ಉಡುಪಿ, ಡಿ.25: ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಸ್ಪಷ್ಟತೆ ಮತ್ತು ದಿಕ್ಕು ನೀಡುವ ಮಹತ್ವದ ಹೆಜ್ಜೆಯಾಗಿ, ಪ್ರಸಿದ್ಧ ವೃತ್ತಿ ಮಾರ್ಗದರ್ಶನ ಮತ್ತು ಸಾಫ್ಟ್ ಸ್ಕಿಲ್ಸ್ ತರಬೇತುದಾರ ಮನೋಜ್ ಕಡಬ ಅವರ ಲೇಖನದ ದ್ವಿಭಾಷಾ (ಕನ್ನಡ–ಇಂಗ್ಲಿಷ್) ವೃತ್ತಿ ಮಾರ್ಗದರ್ಶನ ಪುಸ್ತಕ “Shefins Career Apex – The Ultimate Career Guidance Book” ಪರ್ಕಳ ಹೈಸ್ಕೂಲ್ ಸಭಾಂಗಣ, ಉಡುಪಿಯಲ್ಲಿ ನಡೆದ ಉಡುಪಿ ಜಿಲ್ಲಾ ಹೈಸ್ಕೂಲ್ ಮುಖ್ಯೋಪಾಧ್ಯಾಯರ ಸಭೆಯ ಸಂದರ್ಭದಲ್ಲಿ ಬಿಡುಗಡೆಗೊಳಿಸಲಾಯಿತು.
ಪುಸ್ತಕವನ್ನು ಡಿಡಿಪಿಐ (ಅಭಿವೃದ್ಧಿ) ಹಾಗೂ ಡಯಟ್ ಉಡುಪಿ ಪ್ರಾಂಶುಪಾಲರಾದ ಡಾ. ಅಶೋಕ ಕಾಮತ್, ಮತ್ತು ಕಿರಣ್ ಹೆಗ್ಡೆ, ಉಡುಪಿ ಜಿಲ್ಲಾ ಹೈಸ್ಕೂಲ್ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷರು ಜೊತೆಯಾಗಿ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಡಾ. ಯೆಲ್ಲಮ್ಮ, (ಉಡುಪಿ ವಲಯ), ನಾಗೇಶ್ (ಬೈಂದೂರು ವಲಯ) ಹಾಗೂ ಉಮಾ (ಬ್ರಹ್ಮಾವರ ವಲಯ) ಅವರು ಗೌರವ ಉಪಸ್ಥಿತರಿದ್ದರು. ಅತಿಥೇಯ ಸಂಸ್ಥೆಯ ಪರವಾಗಿ ಪರ್ಕಳ ಹೈಸ್ಕೂಲ್ ಆಡಳಿತ ಮಂಡಳಿ ಅಧ್ಯಕ್ಷರಾದ ಅರುಣಾಚಲ ಹೆಗ್ಡೆ, ಮತ್ತು ಪರ್ಕಳ ಹೈಸ್ಕೂಲ್ ಮುಖ್ಯೋಪಾಧ್ಯಾಯರಾದ ಆನಂದ ನಾಯಕ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರೋಟರಿ ಪರ್ಕಳದ ಕಾರ್ಯದರ್ಶಿ ವಿಶ್ವನಾಥ ನಾಯಕ್, ರೇಡಿಯೋ ಮಣಿಪಾಲ್ ಸಮುದಾಯ ರೇಡಿಯೋ ನಿರ್ದೇಶಕರಾದ ಡಾ. ರಶ್ಮಿ ಅಮ್ಮೆಂಬಳ, ಜೆಸಿಐ ವಲಯ 15ರ ಪೂರ್ವ ವಲಯಾಧ್ಯಕ್ಷರಾದ ರಾಜೇಂದ್ರ ಭಟ್, ಶೆಫಿನ್ಸ್ ಸಂಸ್ಥೆಯ ಸಹ ಸ್ಥಾಪಕರಾದ ಶೆರ್ಲಿ ಮನೋಜ್, ಹಾಗೂ ಪುಸ್ತಕದ ಲೇಖಕರಾದ ಮನೋಜ್ ಕಡಬ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ. ಅಶೋಕ ಕಾಮತ್ ಅವರು ಶಾಲಾ ಹಂತದಲ್ಲಿಯೇ ವೈಜ್ಞಾನಿಕ, ವ್ಯವಸ್ಥಿತ ಹಾಗೂ ಪ್ರಾಯೋಗಿಕ ವೃತ್ತಿ ಮಾರ್ಗದರ್ಶನ ಅತ್ಯವಶ್ಯಕ ಎಂದು ತಿಳಿಸಿ, ಪಠ್ಯಾಧ್ಯಯನದ ಪೂರಕವಾಗಿ ವೃತ್ತಿ ಮಾರ್ಗದರ್ಶನ ತರಬೇತಿಯು ಸರಕಾರ ಸೂಚಿಸುವ ಅತ್ಯವಶ್ಯಕ ತರಬೇತಿಯಾಗಿದ್ದು, ಪುಸ್ತಕವು ಈ ಅವಶ್ಯಕತೆಯನ್ನು ಸಮರ್ಥವಾಗಿ ನಿಭಾಯಿಸುತ್ತಿದೆ ಹಾಗೆಯೇ ಎಲ್ಲಾ ಶಾಲೆಗಳು ತಮ್ಮ ಲೈಬ್ರೈರಿಯಲ್ಲಿ ಈ ಪುಸ್ಕವನ್ನು ಇಟ್ಟುಕೊಂಡಲ್ಲಿ ಬಹಳ ಉಪಯುಕ್ತವಾಗಲಿದೆ ಎಂದರು.
ಕಿರಣ್ ಹೆಗ್ಡೆ ಅವರು ಪುಸ್ತಕದ ಪ್ರಾಯೋಗಿಕ ಉಪಯೋಗಿತೆಯನ್ನು ವಿವರಿಸಿ, ಮುಖ್ಯೋಪಾಧ್ಯಾಯರು, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇದು ವಿಶ್ವಾಸಾರ್ಹ ಮಾರ್ಗದರ್ಶಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಈ ಪುಸ್ತಕವು 2,500ಕ್ಕೂ ಹೆಚ್ಚು ವೃತ್ತಿ ಅವಕಾಶಗಳ ವಿವರ, 31 ಪ್ರೇರಣಾದಾಯಕ ಹಾಗೂ ಪಾಠಾಧಾರಿತ ನೈಜ ಜೀವನ ಕಥೆಗಳು, ಸ್ವಯಂ ಮೌಲ್ಯಮಾಪನ, ಮಾರ್ಗದರ್ಶನ ಮತ್ತು ಗುರಿ ನಿಗದಿ, ಸ್ಮಾರ್ಟ್ ಗುರಿಗಳ ಮೂಲಕ ವೃತ್ತಿ ಯಶಸ್ಸು, ಹಾಗೂ ಪೋಷಕರು ಮತ್ತು ವಿದ್ಯಾರ್ಥಿಗಳಿಗಾಗಿ ಉಪಯುಕ್ತ ಚೆಕ್‌ಲಿಸ್ಟ್‌ಗಳನ್ನು ಒಳಗೊಂಡಿದೆ ಎಂದು ಲೇಖಕರಾದ ಮನೋಜ್ ಕಡಬ ತಿಳಿಸಿದರು.




By
ForthFocus™