ಉಡುಪಿ, ಮೇ 30: ಎರಡೂವರೆ ದಶಕದ ಹಿಂದೆ ಶ್ರೀಸಾಮಾನ್ಯರೊಬ್ಬರ ಮನೆಯೊಂದಕ್ಕೆ ಬೆಂಕಿ ಬಿದ್ದು, ಬದುಕು ಬೀದಿಗೆ ಬೀಳುವ ಪರಿಸ್ಥಿತಿ ಉಂಟಾದ ಸಮಯದಲ್ಲಿ ಮನೆ ಪುನರ್‌ನಿರ್ಮಾಣ ಮಾಡಿಕೊಡಲು ಮಾನವೀಯ ಯುವ ಮನಸ್ಸುಗಳು ಒಂದೆಡೆ ಸೇರಿದವು. ಈ ರೀತಿ ಮಾನವೀಯ ಸೇವೆಯ ತುಡಿತದ ಒಳ್ಳೆಯ ಮನಸ್ಸಿನ ಈ ಗುಂಪಿಗೆ ಅನ್ವರ್ಥವಾಗಿಯೇ ಸುಮನಸಾ ಎಂದು ಕರೆಯಲಾಯಿತು. ಮನೆ ಕಟ್ಟಿಕೊಡುವ ಮೂಲಕ ಮನಸುಗಳನ್ನು ಕಟ್ಟಿದ ಈ ಘಟನೆ, ಆ ಮೂಲಕ ಸಂಘಟನೆಯಾದ ‘ಸುಮನಸಾ’ ರಜತ ಸಂಭ್ರಮದಲ್ಲಿದೆ.
25 ವರ್ಷ ಪೂರೈಸುವುದು ಎಂಬುದು ಒಂದು ಮಹತ್ವದ ಘಟ್ಟ. ಸಂಘಟನೆಯೊಂದು ಬೆಳ್ಳಿ ಹಬ್ಬ ಆಚರಿಸುವುದು ಎಂದರೆ ಮನುಷ್ಯನೊಬ್ಬ ಸುವರ್ಣ ಮಹೋತ್ಸವ ಮಾಡಿಕೊಂಡಂತೆ. ಯಾಕೆಂದರೆ ಒಂದು ಸಂಘಟನೆಯ ಹುಟ್ಟಿನಲ್ಲಿ ಹಿರಿಯರ ಮಾರ್ಗದರ್ಶನ ಇದ್ದರೂ ಬಹುತೇಕ ಯುವ ಮನಸ್ಸುಗಳು 25 ವರ್ಷದ ಆಸುಪಾಸಿನಲ್ಲಿ ಇರುತ್ತಾರೆ. ಹುಮ್ಮಸ್ಸು, ಉತ್ಸಾಹಗಳು ಪುಟಿಯುತ್ತಿರುತ್ತದೆ. ಸಂಸ್ಥೆಗೆ 25 ವರ್ಷ ಆಗುತ್ತಿದೆ ಎಂದರೆ ಆ ಮನಸ್ಸುಗಳು 50ರ ಆಸುಪಾಸು ತಲುಪಿವೆ ಎಂದರ್ಥ. ಆದರೆ, ಸುಮನಸಾ ಸಂಘಟನೆಯು ಈ ರೀತಿ ಆಗದೇ ಪ್ರತಿ ವರ್ಷ ಯುವ ಮನಸ್ಸುಗಳನ್ನು ಸೇರಿಸಿಕೊಂಡೇ ಬರುತ್ತಿರುವುದರಿಂದ 25 ವರ್ಷ ತುಂಬಿದ ಬಳಿಕವೂ ಅದೇ ಉತ್ಸಾಹ, ಅದೇ ಹುಮ್ಮಸ್ಸಿನಲ್ಲಿ ಸಾಮಾಜಿಕ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ.
ಹಳೆ ಬೇರು ಹೊಸ ಚಿಗುರು ಸೇರಿದರೆ ಮರ ಸೊಬಗು ಎಂಬ ಮಾತು ಅಕ್ಷರಶಃ ಅನ್ವಯವಾಗುವ ಸುಮನಸಾ ಸಂಘಟನೆಯ ರಜತ ಮಹೋತ್ಸವವನ್ನು ವರ್ಷಪೂರ್ತಿ ಆಚರಿಸಬೇಕು ಎಂಬ ಒತ್ತಾಸೆಯಿಂದ ರಜತ ಸಂಭ್ರಮ ಸಮಿತಿಯನ್ನು ರಚಿಸಲಾಗಿದೆ. ಸುಮನಸಾದೊಂದಿಗೆ ನೇರವಾಗಿ ಗುರುತಿಸಿಕೊಂಡವರು, ಮಾನಸಿಕವಾಗಿ ಜತೆಗೆ ಇರುವವರು, ನಿರಂತರ ಪ್ರೋತ್ಸಾಹ ನೀಡುತ್ತಾ ಬಂದವರು, ಹೊರಗಿದ್ದುಕೊಂಡೇ ‘ಸುಮನಸಾ’ ನಮ್ಮ ಸಂಸ್ಥೆ ಎಂದು ಅಂದು ಕೊಂಡವರು ಎಲ್ಲರೂ ಸೇರಿ ರಜತ ಮಹೋತ್ಸವ ಆಚರಿಸುತ್ತಿದ್ದೇವೆ. ವರ್ಷಪೂರ್ತಿ ಕಾರ್ಯಕ್ರಮದ ಉದ್ಘಾಟನೆ ಕಾರ್ಯಕ್ರಮವು 2026ರ ಮೇ 31ನೇ ಭಾನುವಾರ ಸಂಜೆ 5ಕ್ಕೆ ಕುಂಜಿಬೆಟ್ಟು ಐವೈಸಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ ವಹಿಸಲಿದ್ದಾರೆ. ಪಡುಬಿದ್ರಿಯ ಯಸ್ಸೆನ್ ಸ್ಪೆಶನ್ ಎಕಾನೋಮಿಕ್ ಜೋನ್ ಮುಖ್ಯಸ್ಥರು ಮತ್ತು ಹಿರಿಯ ಮಹಾ ಪ್ರಬಂಧಕರಾದ ಅಶೋಕ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದಾರೆ.
ಉಡುಪಿ ಶಾಸಕ ಯಶಪಾಲ್ ಸುವರ್ಣ ಅವರು ರಜತ ಸಂಭ್ರಮದ ಲೋಗೊ ಅನಾವರಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬುಡ್ನಾರು ಯಕ್ಷ ಸಂಜೀವ ಟ್ರಸ್ಟ್ನ ಯಕ್ಷಗಾನ ಗುರು ಬನ್ನಂಜೆ ಸಂಜೀವ ಸುವರ್ಣ, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಭಾಗವಹಿಸಲಿದ್ದಾರೆ.
ಸುಮನಸಾ ಕೊಡವೂರು ರಜತ ಸಂಭ್ರಮ ಸಮಿತಿ ಗೌರವಾಧ್ಯಕ್ಷರಾದ ಪ್ರಮೋದ್ ಮಧ್ವರಾಜ್, ಎಂ.ಎಲ್. ಸಾಮಗ, ಸುಮನಸಾ ಕೊಡವೂರು ಸಾಂಸ್ಕೃತಿಕ ಸಂಘಟನೆಯ ಗೌರವಾಧ್ಯಕ್ಷ ಎಂ.ಎಸ್. ಭಟ್, ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ಸಂಚಾಲಕ ಭಾಸ್ಕರ ಪಾಲನ್ ಬಾಚನಬೈಲು ಉಪಸ್ಥಿತರಿರಲಿದ್ದಾರೆ.
ರಜತ ಸಂಭ್ರಮದ ಕಾರ್ಯಕ್ರಮದ ವಿವರ: ಸಂಜೆ 5: ಸುಮಲಹರಿ ರಂಗಗೀತಾ ಗಾಯನ (ಸುಮನಸಾ ಈವರೆಗೆ ಪ್ರಸ್ತುತ ಪಡಿಸಿದ ಆಯ್ದ ನಾಟಕಗಳ ಗೀತೆಗಳನ್ನು ನಮ್ಮದೇ ಪ್ರತಿಭಾವಂತರು ಹಾಡಲಿದ್ದಾರೆ) ಸಂಜೆ 6: ಉದ್ಘಾಟನಾ ಸಭಾ ಕಾರ್ಯಕ್ರಮ ರಾತ್ರಿ 7: ಮಕ್ಕಳ ನಾಟಕ ( ಸ್ನೇಹ, ಸೌಹಾರ್ದ, ಸಂಬಂಧ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಅರಿವಿಗಾಗಿ ಹಮ್ಮಿಕೊಂಡಿದ್ದ ಮಕ್ಕಳ ರಂಗಶಿಬಿರ ‘ಅಟ್ಟಮುಟ್ಟ’ದಲ್ಲಿ ಸಿದ್ಧಗೊಂಡ ನಾಟಕ ‘ರಿಟಯರ್ಡ್ ಬೆಕ್ಕು’ ‘ಸೂಪರ್ ಹೀರೋಸ್ ಆಫ್ ಸುಮನಸಾ’ ಪ್ರದರ್ಶನಗೊಳ್ಳಲಿದೆ. ಚರಿತ್ ಸುವರ್ಣ ಅವರು ಈ ನಾಟಕವನ್ನು ರಚಿಸಿ ನಿರ್ದೇಶಿಸಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ರಜತ ಸಮಿತಿಯ ಅಧ್ಯಕ್ಷ ಹರಿಪ್ರಸಾದ್ ರೈ, ಸುಮನಸಾದ ಅಧ್ಯಕ್ಷ ಪ್ರಕಾಶ್ ಜಿ.ಕೊಡವೂರು, ಗೌರವಾಧ್ಯಕ್ಷ ಎಮ್.ಎಸ್.ಭಟ್, ಸಂಚಾಲಕ ಭಾಸ್ಕರ್ ಪಾಲನ್ ಬಾಚನಬೈಲು, ಉಪಾಧ್ಯಕ್ಷ ವಿನಯ್ ಕಲ್ಮಾಡಿ ಉಪಸ್ಥಿತರಿದ್ದರು.




By
ForthFocus™