Friday, May 15, 2026
Friday, May 15, 2026

ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆಯೊಂದೇ ಪರಿಹಾರ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ

ಕಾಲುಬಾಯಿ ರೋಗ ನಿಯಂತ್ರಣಕ್ಕೆ ಲಸಿಕೆಯೊಂದೇ ಪರಿಹಾರ: ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ

Date:

ಉಡುಪಿ, ಮೇ 14: ಕಾಲುಬಾಯಿ ರೋಗವು ಜಾನುಬಾರುಗಳಲ್ಲಿ ಅತ್ಯಂತ ವೇಗವಾಗಿ ಹರಡುವ ಸಾಂಕ್ರಾಮಿಕ ರೋಗವಾಗಿದ್ದು, ಈ ರೋಗದ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಒಂಭತ್ತನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದ್ದು, ರೈತರು ತಮ್ಮ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸುವಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ನಡೆದ 9 ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯಾದ್ಯಂತ ಒಂಭತ್ತನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮ ಈಗಾಗಲೇ ಆರಂಭಗೊಂಡಿದ್ದು, ಮೇ 22 ರ ವರೆಗೆ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಜಾನುವಾರುಗಳಿಗೆ ವೈರಾಣುವಿನಿಂದ ಹರಡುವ ಈ ರೋಗ ತಡೆಗೆ ಲಸಿಕೆಯೊಂದೇ ಪರಿಹಾರವಾಗಿದ್ದು, ರೈತರುಗಳು ನಿರ್ಲಕ್ಷ್ಯ ವಹಿಸದೇ ತಪ್ಪದೇ ಲಸಿಕೆ ಹಾಕಿಸುವಂತೆ ನೋಡಿಕೊಳ್ಳಬೇಕು ಎಂದು ಪಶು ವೈದ್ಯಾಧಿಕಾರಿಗಳಿಗೆ ತಿಳಿಸಿದರು.

ಜಾನುವಾರುಗಳು ಒಂದೊಮ್ಮೆ ಈ ರೋಗಕ್ಕೆ ತುತ್ತಾದಲ್ಲಿ ಹಾಲಿನ ಉತ್ಪಾದನೆ ಕುಂಠಿತವಾಗುವುದರೊಂದಿಗೆ, ಜಾನುವಾರುಗಳ ಆರೋಗ್ಯ ಹದಗೆಡುತ್ತದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಾರೆ. ಆದ್ದರಿಂದ ಲಸಿಕಾ ಕಾರ್ಯಕ್ಕಾಗಿ ಮನೆ ಮನೆ ಭೇಟಿ ನೀಡುವ ಪಶುವೈದ್ಯರು, ತಾಂತ್ರಿಕ ಸಿಬ್ಬಂದಿ, ಕೆ.ಎಂ.ಎಫ್ ಸಿಬ್ಬಂದಿ, ಮೈತ್ರಿ ಕಾರ್ಯಕರ್ತರು, ಪಶು ಸಖಿಯರು ಹಾಗೂ ಇತರೆ ತರಬೇತಿ ಹೊಂದಿದ ಸಿಬ್ಬಂದಿಗಳಿಗೆ ರೈತರು ಅಗತ್ಯ ಸಹಕಾರ ನೀಡಬೇಕು ಎಂದರು. ಕಳೆದ ಎಂಟನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ 2,00,518 ಜಾನುವಾರುಗಳ ಗುರಿ ನಿಗಧಿಪಡಿಸಿ, 1,92,434 ಜಾನುವಾರುಗಳಿಗೆ ಲಸಿಕೆ ಹಾಕಿಸಿ ಶೇ. 96 ರಷ್ಟು ಪ್ರಗತಿ ಸಾಧಿಸಲಾಗಿದ್ದು, ಒಂಭತ್ತನೇ ಸುತ್ತಿಗೆ 1,96,905 ಗುರಿ ನಿಗಧಿಪಡಿಸಿ, ಈವರೆಗೆ 68,840 ಜಾನುವಾರುಗಳಿಗೆ ಲಸಿಕೆ ಹಾಕುವುದರೊಂದಿಗೆ ಶೇ. 34.96 ರಷ್ಟು ಗುರಿ ಸಾಧಿಸಲಾಗಿದೆ. ಲಸಿಕಾ ಕಾರ್ಯವು ಪ್ರತಿಶತಃ ನೂರರಷ್ಟು ಪ್ರಗತಿಯಾಗುವುದರೊಂದಿಗೆ ಯಾವುದೇ ಜಾನುವಾರುಗಳು ಲಸಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

ಲಸಿಕಾ ಕಾರ್ಯಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 2,16,643 ಡೋಸ್ ಲಸಿಕೆಗಳು ಲಭ್ಯವಿದೆ. ಲಸಿಕಾ ಕಾರ್ಯದ ಸಂದರ್ಭದಲ್ಲಿ ಉತ್ಪತ್ತಿಯಾಗುವ ಜೀವವೈದ್ಯ ತ್ಯಾಜ್ಯಗಳನ್ನು ನಿಯಮಾನುಸಾರ ವೈಜ್ಞಾನಿಕ ವಿಲೇವಾರಿ ಮಾಡಬೇಕು ಎಂದ ಅವರು, ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳ ಜಾನುವಾರುಗಳಿಗೂ ಲಸಿಕೆ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಒಟ್ಟು 8 ಪಶು ಸಂಜೀವಿನಿ ಆಂಬುಲೆನ್ಸ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಈ ವಾಹನಗಳ ಮೂಲಕ 2025 ರ ಏಪ್ರಿಲ್ ನಿಂದ 2026 ರ ಮಾರ್ಚ್ ವರೆಗೆ ಒಟ್ಟು 10,043 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿರುತ್ತದೆ ಎಂದು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ ಸಭೆಗೆ ಮಾಹಿತಿ ನೀಡಿದರು.

ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಸುಬ್ರಹ್ಮಣ್ಯ, ಪಶುವೈದ್ಯಕೀಯ ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ. ಬಾಬಣ್ಣ, ತಾಲೂಕು ಮುಖ್ಯ ಪಶು ವೈದ್ಯಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಗೋಪಾಲಪುರ ಗರಡಿಮಜಲು ರಸ್ತೆಯ ಬದಿ ನಿರಂತರವಾಗಿ ತ್ಯಾಜ್ಯ ಎಸೆಯುವ ಕಿಡಿಗೇಡಿಗಳು

ಉಡುಪಿ, ಮೇ 14: ಉಡುಪಿ ಜಿಲ್ಲೆ ಸ್ವಚ್ಛತೆಯಲ್ಲಿ ರಾಜ್ಯಮಟ್ಟದಲ್ಲೇ ಹೆಸರು ಗಳಿಸಿದೆ....

ಶ್ರೀಕೃಷ್ಣ ಮಠಕ್ಕೆ ಆನಂದ ಗುರೂಜಿ ಭೇಟಿ

ಉಡುಪಿ, ಮೇ 14: ಜೀ ಕನ್ನಡ ವಾಹಿನಿಯ ಮಹರ್ಷಿವಾಣಿ ಖ್ಯಾತಿಯ ಡಾ....

ಕಾಳಾವರ ವರದರಾಜ ಕಾಲೇಜು ವಾರ್ಷಿಕೋತ್ಸವ

ಕೋಟೇಶ್ವರ, ಮೇ 14: ದೃಢತೆಯಿಂದ ಕೂಡಿದ ಅವಿರತವಾದ ಪರಿಶ್ರಮ, ತಾಳ್ಮೆ ಮತ್ತು...

ಶ್ರೀ ಕ್ಷೇತ್ರ ಶಂಕರಪುರ: ಅನ್ನದಾಹ ಕಿಟ್ ಯೋಜನೆಗೆ ಚಾಲನೆ

ಕಟಪಾಡಿ, ಮೇ 14: ಶ್ರೀ ಕ್ಷೇತ್ರ ಶಂಕರಪುರ ಶ್ರೀ ಸಾಯಿ ಮುಖ್ಯಪ್ರಾಣ...
error: Content is protected !!