ಉಡುಪಿ, ಮಾ.27: ಯುವ ಪೀಳಿಗೆಯು ಕೇವಲ ಶೈಕ್ಷಣಿಕವಾಗಿ ಮಾತ್ರವಲ್ಲದೇ ರಂಗಭೂಮಿ ಸೇರಿದಂತೆ ಇನ್ನಿತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಕೌಶಲ್ಯಾಭಿವೃದ್ಧಿ ಹೊಂದಿ ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯ ಎಂದು ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಬಿ.ಪದ್ಮನಾಭ ಗೌಡ ಹೇಳಿದರು. ಅವರು ಗುರುವಾರ ಕಾರ್ಕಳದ ಕೋಟಿ ಚೆನ್ನಯ್ಯ ಥೀಂ ಪಾರ್ಕ್ ಆವರಣದಲ್ಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಹಾಗೂ ಯಕ್ಷ ರಂಗಾಯಣ ಕಾರ್ಕಳ ಇವರ ವತಿಯಿಂದ ಯಕ್ಷ ರಂಗಭೂಮಿ ದಿನಾಚರಣೆಯ ಪ್ರಯುಕ್ತ ಯಕ್ಷ ರಂಗಾಯಣದ ರೆಪರ್ಟರಿ ಕಲಾವಿದರು ಪ್ರಸ್ತುತಪಡಿಸುವ ಕುಮಾರ ವ್ಯಾಸ ಭಾರತದ ವಿರಾಟ ಪರ್ವದಿಂದ ಆಯ್ದ ಭಾಗದ ವಾಚಿಕೆ ವಿನ್ಯಾಸ ಆರೊಡನೆ ಕಾದುವೆನು ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ದೇಶದ ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಮುಂದಿನ ಪೀಳಿಗೆಗೆ ತಲುಪಿಸುವುದು ಹಿರಿಯರ ಕರ್ತವ್ಯವಾಗಿದೆ. ಭಕ್ತಿಯ ಕುರಿತು ಅರಿಯುವಲ್ಲಿ ಕುಮಾರವ್ಯಾಸನ ಪದ್ಯಗಳು ಹೆಚ್ಚು ಮೌಲ್ಯಯುತವಾಗಿದ್ದು, ಭಕ್ತಿಯ ಪರಂಪರೆಯಲ್ಲಿ ಮುಂದುವರಿದ ಅವರ ಪದ್ಯಗಳನ್ನು ಪ್ರತಿಯೊಬ್ಬರು ಓದುವ ಮೂಲಕ ನಮ್ಮ ಸಂಸ್ಕೃತಿಯನ್ನು ಹಾಗೂ ಸಂಪ್ರದಾಯವನ್ನು ಮುಂದುವರಿಸುವ ಕಾರ್ಯದಲ್ಲಿ ತೊಡಗಬೇಕು ಎಂದರು.
ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಮಾತನಾಡಿ, ನಾಟಕಗಳಲ್ಲಿ ಭಾಗವಹಿಸುವಿಕೆ ಭಾವನೆಗಳನ್ನು ಜಾಗೃತಗೊಳಿಸುವುದರೊಂದಿಗೆ ಜೀವನದಲ್ಲಿ ಉತ್ಸುಕತೆ ಹೆಚ್ಚಾಲು ಸಹಕಾರಿಯಾಗಿದ್ದು, ಸಾಮರಸ್ಯವನ್ನು ಹಾಗೂ ಮ್ಪರಸ್ಪರ ಪ್ರೀತಿಯ ವೃದ್ಧಿಯಲ್ಲಿಯೂ ರಂಗಭೂಮಿಯು ಮಹತ್ತರವಾದ ಪಾತ್ರವನ್ನು ವಹಿಸುತ್ತದೆ ಎಂದರು. ಕಾರ್ಕಳ ಯಕ್ಷ ರಂಗಾಯಣದ ರೆಪರ್ಟರಿ ಕಲಾವಿದರು 2025 ರ ಯಕ್ಷ ರಂಗ ಭೂಮಿ ದಿನಾಚರಣೆಯ ಸಂದೇಶವನ್ನು ವಾಚಿಸಿ ತದನಂತರ ಕುಮಾರ ವ್ಯಾಸ ಭಾರತದ ವಿರಾಟ ಪರ್ವದಿಂದ “ಆರೊಡನೆ ಕಾದುವೆನು” ವಾಚಿಕೆ ವಿನ್ಯಾಸವನ್ನು ಪ್ರದರ್ಶಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಚಂದ್ರಕಾಂತ ಬಜೆಗೋಳಿ ನಿರೂಪಿಸಿ ವಂದಿಸಿದರು.




By
ForthFocus™