ಉಡುಪಿ, ಆ.6: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ, ಕೌಶಲ್ಯಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾ ಪಂಚಾಯತ್ ಉಡುಪಿ, ಹಾಗೂ ತಾಲೂಕು ಪಂಚಾಯತ್ ಉಡುಪಿ ಇದರ ಜಂಟಿ ಆಶ್ರಯದಲ್ಲಿ ಸಂಜೀವಿನಿ ಸ್ವ ಸಹಾಯ ಗುಂಪಿನ ಸದಸ್ಯರುಗಳಿಗಾಗಿ ಸಮುದಾಯ ಪ್ರವಾಸೋದ್ಯಮ ತರಬೇತಿಯನ್ನು ಉಡುಪಿ ತಾಲೂಕ್ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಯಿತು. ಪ್ರವಾಸೋದ್ಯಮ ಇಲಾಖೆಯ ಮೇಲ್ವಿಚಾರಕರಾದ ಭವಿಷ್ ಉದ್ಘಾಟಿಸಿ ಮಾತನಾಡುತ್ತಾ, ಉಡುಪಿ ಜಿಲ್ಲೆಯು ಪ್ರವಾಸೋದ್ಯಮ ಚಟುವಟಿಕೆಗಳಿಗೆ ಪೂರಕವಾಗಿದೆ. ದೇಶ ವಿದೇಶದ ಹಲವಾರು ಜನರನ್ನು ತಮ್ಮ ರಜಾ ದಿನಗಳನ್ನು ಕಳೆಯಲು ಇಲ್ಲಿಗೆ ಆಗಮಿಸುತ್ತಿದ್ದಾರೆ. ಇಲ್ಲಿ ಪ್ರಾರಂಭಿಸುವ ಪ್ರವಾಸೋದ್ಯಮ ಚಟುವಟಿಕೆಗಳು ಎಲ್ಲಾ ಜನರನ್ನು ಆಕರ್ಷಿಸುತ್ತಿದೆ. ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರು ವಿವಿಧ ಸ್ವ ಉದ್ಯೋಗ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಕಡಲ ತೀರ ಪ್ರದೇಶಗಳಲ್ಲಿ ಸಂಜೀವಿನಿ ಸ್ವ ಸಹಾಯ ಗುಂಪಿನ ಮಹಿಳೆಯರಿಂದ ಹೋಮ್ ಸ್ಟೇ ಪ್ರಾರಂಭಿಸಿ ಇದರ ಮೂಲಕ ಇವರ ಆದಾಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ನವ್ಯ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಪ್ರವಾಸೋದ್ಯಮ ಚಟುವಟಿಕೆ ಸಂಬಂಧಿಸಿದ ತರಬೇತಿಯನ್ನು ಇಂದು ಆಯೋಜನೆ ಮಾಡಲಾಗಿದೆ. ತರಬೇತಿ ಪಡೆದ ಮಹಿಳೆಯರಿಗೆ ಸ್ಥಳೀಯವಾಗಿ ಹೋಂ ಸ್ಟೇ ಪ್ರಾರಂಭಿಸಲು ಅವಕಾಶ ಕಲ್ಪಿಸಲಾಗುವುದು. ಉಡುಪಿ ತಾಲೂಕಿನ ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಶ್ರೀ ಮಹಾಗಣಪತಿ ಸಂಜೀವಿನಿ ಒಕ್ಕೂಟದ ಮುಖಾಂತರ ಹೋಂ ಸ್ಟೇಯನ್ನು ಮೊದಲ ಹಂತವಾಗಿ ಪ್ರಾಯೋಗಿಕವಾಗಿ ಪ್ರಾರಂಭಿಸಲಾಗುತ್ತಿದೆ. ಈ ಹೋಮ್ ಸ್ಟೇ ಯನ್ನು ಸಂಪೂರ್ಣವಾಗಿ ಸಂಜೀವಿನಿ ಸ್ವಸಹಾಯ ಗುಂಪಿನ ಮಹಿಳೆಯರೇ ನಿರ್ವಹಿಸುವುದು ವಿಶೇಷವಾಗಿದೆ. ಮುಂದಿನ ದಿನಗಳಲ್ಲಿ ಇತರೆ ತಾಲೂಕುಗಳಲ್ಲಿ ಇದೇ ಮಾದರಿ ಹೋಂ ಸ್ಟೇ ಗಳನ್ನು ವಿಸ್ತರಿಸುವ ಯೋಜನೆಯನ್ನು ಹೊಂದಲಾಗಿದೆ ಎಂದು ತಿಳಿಸಿದರು. ತರಬೇತಿ ಕಾರ್ಯಕ್ರಮದಲ್ಲಿ ಸುಯಾತ್ರಿ ಸಂಸ್ಥೆಯ ಸಂಪನ್ಮೂಲ ವ್ಯಕ್ತಿಗಳಾದ ಸುಮೇಶ್, ಜಿಲ್ಲಾ ವ್ಯವಸ್ಥಾಪಕರಾದ ಅವಿನಾಶ್, ತಾಲೂಕು ಅಭಿಯಾನ ನಿರ್ವಹಣಾ ಘಟಕದ ಸುಜಾತಾ, ಸವಿತಾ, ಪ್ರಶಾಂತ್, ಬಬೀತಾ, ಹರ್ಷಿತ, ಪ್ರಮೀಳಾ, ಸುಪರ್ಣ ಉಪಸ್ಥಿತರಿದ್ದರು.




By
ForthFocus™