Home ಸುದ್ಧಿಗಳು ಪ್ರಾದೇಶಿಕ ಮಹಿಳೆಯರ ಸಮಸ್ಯೆಗಳಿಗೆ ಕಾರಣ ಹುಡುಕುವ ಪ್ರಯತ್ನವಾಗಲಿ: ಶ್ಯಾಮಲಾ ಎಸ್ ಕುಂದರ್

ಮಹಿಳೆಯರ ಸಮಸ್ಯೆಗಳಿಗೆ ಕಾರಣ ಹುಡುಕುವ ಪ್ರಯತ್ನವಾಗಲಿ: ಶ್ಯಾಮಲಾ ಎಸ್ ಕುಂದರ್

394
0

ಉಡುಪಿ: ಮಹಿಳೆಯರ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕುವ ಬದಲು ಆ ಸಮಸ್ಯೆಗಳಿಗೆ ಕಾರಣ ಏನೆಂದು ಪತ್ತೆ ಹಚ್ಚುವ ಕೆಲಸವಾಗಬೇಕು ಎಂದು ರಾಷ್ಟ್ರ‍ೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಎಸ್ ಕುಂದರ್ ಹೇಳಿದರು.

ಅವರು ನಗರದ ಬ್ರಹ್ಮಗಿರಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖೆ, ಆರಕ್ಷಕ ಇಲಾಖೆ ಉಡುಪಿ ಹಾಗೂ ಶಿಶು ಅಭಿವೃದ್ಧಿ ಯೋಜನೆ ಉಡುಪಿ ಮತ್ತು ಕಾರ್ಕಳ ಇವರ ಸಹಯೋಗದಲ್ಲಿ ನಡೆದ ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತ ಕಾರ್ಯಾಗಾರದಲ್ಲಿ ಮಾತನಾಡಿದರು.

ದೌರ್ಜನ್ಯಕ್ಕೊಳಗಾದ ಯಾವುದೇ ಮಹಿಳೆ ಸಂಬಂಧಪಟ್ಟ ವ್ಯಾಪ್ತಿಯ ಸಖೀ ಒನ್ ಸ್ಟಾಪ್ ಸೆಂಟರ್‌ನ ಮೂಲಕ ನೆರವು ಪಡೆದುಕೊಳ್ಳಬಹುದು. ಮಹಿಳೆಯರು ಪೊಲೀಸ್ ಠಾಣೆ ಮೆಟ್ಟಿಲೇರುವುದು ತಪ್ಪೆಂಬ ಕೀಳರಿಮೆಯಿಂದ ಹೊರಬಂದು ತಮಗಾದ ಅನ್ಯಾಯದ ವಿರುದ್ಧ ನ್ಯಾಯ ಪಡೆಯಬಹುದಾಗಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡ ಮಹಿಳೆಯರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕು ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಹಿಳೆಯರಿಗೆ ಕಾನೂನಿನ ಅರಿವು ಮೂಡಿಸುವ ಕಾರ್ಯವಾಗಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಸಾಗಾಣಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು, ಇದನ್ನು ತಳ ಮಟ್ಟದಲ್ಲಿಯೇ ತಡೆಯುವ ಕಾರ್ಯವಾಗಬೇಕು. ಮಹಿಳೆಯರು ಮತ್ತು ಮಕ್ಕಳನ್ನು ಸಾಗಣೆ ಮಾಡಿ ವೇಶ್ಯಾವಾಟಿಕೆಯಲ್ಲಿ ತೊಡಗಿಸುವಂತಹ ಕಾರ್ಯವಾಗುತ್ತಿದೆ.

ಈ ಪಿಡುಗನ್ನು ನಿಯಂತ್ರಿಸಲು ಜಿಲ್ಲೆ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಅರಿವು ಮೂಡಿಸಬೇಕು. ಸಾಂತ್ವನ ಕೇಂದ್ರ, ಸ್ತ್ರೀ ಶಕ್ತಿ ಸಂಘಗಳ ಮೂಲಕ ಮಹಿಳೆ ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ಜಾಲವನ್ನು ಪತ್ತೆಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಮಹಿಳೆಯರ ಅಕ್ರಮ ಸಾಗಾಣಿಕೆ ಕಂಡು ಬಂದಲ್ಲಿ 1091 ಮತ್ತು ಮಕ್ಕಳ ಅಕ್ರಮ ಸಾಗಾಣಿಕೆ ಕಂಡುಬಂದಲ್ಲಿ 1098 ಸಹಾಯವಾಣಿಗೆ ದೂರು ನೀಡಬೇಕು ಎಂದರು.

ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಮಹಿಳಾ ಆರಕ್ಷಕಿ ವಯೋಲೆಟ್ ಫೆಮಿನಾ ಹಾಗೂ ಹಿರಿಯ ನ್ಯಾಯವಾದಿ ಮುಂಡ್ಕೂರು ವಿನಯ ಆಚಾರ್ಯ ಉಪಸ್ಥಿತರಿದ್ದರು. ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೀಣಾ ಸ್ವಾಗತಿಸಿ, ಹಿರಿಯ ಮೇಲ್ವಿಚಾರಕಿ ಶಾಂತಿ ಪ್ರಭು ವಂದಿಸಿದರು, ಮೇಲ್ವಿಚಾರಕಿ ಸಿಂಧು ಬೋಜ ನಿರೂಪಿಸಿದರು.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.