ಉಡುಪಿ, ಮೇ 5: ತಮ್ಮ ಬದುಕನ್ನು ತಾವೇ ಕಟ್ಟಿಕೊಳ್ಳಬೇಕು ಎಂಬ ಭಾವ ಕಾರಂತರಲ್ಲಿ ಮೂಡಿದಾಗ ಸ್ವಾತಂತ್ರ್ಯ ಹೋರಾಟ ಮತ್ತು ವಿವಿಧ ಸಮಾಜಮುಖಿ ಚಳುವಳಿಯಲ್ಲಿ ಪಾಲ್ಗೊಂಡವರು. ಚಿಂತನೆಗಳ ಮೂಲಕ ವೈಜ್ಞಾನಿಕತೆಯನ್ನು ಉಳಿಸಿಕೊಂಡ ಅವರು ಇಳಿ ವಯಸ್ಸಿನಲ್ಲಿಯೂ ಬದುಕಿನಲ್ಲಿ ಕುರಿತು ಹೊಂದಿದ್ದ ಉತ್ಸಾಹ ಕೆಲಸ ನಿಷ್ಠೆ ಹಿರಿಯ ನಾಗರಿಕರಿಗೆ ಮಾದರಿ ಎಂದು ಉದಯವಾಣಿಯ ವಿಶ್ರಾಂತ ಹಿರಿಯ ಉಪಸಂಪಾದಕ ನಿತ್ಯಾನಂದ ಪಡ್ರೆ ಹೇಳಿದರು. ಅವರು ಶನಿವಾರ ಬ್ರಹ್ಮಗಿರಿಯ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಡಾ.ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ಹಿರಿಯ ನಾಗರಿಕರ ಸಂಘ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ ನಡೆದ ಕಾರಂತ ಉಪನ್ಯಾಸ ಮತ್ತು ಬಹುಮಾನ ವಿತರಣಾ ಸಮಾರಂಭದಲ್ಲಿ ಕಾರಂತರ ಬದುಕು- ಬರಹಗಳು ಹಿರಿಯ ನಾಗರಿಕರಿಗೆ ಮಾದರಿ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.
ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಕೆ.ಮುರಳಿಧರ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಾ. ಶಿವರಾಮ ಕಾರಂತ ಟ್ರಸ್ಟಿನ ಅಧ್ಯಕ್ಷ ಡಾ.ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾರಂತರ ಕಾದಂಬರಿಗಳ ಓದುವಿಕೆ ಹಿರಿಯ ನಾಗರಿಕರಲ್ಲಿ ಧೈರ್ಯವನ್ನು ಹೆಚ್ಚಿಸುತ್ತದೆ. ಬದುಕು ಬಂದಂತೆ ಸ್ವೀಕರಿಸುವ ಮನೋಭಾವವನ್ನು ಅವರ ಕೃತಿಗಳು ರೂಪಿಸುತ್ತದೆ ಎಂದರು.
ಹಿರಿಯ ನಾಗರಿಕರಿಗಾಗಿ ಆಯೋಜಿಸಲಾದ ಡಾ.ಕಾರಂತ ಲೇಖನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಮಂಜುನಾಥ್ ಕಾಮತ್, ಸಂಕಯ್ಯ ಶೆಟ್ಟಿ ಕೆಂಜೂರು, ದ್ವಿತೀಯ ಸ್ಥಾನ ಪಡೆದ ಡಾ.ಪಿ ಕೃಷ್ಣಪ್ರಸಾದ್, ಗಿರಿಜಾ ಬ್ರಹ್ಮಾವರ ಹಾಗೂ ತೃತೀಯ ಸ್ಥಾನ ಪಡೆದ ಸೋಮಶೇಖರ ರೆಡ್ಡಿ, ಗಿಲ್ಬರ್ಟ್ ಪಿಂಟೋ ಹಾಗೂ ಕರುಣಾ ಸುರೇಶ್ ಪೈ ಇವರಿಗೆ ಈ ಸಂದರ್ಭದಲ್ಲಿ ಬಹುಮಾನವನ್ನು ವಿತರಿಸಲಾಯಿತು.
ಕರ್ನಾಟಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಸಭಾಪತಿ ಬಸರೂರು ರಾಜೀವ ಶೆಟ್ಟಿ, ಚಿಂತಕ ಮುಷ್ತಾಕ್ ಹೆನ್ನಾಬೈಲ್, ಪ್ರಮುಖರಾದ ಸದಾನಂದ ಹೆಗ್ಡೆ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟಿನ ಸದಸ್ಯ ಜಿ.ಎಂ ಶರೀಫ್ ಹೂಡೆ ಸ್ವಾಗತಿಸಿ, ಉಪನ್ಯಾಸಕಿ ಶಾಲಿನಿ ಯು.ಬಿ ನಿರೂಪಿಸಿ ವಂದಿಸಿದರು.




By
ForthFocus™