತಿಯಲ್ಲಿ ಯುವಜನತೆಯ ಪಾತ್ರ ಮಹತ್ವಪೂರ್ಣ. ಮಾನವೀಯ ಮೌಲ್ಯಗಳೊಂದಿಗೆ ಹೊಸ ಆಲೋಚನೆಗಳು, ನಿರ್ದಿಷ್ಟ ಗುರಿ ಹಾಗೂ ನವೀನ ಪರಿಹಾರಗಳನ್ನು ರೂಪಿಸುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಡಾ. ಎ. ಎಂ. ಖಾನ್ ಅವರು ಪದವೀಧರರಿಗೆ ಹೇಳಿದರು.
ಅವರು ಇಲ್ಲಿನ ಡಾ. ಬಿ. ಬಿ. ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ವತಿಯಿಂದ ಆಯೋಜಿಸಲಾದ ‘ಗ್ರಾಜುಯೇಷನ್ ಡೇ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕುಂದಾಪುರ ಎಜುಕೇಶನ್ ಸೊಸೈಟಿಯ ಅಧ್ಯಕ್ಷ ಶ್ರೀ ಬಿ. ಎಂ. ಸುಕುಮಾರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಸೀತಾರಾಮ ನಕ್ಕತ್ತಾಯ ಶುಭ ಹಾರೈಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಡಾ. ಕೆ. ಉಮೇಶ್ ಶೆಟ್ಟಿ ಆಶಯ ನುಡಿಗಳನ್ನಾಡಿದರು. ಡೀನ್ ಅಕಾಡೆಮಿಕ್ ಗಿರಿರಾಜ್ ಭಟ್ ನೆoಪು ಉಪಸ್ಥಿತರಿದ್ದರು. ಐಕ್ಯೂಎಸಿ ಸಂಯೋಜಕಿ ದೀಪಿಕಾ ಜಿ. ಸ್ವಾಗತಿಸಿ, ಸಹ ಸಂಯೋಜಕ ರಕ್ಷಿತ್ ರಾವ್ ಗುಜ್ಜಾಡಿ ಅತಿಥಿಗಳನ್ನು ಪರಿಚಯಿಸಿದರು. ವಾಣಿಜ್ಯ ವಿಭಾಗದ ಮುಖ್ಯಸ್ಥೆ ವೀಣಾ ಭಟ್, ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥೆ ನಂದಾ ರೈ ಹಾಗೂ ಗಣಕ ವಿಜ್ಞಾನ ವಿಭಾಗದ ಮುಖ್ಯಸ್ಥ ಮಹೇಶ್ ಕುಮಾರ್ ಪದವಿ ಪ್ರಮಾಣ ಪತ್ರ ಪಟ್ಟಿ ವಾಚಿಸಿದರು.
ವಿದ್ಯಾರ್ಥಿಗಳಾದ ಶರತ್, ಶ್ರೀರಕ್ಷಾ ಕೆ.ಎ. ಹಾಗೂ ಶಿಫಾ ಶೇಖ್ ಅನಿಸಿಕೆ ಹಂಚಿಕೊಂಡರು. ಉಪ-ಪ್ರಾಂಶುಪಾಲ ಡಾ. ಚೇತನ್ ಶೆಟ್ಟಿ ಕೋವಾಡಿ ವಂದಿಸಿ, ವಿದ್ಯಾರ್ಥಿನಿ ಶ್ರೇಯಾ ಖಾರ್ವಿ ಪ್ರಾರ್ಥಿಸಿ , ಗಣಕ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಪ್ರಣಮ್ ಆರ್. ಬೆಟ್ರಾಬೆಟ್ ಕಾರ್ಯಕ್ರಮ ನಿರೂಪಿಸಿದರು.




By
ForthFocus™