ಉಡುಪಿ, ಅ.19: ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ರಮೇಶ್ ಕಾಂಚನ್ ಅವರ ನೇತೃತ್ವದಲ್ಲಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು ಅವರ ಮಾರ್ಗದರ್ಶನದಲ್ಲಿ ಅ.18 ರಂದು ಬ್ರಹ್ಮಗಿರಿಯ ಕಾಂಗ್ರೆಸ್ ಭವನದಲ್ಲಿ ಪ್ರಮುಖ ವಿಷಯಗಳ ಕುರಿತು ಸಭೆ ನಡೆಯಿತು.
ಕೇಂದ್ರ ಚುನಾವಣಾ ಆಯೋಗದ ವಿಶೇಷ ತೀವ್ರ ಪರಿಷ್ಕರಣೆ ವಿರುದ್ಧ ರಾಷ್ಟ್ರವ್ಯಾಪಿ ಅನೇಕ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳು, ಜನಪರ ಒಕ್ಕೂಟಗಳು ಪ್ರತಿಭಟನೆ ನಡೆಸುತ್ತಿದ್ದು ಕೇಂದ್ರ ಚುನಾವಣಾ ಆಯೋಗ ಮತ್ತು ಕೇಂದ್ರ ಬಿಜೆಪಿ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ತಾ. 23.10.2026ರ ಶುಕ್ರವಾರದಂದು ಉಡುಪಿಯಲ್ಲಿ ಸಹಬಾಳ್ವೆ ಸೇರಿದಂತೆ ಅನೇಕ ಸಹಭಾಗಿ ಸಂಘಟನೆಗಳ ಬೆಂಬಲದೊಂದಿಗೆ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯು ಈ ಬೃಹತ್ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದು ಅಜ್ಜರಕಾಡಿನ ಗಾಂಧಿ ಪ್ರತಿಮೆಯ ಬಳಿಯಿಂದ ಸರ್ವಿಸ್ ಬಸ್ ನಿಲ್ದಾಣದ ತನಕ ಬೃಹತ್ ಪಾದಯಾತ್ರೆ ನಡೆದು ಸಾರ್ವಜನಿಕ ಪ್ರತಿಭಟನಾ ಸಭೆ ನಡೆಯಲಿದ್ದು ಇದರ ಕುರಿತು ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿ ಹಾಗೂ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನಾಯಕರು ಹಾಗೂ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಮನವಿ ಮಾಡಲಾಯಿತು. ಭಾರತ್ ಜೋಡೋ ಯುವ ಸಂಘದ ಸದಸ್ಯತ್ವ ಪ್ರಕ್ರಿಯೆ ಈಗಾಗಲೇ ನಡೆಯುತ್ತಿದ್ದು ಇನ್ನಷ್ಟು ವೇಗದಲ್ಲಿ ಸದಸ್ಯತ್ವ ಅಭಿಯಾನ ನಡೆಯಬೇಕೆಂದು ಸೇರಿದ ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ವ್ಯಾಪ್ತಿಯ ನಾಯಕರಿಗೆ ತಿಳಿಸಲಾಯಿತು. ತಾ.29.10.2026ರ ಗುರುವಾರದಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ ಅಜ್ಜರಕಾಡು ಸರ್ಕಾರಿ ಆಸ್ಪತ್ರೆಯ ಬಡ ರೋಗಿಗಳ ಸಹಾಯಾರ್ಥವಾಗಿ ಸ್ವಯಂಪ್ರೇರಿತ ಬೃಹತ್ ರಕ್ತದಾನ ಶಿಬಿರ ನಡೆಸುವ ಕುರಿತು ಕೂಡ ಈ ಸಭೆಯಲ್ಲಿ ಚರ್ಚಿಸಲಾಯಿತು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾದ ದಿನೇಶ್ ಪುತ್ರನ್, ಉಡುಪಿ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಹರೀಶ್ ಕಿಣಿ ಹಾಗೂ ಪ್ರಮುಖರಾದ ಅಮೃತ್ ಶೆಣೈ ಈ ಸಭೆಯಲ್ಲಿ ಉಪಸ್ಥಿತರಿದ್ದು ಚರ್ಚಿಸಿದ ಎಲ್ಲಾ ವಿಷಯಗಳ ಬಗ್ಗೆ ತಮ್ಮ ಸಲಹೆ ಹಾಗೂ ಮಾರ್ಗದರ್ಶನ ನೀಡಿದರು.
ಉಡುಪಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಮುಖ ನಾಯಕರು, ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ವಿವಿಧ ಘಟಕಗಳ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




By
ForthFocus™