ಮಣಿಪಾಲ, ಜೂ.14: ಭಗವಂತನ ಸೃಷ್ಟಿಯಲ್ಲಿ ನಾವೆಲ್ಲರೂ ವಿಭಿನ್ನರು. ನಮ್ಮಲ್ಲಿರುವ ವಿಶೇಷತೆಯನ್ನು ಅರಿತು, ಕಾಯಕವೇ ಕೈಲಾಸ ಎಂಬುದನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕು. ಶಿಕ್ಷಣ ಒಂದು ತಪಸ್ಸು ಇದ್ದಂತೆ ಅದನ್ನು ಸಾಧಿಸುವ ಮನೋಧೈರ್ಯ ನಮ್ಮಲ್ಲಿರಬೇಕು. ತಮ್ಮ ಸಾಧನೆಯನ್ನು ಹೆತ್ತವರ ಪಾದಗಳಿಗೆ ಅರ್ಪಿಸಿ ಅದರಿಂದ ಸಿಗುವ ಪರಮಸುಖವನ್ನು ಅನುಭವಿಸುವ ಶ್ರೇಷ್ಠ ಮಕ್ಕಳೆನಿಸಿಕೊಳ್ಳಿ ಎಂದು ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಹೇಳಿದರು. ಇವರು ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನಲ್ಲಿ ನಡೆದ ಉಡುಪಿ ಮತ್ತು ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜುಗಳು ಜಂಟಿಯಾಗಿ ಆಯೋಜಿಸಿದ ಪ್ರಾರಂಭೊತ್ಸವದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಡೀನ್ ಅಕಾಡೆಮಿಕ್ಸ್ ಆಗಿರುವ ಡಾ. ಮಿಥುನ್ ಯು ಮಾತನಾಡಿ, ಎರಡು ವರ್ಷಗಳ ಶೈಕ್ಷಣಿಕ ಚಟುವಟಿಕೆಗಳು ಸಾಗುವ ಬಗೆಯನ್ನು ವಿವರಿಸಿದರು. ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಕೋಆರ್ಡಿನೇಟರ್ ಸಂದೀಪ್ ಮಾತನಾಡಿ, ವಿವಿಧ ಪ್ರವೇಶ ಪರೀಕ್ಷೆಗಳ ತರಬೇತಿಯ ಬಗ್ಗೆ ಮಾಹಿತಿ ನೀಡಿದರು.
ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ವತಿಯಿಂದ ಮಣಿಪಾಲ ಮತ್ತು ಉಡುಪಿ ಜ್ಞಾನಸುಧಾ ಕಾಲೇಜಿಗೆ ದಾಖಲಾತಿ ಹೊಂದಿದ 119 ಅರ್ಹ ವಿದ್ಯಾರ್ಥಿಗಳಿಗೆ 47.87 ಲಕ್ಷ ವಿದ್ಯಾರ್ಥಿವೇತನ ನೀಡಲಾಯಿತು. ಮಣಿಪಾಲ ಜ್ಞಾನಸುಧಾ ಪ.ಪೂ. ಕಾಲೇಜಿನ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ ಸ್ವಾಗತಿಸಿ ವಿದ್ಯಾರ್ಥಿಗಳಿಗೆ ಸಲಹೆ ಸೂಚನೆಗಳನ್ನು ನೀಡಿದರು. ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಸಿ.ಇ.ಓ. ದಿನೇಶ್ ಎಂ ಕೊಡವೂರು, ಉಡುಪಿ ಜ್ಞಾನಸುಧಾದ ಪ್ರಾಂಶುಪಾಲರಾದ ಸಂತೋಷ್, ಎರಡು ಸಂಸ್ಥೆಗಳ ಉಪಪ್ರಾಂಶುಪಾಲರುಗಳು ಮುಂತಾದವರು ಉಪಸ್ಥಿತರಿದ್ದರು. ಆಂಗ್ಲಭಾಷಾ ಉಪನ್ಯಾಸಕಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.




By
ForthFocus™