Thursday, November 19, 2026
Thursday, November 19, 2026

ಜಿಲ್ಲೆಯ ಪ್ರತಿಯೊಂದು ಜಾನುವಾರುಗಳಿಗೂ ಕಾಲುಬಾಯಿ ಲಸಿಕೆಗಳನ್ನು ಹಾಕಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

ಜಿಲ್ಲೆಯ ಪ್ರತಿಯೊಂದು ಜಾನುವಾರುಗಳಿಗೂ ಕಾಲುಬಾಯಿ ಲಸಿಕೆಗಳನ್ನು ಹಾಕಿ: ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ

Date:

ಉಡುಪಿ, ಏ.19: ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಏಳನೇ ಸುತ್ತಿನ ಕಾಲುಬಾಯಿ ಜ್ವರ ರೋಗ ಲಸಿಕಾ ಕಾರ್ಯಕ್ರಮವನ್ನು ಏಪ್ರಿಲ್ 26 ರಿಂದ ಜೂನ್ 4 ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಜಾನುವಾರುಗಳಿಗೆ ಲಸಿಕೆ ಹಾಕುವ ಮೂಲಕ ಪ್ರತಿಶತಃ ನೂರರಷ್ಟು ಗುರಿ ಸಾಧನೆಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ಸೂಚನೆ ನೀಡಿದರು. ಅವರು ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಾನುವಾರು ಕಾಲುಬಾಯಿ ಜ್ವರ ರೋಗ ಲಸಿಕಾ ಕಾರ್ಯಕ್ರಮದ ಜಿಲ್ಲಾಮಟ್ಟದ ನಿರ್ವಹಣಾ ಸಮಿತಿ ಸಭೆ ಹಾಗೂ ಪಶು ಸಂಜೀವಿನಿ ವಾಹನಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಜಾನುವಾರುಗಳಲ್ಲಿ ಕಂಡು ಬರುವ ಕಾಲುಬಾಯಿ ರೋಗವು ವೈರಾಣುವಿನಿಂದ ಬರುವ ಅಂಟು ರೋಗವಾಗಿದ್ದು, ಗೊರಸು ಕಾಲುಗಳನ್ನು ಹೊಂದಿರುವ ಎಲ್ಲಾ ಪ್ರಾಣಿಗಳಲ್ಲಿ ಈ ರೋಗವು ಕಂಡುಬರುತ್ತದೆ. ರೈತರಿಗೆ ಆರ್ಥಿಕ ಸಂಕಷ್ಟ ಉಂಟುಮಾಡುವ ಈ ರೋಗವನ್ನು ನಿಯಂತ್ರಿಸಲು ಲಸಿಕೆ ನೀಡುವುದೊಂದೇ ಪರಿಹಾರವಾಗಿದ್ದು, ಪ್ರತೀ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸುವುದರೊಂದಿಗೆ ರೈತರು ತಮ್ಮ ಜಾನುವಾರುಗಳನ್ನು ಈ ರೋಗದಿಂದ ರಕ್ಷಿಸಿಕೊಳ್ಳಬೇಕು ಎಂದರು. ಕಾಲುಬಾಯಿ ಲಸಿಕಾ ಕಾರ್ಯಕ್ರಮದಲ್ಲಿ ಜಾನುವಾರುಗಳಿಕೆ ಲಸಿಕೆ ಹಾಕಿಸುವುದರೊಂದಿಗೆ, ಯಾವುದೇ ಜಾನುವಾರುಗಳು ಲಸಿಕೆಯಿಂದ ಬಿಟ್ಟುಹೋಗದಂತೆ ನೋಡಿಕೊಳ್ಳಬೇಕು ಎಂದ ಅವರು, ಈಗಾಗಲೇ ಜಿಲ್ಲೆಗೆ ಅಗತ್ಯವಿರುವ ಲಸಿಕೆ ಹಾಗೂ ಇನ್ನಿತರ ಸಾಮಾಗ್ರಿಗಳನ್ನು ದಾಸ್ತಾನು ಇಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸಕ್ತ ಸಾಲಿನಲ್ಲಿ ಜಾನುವಾರು ಆರೋಗ್ಯ ಮತ್ತು ರೋಗ ನಿಯಂತ್ರಣ ಕಾರ್ಯಕ್ರಮದ ಅಡಿಯಲ್ಲಿ ಕಾಲುಬಾಯಿ ರೋಗದ ಲಸಿಕಾ ಕಾರ್ಯಕ್ರಮದೊಂದಿಗೆ ಚರ್ಮಗಂಟು ರೋಗ ಲಸಿಕೆಯನ್ನು ಸಹ ಜಾನುವಾರುಗಳಿಗೆ ನೀಡಲಾಗುತ್ತಿದ್ದು, ಈ ಎರಡೂ ಲಸಿಕೆಗಳನ್ನು ಜಾನುವಾರುಗಳಿಗೆ ಹಾಕಿಸುವುದರ ಮೂಲಕ ಜಾನುವಾರುಗಳ ಉತ್ಪನ್ನ ಹೆಚ್ಚಿಸಲು ಅಗತ್ಯ ಕ್ರಮ ವಹಿಸಬೇಕು ಎಂದರು. ಪಶುವೈದ್ಯರು, ಸಿಬ್ಬಂದಿ, ಕೆ.ಎಂ.ಎಫ್ ಸಿಬ್ಬಂದಿ ಹಾಗೂ ತರಬೇತಿ ಹೊಂದಿರುವ ಪಶುಸಖಿಯರ ಮೂಲಕ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಇವರುಗಳು ಮನೆ ಭೇಟಿ ನೀಡಿದ ಸಂದರ್ಭದಲ್ಲಿ ರೈತರುಗಳು ಅಗತ್ಯ ಸಹಕಾರ ನೀಡುವಂತೆ ತಿಳಿಸಿದ ಅವರು, ಹೆಚ್ಚಿನ ಸಂಖ್ಯೆಯ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಬೇಕು ಎಂದರು. ಕಳೆದ ಆರನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ಜಿಲ್ಲೆಯ 2,08,558 ಜಾನುವಾರುಗಳ ಗುರಿ ನಿಗಧಿಪಡಿಸಿ, 2,00,888 ಜಾನುವಾರುಗಳಿಗೆ ಲಸಿಕೆ ಹಾಕಿಸಿ, ಶೇ. 96 ರಷ್ಟು ಪ್ರಗತಿ ಸಾಧಿಸಿದ್ದು, ಏಳನೇ ಸುತ್ತಿನಲ್ಲಿಯೂ ಸಹ ಹೆಚ್ಚಿನ ಸಂಖ್ಯೆಯ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಮೂಲಕ ಅವುಗಳ ಆರೋಗ್ಯ ರಕ್ಷಣೆಗೆ ಮುಂದಾಗಬೇಕು ಎಂದರು.

ಜಿಲ್ಲೆಯ ಕಾಪು, ಉಡುಪಿ, ಬೈಂದೂರು, ಹೆಬ್ರಿ, ಕುಂದಾಪುರ, ಕಾರ್ಕಳ ಹಾಗೂ ಬ್ರಹ್ಮಾವರ ತಾಲೂಕು ಮತ್ತು ಉಡುಪಿ ಪಾಲಿಕ್ಲಿನಿಕ್ ನಲ್ಲಿ ತಲಾ ಒಂದರಂತೆ ಒಟ್ಟು 8 ಪಶು ಸಂಜೀವಿನಿ ಆಂಬುಲೆನ್ಸ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತೀ ಚಿಕಿತ್ಸಾ ಘಟಕದ ವಾಹನದಲ್ಲಿ ಪಶುವೈದ್ಯರು, ಪಶುವೈದ್ಯ ಸಹಾಯಕ ಹಾಗೂ ವಾಹನ ಚಾಲಕರು ನೇಮಕಗೊಂಡಿದ್ದು, 2024-25 ನೇ ಸಾಲಿನಲ್ಲಿ ಈ ವಾಹನಗಳ ಮೂಲಕ ಒಟ್ಟು 7,488 ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿರುತ್ತದೆ ಎಂದರು. ಸಭೆಯಲ್ಲಿ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಎಂ.ಸಿ ರೆಡ್ಡಪ್ಪ, ಮುಖ್ಯ ಪಶು ವೈದ್ಯಾಧಿಕಾರಿ ಡಾ.ಸಂದೀಪ್, ತಾಲೂಕುಗಳ ಆಡಳಿತ ಮುಖ್ಯ ಪಶುವೈದ್ಯಾಧಿಕಾರಿಗಳು, ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಾವೇರಿ 2.0: ಆಸ್ತಿ ನೋಂದಣಿಗೆ ಡಿಜಿಟಲ್ ಸ್ಪರ್ಶ

ಬೆಂಗಳೂರು, ನ.19: ಆಸ್ತಿ ನೋಂದಣಿಗಾಗಿ ಕಚೇರಿಗಳಿಗೆ ತೆರಳಿ ಭೌತಿಕ ದಾಖಲೆಗಳನ್ನು ಸಲ್ಲಿಸುವ...

‘ಋತು ತಾರೆ’ ವಿನೂತನ ಕಾರ್ಯಕ್ರಮ

ಬೆಂಗಳೂರು, ನ.೧೯: ಮಹಿಳೆಯರ ಮಧ್ಯವಯಸ್ಸಿನಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳನ್ನು ಗುರುತಿಸಿ, ಸೂಕ್ತ...

ಬಂಟ್ವಾಳ: ಹೊಂಡ-ಗುಂಡಿಗಳ ವರದಿ ಬಗ್ಗೆ ಸಿಎಂ ಕಛೇರಿ ಸ್ಪಂದನೆ

ಬಂಟ್ವಾಳ, ನ.19: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಮೂಲಕ ಹಾದುಹೋಗುವ...

ಮುರಳಿ ಕಡೆಕಾರ್ ಇವರಿಗೆ ಶಾರದಾಕೃಷ್ಣ ಪ್ರಶಸ್ತಿ-2027

ಉಡುಪಿ, ನ.18: ಹೆಬ್ರಿಯ ರಾಘವೇಂದ್ರ ಚಾರಿಟೇಬಲ್ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸಂಸ್ಕೃತಿ ವಿಶ್ವ...
error: Content is protected !!