Sunday, May 17, 2026
Sunday, May 17, 2026

ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕುರಿತು ಕ್ರಿಯಾ ಯೋಜನೆ: ತರಬೇತಿ ಕಾರ್ಯಕ್ರಮ

ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆ ಕುರಿತು ಕ್ರಿಯಾ ಯೋಜನೆ: ತರಬೇತಿ ಕಾರ್ಯಕ್ರಮ

Date:

ಉಡುಪಿ, ಮೇ 16: ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (ಎಂಪ್ರಿ) ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿ ಇವರ ಸಹಯೋಗದೊಂದಿಗೆ ಹವಾಮಾನ ಬದಲಾವಣೆ ಕುರಿತು ಕ್ರಿಯಾ ಯೋಜನೆ ತರಬೇತಿ ಕಾರ್ಯಕ್ರಮವು ಇಂದು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾ ಸಂಪನ್ಮೂಲ ಕೇಂದ್ರದಲ್ಲಿ ನಡೆಯಿತು. ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕಿ ಕ್ಷಮಾ ಪಾಟೀಲ್ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿದರು.

ಎಂಪ್ರಿ ಹವಾಮಾನ ಬದಲಾವಣೆ ವಿಭಾಗದ ಹಿರಿಯ ಸಮಾಲೋಚಕಿ ಡಾ. ಸರಿತಾ ಬೋಯಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿ ಮಾತನಾಡಿ, ಹವಾಮಾನ ಬದಲಾವಣೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಜಿಲ್ಲೆಯಲ್ಲಿನ ಸವಾಲುಗಳನ್ನು ನಿಭಾಯಿಸಲು ಎಲ್ಲಾ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದರು. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯು, ಕರ್ನಾಟಕ ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಾಯತ್ತ ಸಂಸ್ಥೆಯಾಗಿದ್ದು, ರಾಜ್ಯ ಸರ್ಕಾರದ ನಿರ್ದೇಶನದಂತೆ ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ 2024 ರಲ್ಲಿ ಕೇಂದ್ರದ ಅರಣ್ಯ, ಪರಿಸರ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಅನುಮೋದನೆ ಪಡೆದಿದೆ. ಈ ಯೋಜನೆಯಡಿಯಲ್ಲಿ ಹವಾಮಾನ ಬದಲಾವಣೆಯ ಕುರಿತ ಕಾರ್ಯ ಅಂಶಗಳನ್ನು ಆಧರಿಸಿ, ವಿವಿಧ ಇಲಾಖೆಗಳು 2025-2030ರ ಅವಧಿಗೆ ಪ್ರಮುಖ ಕಾರ್ಯಕ್ಷಮತಾ ಸೂಚಕಗಳನ್ನು ಗುರಿಗಳೊಂದಿಗೆ ನಿಗದಿಪಡಿಸಿವೆ. ಈ ಸೂಚಕಗಳ ಪರಿಣಾಮಕಾರಿ ಅನುಷ್ಠಾನವನ್ನು ಮಾಡಬೇಕಿದೆ ಎಂದರು.

ಎಂಪ್ರಿ ಸಂಸ್ಥೆಯು ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯ ಸಹಯೋಗದೊಂದಿಗೆ ಕಳೆದ ಸಾಲಿನಲ್ಲಿ ರಾಜ್ಯದ 22 ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಮುಗಿಸಿದೆ. ಮುಂದುವರಿದ ಭಾಗವಾಗಿ, 2026-27ನೇ ಸಾಲಿನಲ್ಲಿ ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ವಿಸ್ತರಿಸಲಾಗುತ್ತಿದೆ ಎಂದ ಅವರು, ಈ ಕ್ರಿಯಾಯೋಜನೆಗೆ ಒಟ್ಟು 15 ಇಲಾಖೆಗಳು ಒಳಪಡಲಿದ್ದು, ಕರ್ನಾಟಕ ರಾಜ್ಯ ಹವಾಮಾನ ಬದಲಾವಣೆಯ ಕ್ರಿಯಾ ಯೋಜನೆಯನ್ನು ಸಂಬಂಧಿಸಿದ ಎಲ್ಲ ಇಲಾಖೆಗಳು ಕಾಲಮಿತಿಯೊಳಗೆ ಅನುಷ್ಠಾನಗೊಳಿಸಿ ನಿಗದಿತ ಗುರಿ ತಲುಪಬೇಕು ಎಂದರು. ಹವಾಮಾನ ಬದಲಾವಣೆಯಿಂದ ಉಂಟಾಗುವ ಪರಿಣಾಮಗಳನ್ನು ಎದುರಿಸಲು, ನಿಯಂತ್ರಿಸಲು ಹಾಗೂ ಭವಿಷ್ಯದ ಹವಾಮಾನ ಬದಲಾವಣೆಯ ತೀವ್ರತೆಯನ್ನು ಕಡಿಮೆ ಮಾಡಲು ಇರುವ ಮೂಲಭೂತ ಜ್ಞಾನ ಹಾಗೂ ಮಾರ್ಪಾಡು ಪದ್ಧತಿಯನ್ನು ಸಮರ್ಪಕವಾಗಿ ಅಳವಡಿಸಿಕೊಂಡು ಅದನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.

ಹವಾಮಾನ ಬದಲಾವಣೆಯಿಂದ ಅಕಾಲಿಕ ಮಳೆ, ತಾಪಮಾನ ಹೆಚ್ಚಳ, ಚಂಡಮಾರುತ, ಪ್ರವಾಹ, ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಸಾರ್ವಜನಿಕರ ಜೀವನೋಪಾಯ ಮತ್ತು ಆರ್ಥಿಕತೆಯನ್ನು ದುರ್ಬಲಗೊಳಿಸುತ್ತದೆ. ಜೊತೆಗೆ ನೈಸರ್ಗಿಕ ಪರಿಸರ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ. ಪ್ರಕೃತಿಯೂ ಸಹ ತನ್ನದೇ ಆದ ವ್ಯವಸ್ಥೆಗಳನ್ನು ಒಳಗೊಂಡಿದ್ದು, ಅದರಲ್ಲಿ ಸ್ವಲ್ಪ ಏರಿಳಿತವಾದರೂ ಹಲವು ಅಸಮತೋಲನ ಸೃಷ್ಠಿಗೆ ಕಾರಣವಾಗುತ್ತದೆ. ಯಾವುದೇ ಯೋಜನೆಗಳನ್ನು ಅನುಷ್ಠಾನ ಮಾಡುವಾಗ ಎದುರಾಗುವ ಸಾಮಾಜಿಕ ದುಷ್ಪರಿಣಾಮಗಳನ್ನು ಬಗ್ಗೆ ಯೋಚಿಸಿ ನಂತರ ಯೋಜನೆಗಳನ್ನು ರೂಪಿಸಬೇಕು. ಹವಾಮಾನ ವೈಪರಿತ್ಯವನ್ನು ನಿಯಂತ್ರಿಸುವ ಯೋಜನೆಗಳನ್ನು ಜಾಗತಿಕವಾಗಿ ಅನುಷ್ಠಾನ ಮಾಡುವ ಕುರಿತು ಎಂಪ್ರಿ ಸಂಸ್ಥೆಯು ತರಬೇತಿ ನೀಡಲಿದ್ದು, ತರಬೇತಿಯಲ್ಲಿ ಪಡೆದ ಮಾಹಿತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಬೇಕು ಎಂದರು.

ತೇಜು ಕುಮಾರ್ ಎನ್ ಅವರು, ಕರ್ನಾಟಕ ರಾಜ್ಯ ಜಲ ಸಂಪನ್ಮೂಲ ಕ್ರಿಯಾ ಯೋಜನೆ ಕುರಿತು ಹಾಗೂ ಜಿಲ್ಲೆಯಲ್ಲಿನ ಸ್ಥಳೀಯ ನೀರಿನ ಮೂಲ, ಅಂತರ್ಜಲ ಮಟ್ಟ, ಮಳೆಯ ಪ್ರಮಾಣ, ನದಿಗಳ ನೀರಿನ ಗುಣಮಟ್ಟದ ಬಗ್ಗೆ ವಿವರಿಸಿದರು. ಎನ್.ಆರ್.ಡಿ.ಎಂ.ಎಸ್ ಜಿಲ್ಲೆಯ ಅಧಿಕಾರಿ ವಿಕ್ರಮ್ ಆರ್, ಎನ್.ಆರ್.ಡಿ.ಎಂ.ಎಸ್ ಕೇಂದ್ರದ ಕಾರ್ಯವೈಖರಿ, ಇಲಾಖೆಗಳಿಗೆ ದತ್ತಾಂಶ ನಿರ್ವಹಣೆಗೆ ಸಹಕರಿಸುವ ಕುರಿತು ಮಾಹಿತಿ ಹಂಚಿಕೊಂಡರು.

ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಉಪನಿರ್ದೇಶಕ ಡಾ. ರೆಡ್ಡಪ್ಪ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಕುಮಾರಸ್ವಾಮಿ, ಮೆಸ್ಕಾಂ ನ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಸನ್ನ ಕುಮಾರ್, ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಎಂಪ್ರಿ ತರಬೇತಿ ಮುಖ್ಯಸ್ಥೆ ಲತಾ ಎಂ.ಹೆಚ್ ಸ್ವಾಗತಿಸಿ, ನಿರೂಪಿಸಿದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ತ್ರಿಶಾ ವಿದ್ಯಾ ಕಾಲೇಜು 3 ದಿನಗಳ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮ

ಕಟಪಾಡಿ, ಮೇ 17: ತ್ರಿಶಾ ಸಮೂಹ ಸಂಸ್ಥೆ, ರಿಲಯನ್ಸ್ ಫೌಂಡೇಶನ್ ಹಾಗೂ...

ಜ್ಞಾನಸುಧಾ: ಮೌಲ್ಯಸುಧಾ-48

ಗಣಿತನಗರ, ಮೇ 17: ನಮ್ಮೆಲ್ಲರ ಬದುಕಿನ ಹೊರತಾಗಿ ಜನಪದವನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ....

ಮಕ್ಕಳು ಪಲ್ಸ್ ಪೋಲಿಯೋ ಲಸಿಕೆಯಿಂದ ಹೊರಗುಳಿಯದಂತೆ ಕ್ರಮ ವಹಿಸಿ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ

ಉಡುಪಿ, ಮೇ 16: ಜಿಲ್ಲೆಯಾದ್ಯಂತ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮವು ಜೂನ್...

ಬಜೆ ಅಣೆಕಟ್ಟಿಗೆ ಶಾಸಕ ಯಶ್ಪಾಲ್ ಸುವರ್ಣ ಅಧಿಕಾರಿಗಳೊಂದಿಗೆ ಭೇಟಿ

ಹಿರಿಯಡಕ, ಮೇ 16: ಉಡುಪಿ ನಗರಸಭೆಯ ಕುಡಿಯುವ ನೀರಿನ ಬಜೆ ಅಣೆಕಟ್ಟು...
error: Content is protected !!