ಉಡುಪಿ, ಡಿ.28: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ ಇದರ ಸಹಯೋಗದೊಂದಿಗೆ
ವಾತ್ಸಲ್ಯ ಕ್ಲಿನಿಕ್ ನ ವಿಂಶತಿ ಸಮಾರಂಭ ಮತ್ತು ಪ್ರಸಿದ್ದ ಸ್ತ್ರೀ ಆರೋಗ್ಯ ವೈದ್ಯರಾದ ಡಾ. ರಾಜಲಕ್ಷ್ಮಿ ಬರೆದ ‘ವಾತ್ಸಲ್ಯದ ಒಸಗೆ’ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ಯಕ್ಷಗಾನ ಕಲಾರಂಗ ಐವೈಸಿ ಹವಾನಿಯಂತ್ರಿತ ಸಭಾಂಗಣದಲ್ಲಿ ಡಿ.27 ರಂದು ನಡೆಯಿತು.
ಪುಸ್ತಕ ಲೋಕಾರ್ಪಣೆ ಮಾಡಿ ಮಾತನಾಡಿದ ಡಾ. ಎ.ವಿ. ಬಾಳಿಗ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಪಿ. ವಿ. ಭಂಡಾರಿ, ಕನ್ನಡ ಭಾಷೆಯಲ್ಲಿ ವೈದ್ಯರು ಬರೆದ ಆರೋಗ್ಯಕ್ಕೆ ಸಂಬಂಧಿಸಿದ ಪುಸ್ತಕಗಳ ಅವಶ್ಯಕತೆ ಬಹಳಷ್ಟು ಇದೆ. ಗೂಗಲ್ ಮುಂತಾದ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಿ ಎಷ್ಟೋ ಬಾರಿ ತಾವೇ ವೈದ್ಯರಾಗುವುದು ನಮ್ಮ ಸಮಾಜದಲ್ಲಿ ನಡೆಯುತ್ತಿದೆ ಇದು ಸಲ್ಲದು ಆಯಾ ಕ್ಷೇತ್ರದಲ್ಲಿ ಪರಿಣಿತಿ ಹೊಂದಿದ್ದ ವೈದ್ಯರು ಈ ವಿಚಾರದ ಕುರಿತು ಬರೆದಾಗ ಅದು ಜನರಿಗೆ ತಲುಪಲು ಸಾಧ್ಯ ಮತ್ತು ಆರೋಗ್ಯದ ಕುರಿತು ಇರುವ ಅಪನಂಬಿಕೆಗಳನ್ನು ಹೋಗಲಾಡಿಸಲು ಸಾಧ್ಯ ಎಂದರು.
ಉಡುಪಿಯ ರನಿತಾ ಹೆಲ್ತ್ ಕೇರ್ ನ ಮುಖ್ಯಸ್ಥರಾದ ಡಾ. ಆರ್ ಎನ್ ಭಟ್ ಮಾತನಾಡಿ, ನಾವು ವಿವಿಧ ರೀತಿಯ ಋಣಗಳನ್ನು ಹೊಂದಿ ಬದುಕುತ್ತಿದ್ದೇವೆ ಈ ಋಣವನ್ನು ತೀರಿಸಬೇಕಾದರೆ ನಾವು ಮಾಡುವ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಅದೇ ರೀತಿ ಸಮಾಜಕ್ಕೆ ಅರ್ಪಣೆ, ಮನೋಭಾವವನ್ನು ಬೆಳೆಸಿಕೊಳ್ಳಬೇಕಾಗಿದೆ ಈ ನಿಟ್ಟಿನಲ್ಲಿ ಡಾ. ರಾಜಲಕ್ಷ್ಮಿ ಅವರ ಸೇವೆ ಶ್ಲಾಘನೀಯ ಎಂದರು.
ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಉಡುಪಿ ತಾಲೂಕ ಅಧ್ಯಕ್ಷ ರವಿರಾಜ್ ಹೆಚ್.ಪಿ, ನಮ್ಮ ಘಟಕದಿಂದ ಕಳೆದ ನಾಲ್ಕು ವರ್ಷಗಳಲ್ಲಿ ಅತಿ ಹೆಚ್ಚಿನ ಕಾರ್ಯಕ್ರಮಗಳು ನಡೆದಿದೆ. ಮುಖ್ಯವಾಗಿ ಕಥೆ ಕೇಳೋಣ ಮತ್ತು ಮನೆಯೇ ಗ್ರಂಥಾಲಯ ಕಾರ್ಯಕ್ರಮಗಳು ರಾಜ್ಯದ ಮನೆ ಮಾತಾಗಿದೆ ಮುಂದಿನ ದಿನಗಳಲ್ಲಿ ವೈದ್ಯ ಸಾಹಿತಿಗಳ ಸಮ್ಮೇಳನ ನಡೆಸುವ ಯೋಜನೆ ರೂಪಿಸಲಾಗಿದೆ ಎಂದರು.
ನಯನ ಆಸ್ಪತ್ರೆ ಭದ್ರಾವತಿಯ ಸ್ತ್ರೀರೋಗ ತಜ್ಞ ಡಾ. ವೀಣಾ ಭಟ್ ಪುಸ್ತಕ ಪರಿಚಯ ಮಾಡಿದರು. ನಿವೃತ್ತ ಕನ್ನಡ ಪ್ರಾಧ್ಯಾಪಕಿ ಮತ್ತು ಲೇಖಕಿ ಬಿ ಮಹಾಲಕ್ಷ್ಮಿ ಆಶಯ ನುಡಿಗಳನ್ನಾಡಿದರು. ನಿವೃತ್ತ ಸರ್ಕಾರಿ ನೌಕರ ಬಿ ವಾಸುದೇವ ಮಯ್ಯ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು.
ಡಾ. ರಾಜಲಕ್ಷ್ಮಿ ಅವರನ್ನು ಕಸಾಪ ಉಡುಪಿ ತಾಲೂಕಿನ ವತಿಯಿಂದ ಸನ್ಮಾನಿಸಲಾಯಿತು. ಅದೇ ರೀತಿ ಅಂತರಾಷ್ಟ್ರೀಯ ಫಿಲಾಟಲಿ ಪ್ರಶಸ್ತಿ ಪಡೆದ ಉಡುಪಿ ಜಿಲ್ಲಾ ಕಸಾಪ ಜಿಲ್ಲಾ ಮಹಿಳಾ ಪ್ರತಿನಿಧಿ
ಪೂರ್ಣಿಮಾ ಜನಾರ್ಧನ್ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದ ಮೊದಲು ಸ್ನೇಹಾ ಆಚಾರ್ಯ ಇವರಿಂದ ‘ನೃತ್ಯ ಸಿಂಚನ ಭರತನಾಟ್ಯ’ ಕಾರ್ಯಕ್ರಮ ನಡೆಯಿತು. ಪೂರ್ಣಿಮಾ ಜನಾರ್ದನ್ ನಿರೂಪಿಸಿದರು. ಕಸಾಪ ತಾಲೂಕು ಗೌ.ಕಾರ್ಯದರ್ಶಿ ಜನಾರ್ದನ್ ಕೊಡವೂರು ವಂದಿಸಿದರು.




By
ForthFocus™